ಸನ್ನಿ ಡಿಯೋಲ್ ಅಭಿನಯದ ‘ಬಟ್ವಾರಾ 1947’ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಚಿತ್ರಕ್ಕೆ ಆಹಾ, ಓಹೋ ಎನ್ನುವಂತಹ ಪ್ರತಿಕ್ರಿಯೆಯೇನೂ ಪ್ರೇಕ್ಷಕರಿಂದ ವ್ಯಕ್ತವಾಗಲಿಲ್ಲ. ಆದರೂ ಈ ಕಾಲಕ್ಕೆ ಒಂದೊಳ್ಳೆಯ ಸಂದೇಶ ಇರುವ ಚಿತ್ರ ಎಂಬ ಮಾತು ಕೇಳಿಬರುತ್ತಿದೆ.
ಈ ವರ್ಷ ಬಿಡುಗಡೆ ಆಗುತ್ತಿರುವ ಸನ್ನಿ ಡಿಯೋಲ್ ಅಭಿನಯದ ಮೂರನೇ ಚಿತ್ರ ಇದು. ಇದಕ್ಕೂ ಮೊದಲು ಸನ್ನಿ ಅಭಿನಯದ ‘ಇಕ್ಕಾ’ ಮತ್ತು ‘ಬಾರ್ಡರ್ 2’ ಚಿತ್ರಗಳು ಬಿಡುಗಡೆ ಆಗಿದ್ದವು. ‘ಈಗ ಬಟ್ವಾರಾ 1947’ ಬಂದಿದೆ. ಕೆಲವು ತಿಂಗಳುಗಳ ನಂತರ ‘ರಾಮಾಯಣ’ ಬರಲಿದೆ. ಈ ಚಿತ್ರದಲ್ಲಿ ಅವರು ಆಂಜನೇಯನ ಪಾತ್ರ ಮಾಡುತ್ತಿದ್ದಾರೆ. ಬಹುಶಃ ಅವರು ಇನ್ನ್ಯಾರದ್ದೋ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದು ಬಹಳ ವಿರಳ.
ಸನ್ನಿ ಡಿಯೋಲ್ ಬಗ್ಗೆ ಒಂದು ಗಮನಾರ್ಹ ಅಂಶವೆಂದರೆ, ಸುಧೀರ್ಘ ಸಮಯ ಬಾಲಿವುಡ್‍ನಲ್ಲಿ ಹೀರೋ ಆಗಿಯೇ ಮಿಂಚಿದ ನಟ ಎಂದರರೆ ಅವರು. 1983ರಲ್ಲಿ ಬಿಡುಗಡೆಯಾದ ‘ಬೇತಾಬ್’ ಚಿತ್ರದ ಮೂಲಕ ಹೀರೋ ಆದ ಧರ್ಮೇಂದ್ರರ ಮಗ ಸನ್ನಿ, ಈಗಲೂ ಹೀರೋ ಆಗಿಯೇ ಮುಂದುವರೆದಿದ್ದಾರೆ. ಅವರ ಹಿರಿಯರು, ಸಮಕಾಲೀನರು, ನಂತರ ಬಂದ ಹೀರೋಗಳು ಹೀರೋಗಿರಿಗೆ ವಿದಾಯ ಹೇಳಿ, ಬೇರೆ ಹೀರೋಗಳ ಚಿತ್ರಗಳಲ್ಲಿ ಪೋಷಕ ಪಾತ್ರಗಳತ್ತ ವಾಲಿ ಯಾವುದೋ ಕಾಲವಾಯಿತು. ಆದರೆ, ಸನ್ನಿ ಡಿಯೋಲ್ ಮಾತ್ರ 43 ವರ್ಷಗಳಿಂದ ಹೀರೋ ಆಗಿಯೇ ಮುಂದುವರೆದಿದ್ದಾರೆ.

ಸನ್ನಿಗೆ ನಟನೆ ಬರುವುದಿಲ್ಲ, ಅವರು ಆ್ಯಕ್ಷನ್ ಚಿತ್ರಗಳಿಗೆ ಮಾತ್ರ ಲಾಯಕ್ಕು, ಅವರದ್ದು ಭಾವನೆಯೇ ಇಲ್ಲದ wooden face, ಢಾಯ್ ಕಿಲೋ ಕಾ ಹಾಥ್ (ಎರಡೂವರೆ ಕೆಜಿಯ ಕೈ) ಅವರ ಆಸ್ತಿ ಎಂದು ಯಾರು ಎಷ್ಟೇ ಆಡಿಕೊಂಡರೂ, ಸನ್ನಿ ಡಿಯೋಲ್ ಹೆಚ್ಚು ತಲೆ ಕೆಡಸಿಕೊಳ್ಳದೆಯೇ, ತಮ್ಮ ಪಾಡಿಗೆ ತಾವು ಅಭಿನಯಿಸುತ್ತಲೇ ಇದ್ದಾರೆ ಮತ್ತು ಈಗಲೂ ಹೀರೋ ಆಗಿಯೇ ಮುಂದುವರೆದಿದ್ದಾರೆ. ಈ ವಯಸ್ಸಿನಲ್ಲೂ ಅವರಿಗೊಂದು ಅಭಿಮಾನಿ ವರ್ಗವಿದೆ ಮತ್ತು ಅವರ ಚಿತ್ರಗಳು ಒಳ್ಳೆಯ ಕಲೆಕ್ಷನ್ ಕಾಣುತ್ತಿವೆ. ಅದಕ್ಕೆ ಉದಾಹರಣೆ ‘ಗದರ್ 2’. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಜಗತ್ತಿನಾದ್ಯಂತ 690 ಕೋಟಿ ರೂ. ಗಳಿಕೆ ಮಾಡಿತ್ತು. ಆ ನಂತರ ಬಿಡುಗಡೆಯಾದ ಚಿತ್ರಗಳೂ ತೀರಾ ನಿರ್ಮಾಪಕರ ಕೈ ಕಚ್ಚಿಲ್ಲ. ಅದೇ ಕಾರಣಕ್ಕೆ ಸನ್ನಿ ಡಿಯೋಲ್, ಚಿತ್ರರಂಗಕ್ಕೆ ಬಂದು 43 ವರ್ಷಗಳಾದರೂ ಓಡುವ ಕುದುರೆಯೇ.
ದಕ್ಷಿಣ ಭಾರತದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಹೀರೋ ಆಗಿಯೇ ಉಳಿದಿರುವ ಕೆಲವರು ಸಿಗುತ್ತಾರೆ. ರಜನಿಕಾಂತ್, ಕಮಲ್ ಹಾಸನ್, ಶಿವರಾಜಕುಮಾರ್, ಮೋಹನ್ ಲಾಲ್, ಮಮ್ಮೂಟ್ಟಿ, ಚಿರಂಜೀವಿ ಮುಂತಾದವರು ನಾಲ್ಕೈದು ದಶಕಗಳ ನಂತರವೂ ನಾಯಕನಾಗಿಯೇ ಮುಂದುವರೆದಿದ್ದಾರೆ. ಆದರೆ, ಬಾಲಿವುಡ್ ನಟರ ಪೈಕಿ ನಾಲ್ಕು ದಶಕಗಳಿಗೂ ಹೆಚ್ಚು ಸಮಯ ಹೀರೋ ಆಗಿಯೇ ಮುಂದುವರೆದಿದ್ದು ಕೇವಲ ಇಬ್ಬರು ಮಾತ್ರ. ಒಬ್ಬರು ಸನ್ನಿ ಡಿಯೋಲ್. ಇನ್ನೊಬ್ಬರು ದೇವ್ ಆನಂದ್.


