ಶ್ರೀನಗರ ಕಿಟ್ಟಿ ಗಾಯಕರಾಗಿದ್ದಾರೆ. ‘ವೇಷಗಳು’ ಚಿತ್ರಕ್ಕಾಗಿ ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಕಾಣಣ್ಣ …’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡನ್ನು ಕೌಶಿಕ್ ಹರ್ಷ ಮತ್ತು ಡಾ. ಚೇತನ್ ಸದಾನಂದ ಅವರು ಬರೆದಿದ್ದು, ಕೌಶಿಕ್ ಹರ್ಷ ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚೆಗೆ ಶ್ರೀನಗರ ಕಿಟ್ಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಹಾಡಿದ್ದ ಹಾಡು ಬಿಡುಗಡೆ ಮಾಡಲಾಯಿತು. ರವಿ ಬೆಳಗೆರೆ ಅವರ ಸಣ್ಣಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಬಸಪ್ಪ ಹಾಗೂ ಬಸಮ್ಮ ಜೋಗತಿ ಹೀಗೆ ಎರಡು ಶೇಡ್ ಇರುವ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ 12 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ರಾಜ್ ಗುರು ದತ್ತರಾಜ್ ಅವರ ಸಂಭಾಷಣೆ, ಅಕ್ಷಯ್ ಪಿ. ರಾವ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಅಂಕಿತಾ ಅಮರ್, ಶರತ್ ಲೋಹಿತಾಧ್ವ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕಿಶನ್ ರಾವ್, ‘ಸದ್ಯ ಒಂದು ಹಂತದ ಚಿತ್ರೀಕರಣ ಮಾತ್ರ ಮುಗಿದಿದೆ. ಕಿಟ್ಟಿ ಭಾಗದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಹಾಗೂ ಉತ್ತರ ಭಾರತದ ಮಹಾಕಾಲೇಶ್ವರ ಮುಂತಾದ ಕಡೆ ಹೋಗಬೇಕಾಗಿದೆ. ಚಿತ್ರದಲ್ಲಿ ಬಹುತೇಕ ಬಳ್ಳಾರಿ ಕನ್ನಡ ಭಾಷೆಯನ್ನು ಬಳಸಲಾಗಿದೆ’ ಎಂದು ಮಾಹಿತಿ ನೀಡಿದರು.
ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ, ‘ಇದೊಂದು ತತ್ವಪದ. ಚಿತ್ರದ ಕಥೆಯನ್ನು ಹೇಳದೆ, ಒಂದಿಷ್ಟು ಮಹತ್ವದ ವಿಷಯಗಳನ್ನು ಹೇಳಬೇಕು ಎಂದು ಮಾಡಿರುವ ಹಾಡಿದು. ಕಿಟ್ಟಿ ಅವರ ಕೇವಲ ಮೂರು ಗಂಟೆಯೊಳಗೆ ಈ ಹಾಡನ್ನು ಹಾಡಿದರು’ ಎಂದು ಹೇಳಿದರು.
ವಿಶೇಷವೆಂದರೆ, ಅಂದು ಬರೀ ‘ವೇಷಗಳು’ ಚಿತ್ರದ ಪತ್ರಿಕಾಗೋಷ್ಠಿಯಷ್ಟೇ ಅಲ್ಲ, ಒಟ್ಟು ಮೂರು ಚಿತ್ರಗಳ ಪತ್ರಿಕಾಗೋಷ್ಠಿಗಳು ನಡೆದವು. ‘ವೇಷಗಳು’ ಚಿತ್ರದ ಹಾಡಿನ ಜೊತೆಗೆ ‘ಲವ್ ಕೇಸ್’ ಚಿತ್ರದ ಕಿಟ್ಟಿ ಅವರ ಪೋಸ್ಟರ್ ಮತ್ತು ‘ಮದರ್ ಲವ್’ ಚಿತ್ರದ ಅವರ ಪಾತ್ರವನ್ನು ಪರಿಚಯ ಮಾಡಿಸುವ ಟೀಸರ್ ಬಿಡುಗಡೆ ಮಾಡಲಾಯಿತು.


