ರಕ್ಷಿತ್ ಶೆಟ್ಟಿ ಎಲ್ಲಿ?
ಇಂಥದ್ದೊಂದು ಪ್ರಶ್ನೆಯನ್ನು ಬರೀ ಚಿತ್ರರಂಗದವರಷ್ಟೇ ಅಲ್ಲ, ಸಿನಿಮಾ ಪ್ರೇಮಿಗಳು ಕೇಳುತ್ತಲೇ ಇದ್ದಾರೆ. ಎರಡೂವರೆ ವರ್ಷಗಳ ಹಿಂದೆ ‘ಸಪ್ತ ಸಾಗರದಾಚೆ ಎಲ್ಲೋ 2’ ಚಿತ್ರದ ಬಿಡುಗಡೆಯಾದ ನಂತರ ರಕ್ಷಿತ್ ಕಾಣಿಸಿಕೊಂಡಿದ್ದು ಕಡಿಮೆಯೇ. ಇನ್ನು, ಅವರ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಘೋಷಣೆಯಾಗಿ ಐದು ವರ್ಷಗಳಾಗಿವೆ. ಆದರೆ, ಸಿನಿಮಾ ಇದುವರೆಗೂ ಪ್ರಾರಂಭವಾಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇಷ್ಟರಲ್ಲಿ ಶುರುವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಇದುವರೆಗೂ ಚಿತ್ರದ ಸುದ್ದಿಯೇ ಇಲ್ಲ.
ಇಷ್ಟಕ್ಕೂ ರಕ್ಷಿತ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರು ಉಡುಪಿಯಲ್ಲಿದ್ದಾರೆ, ಅಮೇರಿಕಾದಲ್ಲಿ ಕೂತು ಚಿತ್ರಕಥೆ ಬರೆಯುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕತೆಯತ್ತ ಹೆಚ್ಚು ವಾಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ರಕ್ಷಿತ್ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ರಿಷಭ್ ಶೆಟ್ಟಿ ತಮ್ಮ ಆಪ್ತಮಿತ್ರ ಸದ್ಯದಲ್ಲೇ ವಾಪಸ್ಸು ಬರುತ್ತಾರೆ ಎಂದು ಸುಳಿವು ನೀಡಿದ್ದಾರೆ.
ಶನಿವಾರ, ರಕ್ಷಿತ್ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ. ಈ ಸಂದರ್ಭದಲ್ಲಿ ರಿಷಭ್ ತಮ್ಮ ಗೆಳೆಯನಿಗೆ ಶುಭ ಹಾರೈಸಿದ್ದಾರೆ. ‘ಬದಲಾಗುತ್ತಿರುವ ಮುಖಗಳ ಪೈಕಿ ಈ ಗೆಳೆಯ ನನ್ನ ಜೀವನದ ಒಂದು ಖಾಯಂ ಅಧ್ಯಾಯ. ಹುಟ್ಟುಹಬ್ಬದ ಶುಭಾಶಯಗಳು ಮಗ. ಮೊನ್ನೆ ತಾನೆ ಭೇಟಿ ಮಾಡ್ಕೊಂಡು ಬಂದೆ. ಸದ್ಯದಲ್ಲೇ ಅವನು ವಾಪಸ್ಸು ಬರುತ್ತಾನೆ …’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
In the world of passing faces this friend became a permanent chapter .. Happy birthday maga @rakshitshetty
ಮೊನ್ನೆ ತಾನೆ meet ಮಾಡ್ಕೊಂಡು ಬಂದೆ .. he will be back soon pic.twitter.com/5gZb0k504B
— Rishab Shetty (@shetty_rishab) June 6, 2026
ಇನ್ನು, ಇತ್ತೀಚೆಗೆ ‘ಉಳಿದವರು ಕಂಡಂತೆ’ ಬಿಡುಗಡೆಯಾಗಿ 12 ವರ್ಷಗಳಾಗಿವೆ. ಅದನ್ನು ನೆನಪಿಸಿಕೊಳ್ಳುತ್ತಾ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ನೆಟ್ಟಿಗರು ತಮ್ಮದೇ ರೀತಿಯಲ್ಲಿ ರಕ್ಷಿತ್‍ಗೆ ಬೇಗಬೇಗ ಚಿತ್ರ ಮಾಡುವುದಕ್ಕೆ ಹೇಳಿದ್ದರು.
‘ರಿಚರ್ಡ್ ಆ್ಯಂಟೋನಿ’ ಚಿತ್ರವು ಇದೇ ಶತಮಾನದಲ್ಲಿ ಬರುತ್ತದಾ ಅಥವಾ ಮುಂದಿನ ಜನ್ಮದವರೆಗೂ ಕಾಯಬೇಕಾ? ಎಂದು ಪ್ರಶ್ನಿಸಿದರೆ, ಚಿತ್ರ ಅನೌನ್ಸ್ ಮಾಡೋಕೆ ಇಷ್ಟು ವರ್ಷ ಅಂದರೆ, ಇನ್ನು ಶೂಟಿಂಗ್ ಮಾಡೋಕೆ ಎಷ್ಟು ಸಮಯ ತಗೋತೀಯಾ ಬ್ರೋ ಎಂದಿದ್ದಾರೆ. ಒಬ್ಬರಂತೂ, ‘ಲೋ ಅಣ್ಣ ಇದನ್ನು ಬಿಟ್ಟು ಹೊರಗೆ ಬಾರಪ್ಪ, ಪ್ರಪಂಚ ಮುಂದೆ ಮುಂದೆ ಹೋಗುತ್ತಿದೆ’ ಎಂದರೆ, ‘ಈ ತರಹದ ಪೋಸ್ಟ್ಗಳನ್ನು ನೋಡಿ ಸಾಕಾಗಿದೆ. ಇದನ್ನು ಬಿಟ್ಟು ಬೇರೆ ಏನಾದರೂ ಹೊಸದನ್ನು ಶುರು ಮಾಡಿ’ ಎಂದಿದ್ದಾರೆ. ‘ಅದೇ ಕಾಲದಲ್ಲಿ ಕಳೆದು ಹೋಗಿ ನಿಮ್ಮ ಪ್ರತಿಭೆ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಒಬ್ಬರೆಂದರೆ, ‘ಇನ್ನು ಎಷ್ಟು ಸಮಯ ಚಿತ್ರಕಥೆ ಬರೆಯುವುದರಲ್ಲೇ ಕಳೆಯುತ್ತೀರಾ? ನಿಮ್ಮ ನಂತರ ಬಂದವರೆಲ್ಲಾ ಪ್ಯಾನ್ ಇಂಡಿಯಾ ಸ್ಟಾರ್‍ಗಳಾಗಿದ್ದಾರೆ, ನೀವು ಮಾತ್ರ ದಶಕಗಳಿಂದ ಕೂತು ಬರೆಯುತ್ತಲೇ ಇದ್ದೀರಾ’ ಎಂದ ಇನ್ನೊಬ್ಬರು ಹೇಳಿದ್ದಾರೆ.


