ಕುಮಾರ್ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಅಭಿನಯದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ನಾಯಕನ ಪರಿಚಯಿಸುವ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಯಲಹಂಕ ಶಾಸಕ ವಿಶ್ವನಾಥ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ನಾಯಕನ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ನಿರ್ಮಾಪಕರು ನಮ್ಮ ಕ್ಷೇತ್ರದವರು. ಇಷ್ಟು ಹಣ ಇಟ್ಟಿದ್ದಾರೆ ಎಂದು ಗೊತ್ತಿರಲಿಲ್ಲ. ನನ್ನ ಕೈ ಚೆನ್ನಾಗಿದೆ, ನಾನು ಅಂಗಡಿ ಟೇಪ್ ಕಟ್ ಮಾಡಿದ್ರೆ ವ್ಯಾಪಾರ ಚೆನ್ನಾಗುತ್ತೆ ಅಂತಾರೆ. ಇವತ್ತು ನನ್ನಿಂದ ಸಿನಿಮಾದ ಟೀಸರ್ ಬಿಡುಗಡೆ ಮಾಡಿಸಿದ್ದಾರೆ. ನಾನು ಈ ಹಿಂದೆ ಒಂದು ಸಿನಿಮಾದಲ್ಲಿ ಕಷ್ಟಪಟ್ಟು ನಟಿಸಿದ್ದೆ, ಆ ಚಿತ್ರ ಎರಡೇ ದಿನಕ್ಕೆ ಕ್ಲೋಸ್ ಆಗೋಯ್ತು. ಇವತ್ತು ಈ ಚಿತ್ರತಂಡದವರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ’ ಎಂದರು. ಚಿತ್ರದ ಮೊದಲ ಟಿಕೆಟ್ ನೀವೇ ಯಾಕೆ ಪಡೆದು ಚಿತ್ರ ನೋಡಬಾರದು ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಬರೀ ಒಂದು ಟಿಕೆಟ್ ಯಾಕೆ? ಇಡೀ ಚಿತ್ರಮಂದಿರ ಬುಕ್ ಮಾಡಿ ಎಲ್ಲರನ್ನೂ ಕರೆದುಕೊಂಡು ಹೋಗಿ ಈ ಚಿತ್ರ ನೋಡುವೆ’ ಎಂದರು.
ಈ ಚಿತ್ರ ತನ್ನೊಬ್ಬನಿಂದ ಮಾತ್ರ ನಡೆಯುವುದಿಲ್ಲ ಎಂದ ಕುಮಾರ್ ಬಂಗಾರಪ್ಪ, ‘ಇಲ್ಲಿ ಪ್ರತಿ ಪಾತ್ರದಲ್ಲೂ ವಿಶೇಷತೆ ಇದೆ. ಹೀರೋ ಎಂದ ಮಾತ್ರಕ್ಕೆ ನನ್ನಿಂದಲೇ ಚಿತ್ರ ನಡೆಯುವುದಿಲ್ಲ. ಇಡೀ ತಂಡ ಶ್ರಮಪಟ್ಟು ಚಿತ್ರ ಮಾಡಿದೆ. ಬಹಳ ವರ್ಷಗಳ ನಂತರ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಂಥಾ ಸಮಯದಲ್ಲಿ ದುಡ್ಡು ಹಾಕುವುದೇ ಕಷ್ಟ. ದೊಡ್ಡ ನಟರ ಚಿತ್ರಗಳೇ ನಡೆಯುತ್ತವೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಹಾಗಿರುವಾಗ, ಈ ಪಾತ್ರಕ್ಕೆ ನೀವೇ ಬೇಕು ಎಂದು ಚಿತ್ರತಂಡ ಅವಕಾಶ ಮಾಡಿಕೊಟ್ಟಿದೆ. ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುವ ಪ್ರಯತ್ನ ಮಾಡಿದ್ದೇನೆ’ ಎಂದರು.

ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿರುವ ಈ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆಯಲ್ಲೇ ನಡೆಸಿರುವುದು ವಿಶೇಷ. ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ, ಹಿರಿಯ ನಟ ದೊಡ್ಡಣ್ಣ ಮುಂತಾದ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ಛಾಯಾಗ್ರಹಣ ಮತ್ತು ನಿರ್ದೇಶನವಿದೆ.


