ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಡಾ. ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಡಾ. ವಿಷ್ಣು ಸೇನಾ ಸಮಿತಿಯು ದೊಡ್ಡ ಮಟ್ಟದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಆಯೋಜಿಸುವುದಕ್ಕೆ ಮುಂದಾಗಿತ್ತು. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ. ಕಳೆದ ವರ್ಷದ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಸಂಭ್ರಮವು ವಿವಾದದಲ್ಲೇ ಮುಗಿದು ಹೋಯಿತು.
ಈ ಬಾರಿ ಹಾಗಾಗಬಾರದೆಂಬ ನಿಟ್ಟಿನಲ್ಲಿ, ಡಾ. ವಿಷ್ಣು ಸೇನಾ ಸಮಿತಿಯು ಇದೇ ಸೆ. 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮವನ್ನು ಬೆಂಗಳೂರಲ್ಲಿ ಆಯೋಜಿಸಿದೆ. ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿಷಯವನ್ನು ಹಂಚಿಕೊಳ್ಳುವ ಸಲುವಾಗಿ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಹಿರಿಯ ನಟ ಸುಂದರ್ ರಾಜ್ ಮುಂತಾದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಾಹಿತ್ಯ ಕ್ಷೇತ್ರದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ದಿನವಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ಡಾ. ವಿಷ್ಣುವರ್ಧನ್ ಅವರ ಜೀವನ ಮತ್ತು ಸಾಧನೆಗಳನ್ನು ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಾ. ವಿಷ್ಣುವರ್ಧನ್ ಅಮೃತಮಹೋತ್ಸದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು.


