ಶಾಹೀದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸಾನೋನ್ ಅಭಿನಯದ ‘ಕಾಕ್ಟೇಲ್ 2’ ಚಿತ್ರವು ಜೂನ್ 19ರಂದು ಜಗತ್ತಿನಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಕಾಕ್ಟೇಲ್’ ಚಿತ್ರ ಯಶಸ್ಸು ಕಂಡಿದ್ದರಿಂದ, ಸಹಜವಾಗಿಯೇ ಈ ಚಿತ್ರದ ಬಗ್ಗೆಯೂ ಒಂದಿಷ್ಟು ನಿರೀಕ್ಷೆಗಳಿವೆ.
ಈ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ತೆಗೆದುಕೊಂಡ ಸಂಭಾವನೆ ಎಷ್ಟು? ಇಂಥದ್ದೊಂದು ಚರ್ಚೆ ಸದ್ಯಕ್ಕೆ ನಡೆಯುತ್ತಿದೆ. ಮೂಲಗಳ ಪ್ರಕಾರ, ‘ಕಾಕ್ಟೇಲ್ 2’ ಚಿತ್ರದಲ್ಲಿ ನಟಿಸುವುದಕ್ಕೆ ರಶ್ಮಿಕಾ ಪಡೆದ ಸಂಭಾವನೆ 15 ಕೋಟಿಯಂತೆ.
ರಶ್ಮಿಕಾ ಇದುವರೆಗೂ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ದೊಡ್ಡ ಯಶಸ್ಸು ಕಂಡಿದ್ದು ‘ಅನಿಮಲ್’. ಈ ಚಿತ್ರವು ಬರೀ ರಣಬೀರ್ ಕಪೂರ್ ವೃತ್ತಿಜೀವನಕ್ಕಷ್ಟೇ ಅಲ್ಲ, ರಶ್ಮಿಕಾ ವೃತ್ತಿಜೀವನಕ್ಕೂ ದೊಡ್ಡ ಶಕ್ತಿ ತುಂಬಿದೆ. ಈ ಚಿತ್ರದಲ್ಲಿ ರಶ್ಮಿಕಾಗೆ ಬರೀ ಬಾಲಿವುಡ್‍ನಲ್ಲಷ್ಟೇ ಅಲ್ಲ ಬೇರೆ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದ್ದಷ್ಟೇ ಅಲ್ಲ, ಆಕೆಯ ಸಂಭಾವನೆ ಸಹ ಹೆಚ್ಚಾಗಿದೆ.

‘ಅನಿಮಲ್’ಗೂ ಮುನ್ನ ಚಿತ್ರವೊಂದಕ್ಕೆ ರಶ್ಮಿಕಾ ಎರಡೂವರೆ, ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿತ್ತು. ‘ಅನಿಮಲ್’ ನಂತರ ಅದು ನಾಲ್ಕೂವರೆಯಿಂದ ಐದು ಕೋಟಿಗೆ ಏರಿತು ಎಂಬ ಸುದ್ದಿ ಹರಡಿತ್ತು. ಆದರೆ, ಇದು ಸುಳ್ಳು ಎಂದು ಸ್ವತಃ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
‘ನಾನು ಅಷ್ಟೊಂದು ಸಂಭಾವನೆ ಪಡೆಯುತ್ತಿದ್ದೀನಾ? ಇದನ್ನೆಲ್ಲಾ ನೋಡಿದ ಮೇಲೆ ನಿಜಕ್ಕೂ ಅಷ್ಟೊಂದು ಸಂಭಾವನೆ ಕೇಳಬೇಕು ಅಂತನಿಸುತ್ತಿದೆ ಮತ್ತು ನಿರ್ಮಾಪಕರು ಕೇಳಿದರೆ, ಹೊರಗೆ ಸೋಷಿಯಲ್ ಮೀಡಿಯಾ ನೋಡಿ ಅಂತ ಹೇಳಬೇಕು ಅಂತನಿಸುತ್ತಿದೆ. ಸೋಷಿಯಲ್ ಮೀಡಿಯಾದವರ ಮಾತು ನಿಜ ಮಾಡಬೇಕು ಅಂತ ನನಗೂ ಆಸೆ ಇದೆ. ಏನು ಮಾಡಲಿ?’ ಎಂದು ಪ್ರಶ್ನಿಸುವ ಮೂಲಕ, ತಮ್ಮ ಸಂಭಾವನೆ ಏರಿದೆ ಎನ್ನುವವರ ಕಾಲೆಳೆದಿದ್ದಾರೆ.
ಹೀಗಿರುವಾಗಲೇ, ‘ಕಾಕ್ಟೇಲ್ 2’ ಚಿತ್ರಕ್ಕೆ ರಶ್ಮಿಕ 15 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ, ಬಾಲಿವುಡ್‍ನಲ್ಲಿ ಇತ್ತೀಚೆಗೆ ಕೇಳಿ ಬಂದಿರುವ ಸುದ್ದಿ ಎಂದರೆ, ಆ ಚಿತ್ರಕ್ಕೆ ರಶ್ಮಿಕಾ ಪಡೆದ ಸಂಭಾವನೆ ಆರು ಕೋಟಿ ರೂ. ಮಾತ್ರ. ‘ಕಾಕ್ಟೇಲ್ 2’ ಚಿತ್ರಕ್ಕೆ ಶಾಹೀದ್ ಕಪೂರ್ 21 ಕೋಟಿ ರೂ. ಪಡೆದರೆ ಕೃತಿ ಸನಾನ್ ಮತ್ತು ರಶ್ಮಿಕಾ ತಲಾ ಎಂಟು ಮತ್ತು ಆರು ಕೋಟಿ ಪಡೆದಿದ್ದಾರಂತೆ.
ಇಷ್ಟಕ್ಕೂ ಯಾವುದು ನಿಜ? ಯಾವುದು ಸುಳ್ಳು? ಯಾವುದಕ್ಕೂ ರಶ್ಮಿಕಾ ಇನ್ನೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಒಳ್ಳೆಯದು.


