‘ಕರಾವಳಿ’ ಚಿತ್ರ ವಿಮರ್ಶೆ: ಕೆಸರಿಗಾಗಿ ಉಸಿರು ಬಿಟ್ಟವರ ಕಥೆ

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಕರಾವಳಿ
ನಿರ್ಮಾಣ: ಗುರುದತ್‍ ಗಾಣಿಗ
ನಿರ್ದೇಶನ: ಗುರುದತ್‍ ಗಾಣಿಗ
ತಾರಾಗಣ: ಪ್ರಜ್ವಲ್‍ ದೇವರಾಜ್‍, ಸಂಪದ ಹುಲಿವಾನ, ಮಿತ್ರ, ರಾಜ್‍ ಬಿ. ಶೆಟ್ಟಿ, ರಮೇಶ್‍ ಇಂದಿರಾ, ‘ಸಿದ್ಲಿಂಗು’ ಶ್ರೀಧರ್, ಗೋವಿಂದೇಗೌಡ, ವಿದ್ಯಾ ಮೂರ್ತಿ ಮುಂತಾದವರು

ಅದೆಷ್ಟೋ ವರ್ಷಗಳಿಂದ ಕಂಬಳದಲ್ಲಿ ಸತತವಾಗಿ ಸೋಲುತ್ತಿದ್ದರೂ, ಒಂದಲ್ಲ ಒಂದು ದಿನ ಕಂಬಳ ಗೆಲ್ಲಬೇಕೆಂಬ ಹಠದಿಂದ ಕುದಿಯುತ್ತಿರುವ ಮಹಾಬಲ ಒಂದು ಕಡೆ. ಮಹಾರಾಜರು ಕೊಟ್ಟಿರುವ ಕುರ್ಚಿ ತನ್ನ ಮನೆ ಬಿಟ್ಟು ಬೇರೆಲ್ಲೂ ಹೋಗಬಾರದು ಎಂಬ ಆದಿಶೇಷ ಇನ್ನೊಂದು ಕಡೆ. ಕಳೆದು ಹೋಗಿರುವ ತನ್ನ ದನವನ್ನು ಹುಟ್ಟುಕುತ್ತಾ ಸುಬ್ರಹ್ಮಣ್ಯದಿಂದ ಕರಾವಳಿಗೆ ಬರುವ ಧನಂಜಯ ಮತ್ತೊಂದು ಕಡೆ. ಈ ಮೂರೂ ಪಾತ್ರಗಳನ್ನು ಬೆಸೆಯುವುದು ಮಹಾವೀರ ಎಂಬ ನಾಲ್ಕನೆಯ ಪಾತ್ರ. ಇಷ್ಟಕ್ಕೂ ಈ ಮಹಾವೀರನಿಗೂ, ಮಿಕ್ಕ ಮೂರು ಪಾತ್ರಗಳಿಗೂ ಇರುವ ಸಂಬಂಧವೇನು?

‘ಕರಾವಳಿ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಆ ಪ್ರದೇಶದ ಸಂಸ್ಕೃತಿ, ಸೊಗಡಿನ ಕಥೆ ಇರಬೇಕೆಂದನಿಸುವುದು ಹೌದು. ‘ಕರಾವಳಿ’ ಚಿತ್ರವು ಆ ಸಂಸ್ಕೃತಿಯ ಹಿನ್ನೆಲೆಯಲ್ಲಿ ನಡೆಯುವ ಎಂದೂ ಮುಗಿಯದ ವೈರತ್ವದ ಮುಂದುವರೆದ ಅಧ್ಯಾಯ ಎಂದು ಹೇಳಬಹುದು. ಇಲ್ಲಿ ಕಂಬಳಕ್ಕಿಂತ, ಅದರ ಹಿಂದಿನ ರಾಜಕೀಯ, ಷಡ್ಯಂತ್ರ, ಪ್ರತಿಷ್ಠೆ, ಸೇಡುಗಳ ಕಥೆಯನ್ನು ಕಟ್ಟಿಕೊಡಲಾಗಿದೆ. ಪ್ರತಿಷ್ಠೆಗಾಗಿ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ತೋರಿಸಲಾಗಿದೆ.

ಚಿತ್ರದ ಒಂದೆಳೆ ಆಸಕ್ತಿ ಹುಟ್ಟಿಸಿದರೂ, ಚಿತ್ರದ ದೊಡ್ಡ ಮೈನಸ್‍ ಎಂದರೆ ಅದು ಚಿತ್ರಕಥೆ. ಇಲ್ಲಿ ಸಾಕಷ್ಟು ವಿಷಯಗಳು ನಡೆಯುತ್ತಲೇ ಇರುತ್ತವೆ. ಆದರೆ, ಯಾವೊಂದು ಎದೆಗೆ ತಟ್ಟುವುದಿಲ್ಲ. ಪಾತ್ರಧಾರಿಗಳ ನೋವು, ಅಸಹನೆ ಯಾವುದೂ ಪ್ರೇಕ್ಷಕರಿಗೆ ಮುಟ್ಟುವುದಿಲ್ಲ. ಅಲ್ಲಲ್ಲಿ ಚಿತ್ರ ಖುಷಿ ಕೊಡುವುದು ಬಿಟ್ಟರೆ, ಮಿಕ್ಕಂತೆ ಪ್ರೇಕ್ಷಕನಿಗೆ ಕನೆಕ್ಟ್ ಆಗದೆ ತನ್ನಿಂತಾನೆ ಸಾಗುತ್ತಿರುತ್ತದೆ. ಸಾಲದ್ದಕ್ಕೆ ಚಿತ್ರವನ್ನು Reverse Screenplayಯಲ್ಲಿ ಕಟ್ಟಿಕೊಡಲಾಗಿದೆ. ಚಿತ್ರ ವರ್ತಮಾನ, ಫ್ಲಾಶ್‍ಬ್ಯಾಕ್‍ ಎಂದು ಪಥ ಬದಲಿಸುತ್ತಲೇ ಇರುತ್ತದೆ. ಚಿತ್ರ ಪ್ರಾರಂಭವಾಗುವುದು ಫ್ಲಾಶ್‍ಬ್ಯಾಕ್‍ನಿಂದ. ನಂತರ ವರ್ತಮಾನಕ್ಕೆ ಬಂದು, ದ್ವಿತೀಯಾರ್ಧದಲ್ಲಿ ಮತ್ತೆ ಫ್ಲಾಶ್‍ಬ್ಯಾಕ್‍ಗೆ ಹೋಗಿ, ವರ್ತಮಾಕ್ಕೆ ಬಂದು, ಕ್ಲೈಮ್ಯಾಕ್ಸ್ ಹೊತ್ತಿಗೆ ಎರಡೂ ಏಕಕಾಲಕ್ಕೆ ಸಾಗುತ್ತಿರುತ್ತದೆ. ಹಾಗಾಗಿ, ಒಂದು ದೃಶ್ಯ ಮನಮುಟ್ಟುವಷ್ಟರಲ್ಲಿ, ಗೇರ್‍ ಬದಲಾಗಿರುತ್ತದೆ. ಇನ್ನು, ಬೇಡದ ಕೆಲವು ದೃಶ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾದರೆ, ಅಗತ್ಯವಾದ ದೃಶ್ಯಗಳಿಗೆ ಪ್ರಾಮುಖ್ಯತೆ ಮಿಸ್‍ ಆಗಿದೆ.

ಈ ಚಿತ್ರಕ್ಕೆ ರಾಜ್‍ ಬಿ. ಶೆಟ್ಟಿ ಎಂಟ್ರಿಯ ನಂತರ, ಚಿತ್ರದ ಹೀರೋ ಯಾರು? ಎಂಬ ಪ್ರಶ್ನೆ ಸಹಜವಾಗಿಯೇ ಬಂದಿತ್ತು. ನಿಜ ಹೇಳಬೇಕೆಂದರೆ, ಚಿತ್ರದ ನಿಜವಾದ ಹೀರೋ ಮಿತ್ರ. ಈ ಚಿತ್ರದ ನಂತರ ತಮ್ಮ ಲಕ್ ಬದಲಾಗುತ್ತದೆ ಎಂದು ಮಿತ್ರ ಹೇಳಿದ್ದರು. ಅವರ ಲಕ್‍ ಬದಲಾಗುತ್ತದೋ ಇಲ್ಲವೋ ಗೊತ್ತಿಲ್ಲ. ಅವರನ್ನು ನೋಡುವ ದೃಷ್ಟಿಕೋನ ಖಂಡಿತಾ ಬದಲಾಗುತ್ತದೆ. ಒಂದೆರಡು ಚಿತ್ರಗಳನ್ನು ಹೊರತುಪಡಿಸಿ ಮಿಕ್ಕಂತೆ ಇದುವರೆಗೂ ಹಾಸ್ಯಮಯ ಪಾತ್ರಗಳಿಗೆ ಸೀಮಿತವಾಗಿದ್ದ ಮಿತ್ರ ಅವರಿಂದ ಬೇರೆ ತರಹದ ಪಾತ್ರಗಳನ್ನೂ ಮಾಡಿಸಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ. ಅವರು ಈ ಪಾತ್ರವನ್ನು ಜೀವಿಸಿದ್ದಾರೆ.

ಅವರ ನಂತರ ಗಮನಸೆಳೆಯುವ ಇನ್ನೊಬ್ಬ ನಟರೆಂದರೆ ಅದು ರಮೇಶ್‍ ಇಂದಿರಾ. ಪ್ರತಿಷ್ಠೆಗಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗುವ ಕ್ರೂರ ಹಠವಾದಿಯಾಗಿ ರಮೇಶ್ ಇಂದಿರಾ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಮಹಾವೀರನಾಗಿ ಕಾಣಿಸಿಕೊಂಡಿರುವ ರಾಜ್‍ ಬಿ. ಶೆಟ್ಟಿ ತೆರೆಯ ಮೇಲೆ ಇರುವುದು ಸ್ವಲ್ಪ ಹೊತ್ತಾದರೂ, ಚಿತ್ರದ ಜೀವಾಳ ಅವರೇ. ತೆರೆಯ ಮೇಲೆ ಅವರಿಲ್ಲದಿದ್ದರೂ, ಅವರ ಪಾತ್ರದ ಬಗ್ಗೆ ಚಿತ್ರದ ಪೂರಾ ಚರ್ಚೆ ಆಗುತ್ತಲೇ ಇರುತ್ತದೆ ಎಂದರೆ ಅವರ ಪಾತ್ರ ಎಂಥದ್ದು ಎಂಬುದು ಅರ್ಥವಾಗುತ್ತದೆ. ಮಿಕ್ಕಂತೆ ಗೋವಿಂದೇಗೌಡ, ‘ಸಿದ್ಲಿಂಗು’ ಶ್ರೀಧರ್‍, ವಿದ್ಯಾ ಮೂರ್ತಿ ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನಾಯಕಿಯರಾದ ಸಂಪದ ಮತ್ತು ಸುಶ್ಮಿತಾ ಭಟ್‍ ಇಬ್ಬರಿಗೂ ಹೆಚ್ಚು ಕೆಲಸವಿಲ್ಲ.

ಇನ್ನು, ಪ್ರಜ್ವಲ್‍ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರ ನೋಡಿದವರು ಇಷ್ಟೇನಾ ಎನುವುದು ಖಂಡಿತಾ. ಚಿತ್ರತಂಡದವರ ಜಗಳದ ನಂತರ ಪ್ರಜ್ವಲ್‍ ಪಾತ್ರವನ್ನು ಕಡಿತಗೊಳಿಸಲಾಯಿತೋ ಅಥವಾ ಮೊದಲಿನಿಂದಲೂ ಅವರ ಪಾತ್ರಕ್ಕಿದ್ದ ಮಹತ್ವ ಅಷ್ಟೇನಾ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಪ್ರಜ್ವಲ್‍ಗೆ ಅಭಿನಯಿಸುವುದಕ್ಕೆ ವಿಶೇಷವಾಗಿ ಏನೂ ಇಲ್ಲ. ಅವರ ಪಾತ್ರಕ್ಕೆ ಹೆಚ್ಚು ಸಂಭಾಷಣೆಗಳೂ ಇಲ್ಲ. ಇರುವುದರಲ್ಲೇ ಅವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಕಂಬಳ ಹಿನ್ನೆಲೆಯ ಚಿತ್ರವಾದ್ದರಿಂದ ಪ್ರಜ್ವಲ್‍ಗೆ ಕೋಣ ಓಡಿಸುವ ದೃಶ್ಯಗಳಿರಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಹೋದರೆ ನಿರಾಶೆ ಖಂಡಿತಾ.

ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಅಭಿಮನ್ಯು ಸದಾನಂದನ್‍ ಛಾಯಾಗ್ರಹಣ, ಸಚಿನ್‍ ಬಸ್ರೂರು ಸಂಗೀತ ಚಿತ್ರದ ಪ್ಲಸ್‍ಗಳು. ಸಂಭಾಷಣೆಗಳು ಸಹ ಗಮನಸೆಳೆಯುತ್ತವೆ. ಒಟ್ಟಾರೆ, ‘ಕರಾವಳಿ’ಯ ಸಂಸ್ಕೃತಿ, ಕಂಬಳದ ಬಗ್ಗೆ ಆಸಕ್ತಿ ಇರುವವರು ಈ ಚಿತ್ರವನ್ನು ನೋಡಬಹುದು.

‘ಹುಡ್ಗೀರ್ ಡೇಂಜರಸ್‍ …’ ಅಂತ ಹಾಡಿ, ಕುಣಿದ ಅಯೋಗ್ಯ …

Discover more from KannadaScreens

Subscribe now to keep reading and get access to the full archive.

Continue reading