ಪ್ರಜ್ವಲ್ ಅಭಿನಯದ ‘ಕರಾವಳಿ’ ಚಿತ್ರವು ಶುಕ್ರವಾರ (ಜುಲೈ 24) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರತಂಡದವರು ಪ್ರಚಾರ ಮತ್ತು ಪ್ರೀಮಿಯರ್ ಪ್ರದರ್ಶನಗಳಲ್ಲಿ ಬ್ಯುಸಿಯಾಗಿದ್ದರೂ, ಪ್ರಜ್ವಲ್ ಮಾತ್ರ ಚಿತ್ರದ ಪ್ರಚಾರಗಳಲ್ಲಿ ಭಾಗವಹಿಸುತ್ತಿಲ್ಲ. ಅದಕ್ಕೆ ಕಾರಣ ನಿರ್ಮಾಪಕ-ನಿರ್ದೇಶಕ ಗುರುದತ್ ಗಾಣಿಗ ಮತ್ತು ಪ್ರಜ್ವಲ್ ದೇವರಾಜ್ ನಡುವಿನ ಮನಸ್ಥಾಪ. ತಮಗೆ ಪೂರ್ತಿ ಸಂಭಾವನೆ ಕೊಟ್ಟಿರಲಿಲ್ಲ ಎಂಬ ಕಾರಣಕ್ಕೆ ಪ್ರಜ್ವಲ್ ಡಬ್ಬಿಂಗ್ ಮಾಡಿರಲಿಲ್ಲ. ಕೊನೆಗೆ ಗುರುದತ್, ಬೇರೆಯವರಿಂದ ಡಬ್ಬಿಂಗ್ ಮಾಡಿಸಿ ಚಿತ್ರ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಇಷ್ಟಕ್ಕೂ ಇವೆಲ್ಲಾ ಯಾಕೆ ಆಗುತ್ತಿದೆ?
ಈ ಕುರಿತು ಕನ್ನಡ ಸ್ಕ್ರೀನ್ಸ್ ಜೊತೆಗೆ ಮಾತನಾಡಿರುವ ಪ್ರಜ್ವಲ್, ‘ಕಳೆದ 20 ವರ್ಷಗಳಿಂದ 40 ಚಿತ್ರಗಳಲ್ಲಿ ನಟಿಸಿದ್ದೇನೆ. ಯಾವತ್ತೂ ನನ್ನ ವೃತ್ತಿಜೀವನದಲ್ಲಿ ಒಂದು ಕಪ್ಪುಚುಕ್ಕೆ ಇರಲಿಲ್ಲ. ‘ಕರಾವಳಿ’ ಚಿತ್ರಕ್ಕಾಗಿ ನಾನು ನನ್ನ ಜೀವನದ ಅಮೂಲ್ಯ ಮೂರು ವರ್ಷಗಳನ್ನು ಇಟ್ಟಿದ್ದೆ. ಆದರೆ, ಅದಕ್ಕೆ ಕೊಡಬೇಕಾದ ಸಂಭಾವನೆಯನ್ನು ನನಗೆ ಕೊಟ್ಟಿರಲಿಲ್ಲ. ಹಾಗಾಗಿ, ನಾನು ಡಬ್ಬಿಂಗ್ ಮಾಡಿರಲಿಲ್ಲ. ಎಲ್ಲವೂ ಸರಿ ಹೋಗಬಹುದು ಅಂದುಕೊಂಡಿದ್ದೆ. ಆದರೆ, ಟ್ರೇಲರ್ ಬಿಡುಗಡೆಯ ಹಿಂದಿನ ದಿನ, ನನ್ನನ್ನು ಬಿಟ್ಟು ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದು ಗೊತ್ತಾಯ್ತು. ಈ ಬಗ್ಗೆ ಬಹಳ ಬೇಸರವಾಯಿತು. ಒಬ್ಬ ಕಲಾವಿದನಿಗೆ ಧ್ವನಿ ಬಹಳ ಮುಖ್ಯ. ಯಾವಾಗ ನನ್ನನ್ನು ಕಡೆಗಣಿಸಿದರೋ, ಆಗ ನಾನು ಸುಮ್ಮನಿದ್ದುಬಿಟ್ಟೆ. ಮನಸ್ಸು ಮಾಡಿದ್ದರೆ ನಾನು ಕಾನೂನಾತ್ಮಕವಾಗಿ ಪ್ರಶ್ನಿಸಬಹುದಾಗಿತ್ತು. ಬೇರೆಯವರಿಂದ ಡಬ್ಬಿಂಗ್ ಮಾಡಿಸಿ ಎಂದು ನಾನು NOC ಕೊಟ್ಟಿಲ್ಲ. ಅದಾಗ್ಯೂ ಅವರು ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನಾನು ಬಿಡುಗಡೆಯನ್ನು ತಡೆಯಬಹುದು. ಆದರೆ, ನನಗೆ ಅದು ಇಷ್ಟವಿಲ್ಲ. ಏಕೆಂದರೆ, ಎಲ್ಲಕ್ಕಿಂತ ಚಿತ್ರ ದೊಡ್ಡದು’ ಎನ್ನುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ಸಾಕಷ್ಟು ದುಡ್ಡು ಕಳೆದುಕೊಂಡಿದ್ದೇನೆ ಎನ್ನುವ ಪ್ರಜ್ವಲ್, ‘ಈ ಚಿತ್ರಕ್ಕಾಗಿ ಮೂರು ವರ್ಷಗಳಿಂದ ಬೇರೆ ಯಾವ ಚಿತ್ರಗಳನ್ನೂ ಒಪ್ಪಿಲ್ಲ. ಇನ್ನು, ಬೇರೆ ನಿರ್ಮಾಪಕರಿಗೆ ಸಹಾಯ ಮಾಡುವುದಕ್ಕೆ ಹೋಗಿ ಲಕ್ಷಾಂತರ ದುಡ್ಡು ಬಿಟ್ಟೆ. ಇದರಿಂದ ನನಗೆ ಸಮಸ್ಯೆ ಶುರುವಾಯಿತು. ನನಗೂ ನನ್ನದೇ ಆದ ಜವಾಬ್ದಾರಿ ಮತ್ತು financial commitmentಗಳಿವೆ. ಹೆಂಡತಿಯಿಂದ ದುಡ್ಡು ಪಡೆದಿದ್ದಾಯಿತು. ಅಪ್ಪನಿಂದ ಪಡೆದಿದ್ದಾಯಿತು. ನನಗೆ ಹಣದ ಅವಶ್ಯಕತೆ ಇದ್ದ ಕಾರಣ ಕೇಳಿದೆ. ಇಷ್ಟಕ್ಕೂ ನಾನು ಬೇರೆ ಯಾವುದೋ ಹಣವನ್ನು ಕೊಡಲಿಲ್ಲ. ಬಾಕಿ ಇದ್ದ ಸಂಭಾವನೆಯನನ್ನು ಕೇಳಿದೆ. ಆದರೆ, ಚಿತ್ರತಂಡದವರು ನನ್ನನ್ನು ದೂರ ಇಟ್ಟರು. ಇನ್ನು, ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಆದ ಗಲಾಟೆಗೂ ನನಗೂ ಸಂಬಂಧವಿಲ್ಲ. ಟ್ರೇಲರ್ ಬಿಡುಗಡೆ ಎಂದು ನನ್ನ ಅಭಿಮಾನಿಗಳು ಹೋಗಿದ್ದಾರೆ. ನನ್ನ ಟ್ರೇಲರ್‍ನಲ್ಲಿ ನನ್ನ ಧ್ವನಿ ಮತ್ತು ಸಮಾರಂಭದಲ್ಲಿ ನಾನು ಇಲ್ಲದಿರುವುದನ್ನು ನೋಡಿ ಬೇಸರವಾಗಿದೆ. ಅದೇ ಕಾರಣಕ್ಕೆ ತಮ್ಮ ಬೇಸರವನ್ನು ಹೊರಹಾಕಿದ್ದಾರೆಯೇ ಹೊರತು, ಅಲ್ಲಿ ನಡೆದಿದ್ದಕ್ಕೂ ನನಗೂ ಸಂಬಂಧವಿಲ್ಲ’ ಎನ್ನುತ್ತಾರೆ.
ಈ ವಿವಾದದಿಂದ ಮಾನಸಿಕವಾಗಿ ಕುಗ್ಗಿರುವುದಾಗಿ ಹೇಳುವ ಪ್ರಜ್ವಲ್, ’20 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಇದುವರೆಗೂ ಒಂದೇ ಒಂದು ವಿವಾದ ಮಾಡಿಕೊಂಡವನಲ್ಲ. ಏಕೆಂದರೆ, ನಾನು ಬೆಳೆದು ಬಂದಿದ್ದೇ ಹಾಗೆ. ಇದ್ದುದರಲ್ಲೇ ಸಂತೋಷವಾಗಿ ಇದ್ದವನು ನಾನು. ಆದರೆ, ಈ ವಿವಾದಿಂದ ಬಹಳ ಬೇಸರವಾಗಿದೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಧೈರ್ಯ ತುಂಬಿದ್ದಾರೆ’ ಎನ್ನುತ್ತಾರೆ ಪ್ರಜ್ವಲ್.
ಹಾಗಾದರೆ, ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? ‘ಇವತ್ತು ಡಬ್ಬಿಂಗ್‍ಗೆ ಕರೆದರೂ ಹೋಗಿ ನನ್ನ ಕೆಲಸ ಮುಗಿಸುವುದಕ್ಕೆ ನಾನು ರೆಡಿ. ಆದರೆ, ಅವರಿಗೆ ಇಷ್ಟವಿಲ್ಲ. ಹಾಗಿರುವಾಗ, ನಾನೇನು ಮಾಡಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಪ್ರಜ್ವಲ್.
ಪ್ರಚಾರದಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ: ಪ್ರಜ್ವಲ್ ದೇವರಾಜ್


