‘ಶಬರಿ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಹಾಡಿನ ಮೂಲಕ ವಾಪಸ್ಸಾಗಿದ್ದಾರೆ ನಿರ್ದೇಶಕ ಶ್ರೀ. ಈ ಬಾರಿ ಅವರು ತಂದೆ-ಮಗಳ ಬಾಂಧವ್ಯ ಸಾರುವ ‘ತಂದಾನಿ ತಾನೋ …’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ-ನಿರ್ದೇಶಕ ಓಂಪ್ರಕಾಶ್ ರಾವ್, ರಘುರಾಮ್, ಬಾಲಾಜಿ ವೀರಾಸ್ವಾಮಿ ಮತ್ತು ಉದ್ಯಮಿ ವಿ. ಬಾಬು ಈ ಹಾಡು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ತಂದಾನಿ ತಾನೋ …’ ಎಂದು ಸಾಗುವ ಈ ಹಾಡಿಗೆ ನಿರ್ದೇಶಕ ಶ್ರೀ ಸಾಹಿತ್ಯ ಬರೆದಿದ್ದು, ಅಶ್ವಿನ್ ಶರ್ಮ ಹಾಡಿದ್ದಾರೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಈ ಹಾಡಿನಲ್ಲಿ ಸಮರ್ಥ್ ಮತ್ತು ಬೇಬಿ ಧನ್ವಿ ಕಾಣಿಸಿಕೊಂಡಿದ್ದಾರೆ.
ಈ ಹಾಡಿನ ಕುರಿತು ಮಾತನಾಡಿದ ಶ್ರೀ, ‘ಈ ಹಾಡಿನಲ್ಲಿ ಎರಡು ಪಾತ್ರಗಳು ಮಾತ್ರ ಕಾಣುತ್ತಿವೆ. ಆದರೆ, ಅದರ ಜೊತೆಗೆ ಜೀಪ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದಕ್ಕೆ ಜೀವವಿಲ್ಲ ಅಷ್ಟೇ. ಇದು ಬರೀ ನಾಲ್ಕೂವರೆ ನಿಮಿಷದ ಹಾಡಲ್ಲ, ಎರಡೂವರೆ ಗಂಟೆಯ ಸಿನಿಮಾ. ಇದು ಕನೆಕ್ಟ್ ಆದರೆ, ಸಿನಿಮಾ ಸಹ ಕನೆಕ್ಟ್ ಆಗುತ್ತದೆ. ಇಡೀ ಚಿತ್ರ ಏನು ಎಂದು ಈ ಹಾಡು ಹೇಳುತ್ತದೆ. ಇಲ್ಲಿ ತಿಳಿಹಾಸ್ಯವಿದೆ, ಎಮೋಷನ್ ಇದೆ ಮತ್ತು ಬಾಂಧವ್ಯ ಇದೆ. ಈ ಹಾಡಿನಲ್ಲಿ ಸಮರ್ಥ್ ಮತ್ತು ಧನ್ವಿ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಧನ್ವಿ ನಟಿಸುವಾಗಲಂತೂ ಚಿಕ್ಕಹುಡುಗಿ ನಟಿಸುತ್ತಿದ್ದಾಳೆ ಎನ್ನುವುದಕ್ಕಿಂತ ಭವಿಷ್ಯದ ಹೀರೋಯಿನ್ ನಟಿಸುತ್ತಿದ್ದಾಳೆ ಎಂದನಿಸಿತು’ ಎಂದರು.

‘ಶಬರಿ’ ಕಾಡುವ ಚಿತ್ರ ಎನ್ನುವ ಶ್ರೀ, ‘ಚಿತ್ರ ನೋಡಿ ಬಂದ ಮೇಲೆ ಕೆಲವರು ತಕ್ಷಣ ಚೆನ್ನಾಗಿಲ್ಲ ಎಂದು ಪ್ರತಿಕ್ರಿಯೆ ಕೊಡುತ್ತಾರೆ. ಆದರೆ, ‘ಶಬರಿ’ ನಿಮ್ಮನ್ನು ಕಾಡುತ್ತದೆ. ಸ್ವಲ್ಪ ಹೊತ್ತು ರೆಸ್ಟ್ ಮಾಡಿ ಯೋಚಿಸಿ, ನಂತರ ಮಾತನಾಡುತ್ತಾರೆ. ಆ ಮಟ್ಟಿಗೆ ಚಚಿತ್ರ ಕಾಡುತ್ತದೆ’ ಎಂದರು.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್, ಸುಧಾಕರ್ ರೆಡ್ಡಿ ಮತ್ತು ವಿಷ್ಣುಕಾಂತ್ ಜೊತೆಯಾಗಿ ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ‘ರಾಣಿ’ ಧಾರಾವಾಹಿ ಖ್ಯಾತಿ ಬಾಲನಟಿ ಧನ್ವಿ, ನೀನಾಸಂ ಅಶ್ವತ್, ಎಂ.ಕೆ ಮಠ ಮುಂತಾದವರು ನಟಿಸಿದ್ದಾರೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.


