ಚಿತ್ರ: ಶೇರ್
ನಿರ್ಮಾಣ: ಡಾ. ಸುದರ್ಶನ್ ಸುಂದರ್ ರಾಜ್ (ಬೀದರ್)
ನಿರ್ದೇಶನ: ಪ್ರಸಿದ್ಧ್
ತಾರಾಗಣ: ಕಿರಣ್ ರಾಜ್, ನಮ್ರಿತಾ ಮಲ್ಲ, ಸುರೇಖಾ, ಕ್ರಿಸ್ ರಾಡ್ರಿಗ್, ತನಿಷಾ ಕುಪ್ಪಂಡ, ಬಲ ರಾಜವಾಡಿ, ಶೋಭರಾಜ್, ಯಶ್ ಶೆಟ್ಟಿ ಮುಂತಾದವರು
ಅಲ್ಲಿಯವರೆಗೂ ಶಿವುಗೆ ಅಲ್ಲೇನಾಗುತ್ತಿದೆ ಎಂದು ಗೊತ್ತಿರುವುದಿಲ್ಲ. ತಾನಾಯಿತು, ತನ್ನ ಮಂಡಿಯಾಯಿತು, ಕೂಲಿ ಕೆಲಸವಾಯಿತು, ಸ್ನೇಹಿತರ ಬಳಗವಾಯಿತು ಅಂತ ಬದುಕುತ್ತಿರುತ್ತಾನೆ. ಮಂಡಿ ಸುತ್ತಮುತ್ತ ಅಷ್ಟೆಲ್ಲಾ ಸಾವುಗಳಾದರೂ ಅವನು ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಯಾವಾಗ ತನ್ನ ಗೆಳೆಯನ ಸಾವಾಗುತ್ತದೋ, ಅಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಅರ್ಥವಾಗುತ್ತದೆ. ಅದರ ಹಿಂದೆ ದೊಡ್ಡ ಷಡ್ಯಂತ್ರವಿರುವುದು ಅರಿವಿಗೆ ಬರುತ್ತದೆ. ಇಷ್ಟಕ್ಕೂ ಅದೇನು? ಅದರ ಹಿಂದೆ ಯಾರೆಲ್ಲಾ ಇದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ‘ಶೇರ್’ ನೋಡಬೇಕು.
ಈ ಹಿಂದೆ ಕಿರಣ್ ರಾಜ್ ಅಭಿನಯದಲ್ಲಿ ‘ಭರ್ಜರಿ ಗಂಡು’ ಎಂಬ ಚಿತ್ರ ಮಾಡಿದ್ದ ನಿರ್ದೇಶಕ ಪ್ರಸಿದ್ಧ್, ಈಗ ಕಿರಣ್ ಅಭಿನಯದಲ್ಲಿ ‘ಶೇರ್’ ಚಿತ್ರ ಮಾಡಿದ್ದಾರೆ. ‘ಭರ್ಜರಿ ಗಂಡು’ ತರಹ ಇದು ಸಹ ಒಂದು ಮಾಸ್ ಕಮರ್ಷಿಯಲ್ ಚಿತ್ರವಾಗಿದ್ದು, ಒಂದು ಮಾಫಿಯಾ ಸುತ್ತ ಸುತ್ತುತ್ತದೆ. ಆ ಮಾಫಿಯಾದಿಂದ ಅಮಾಯಕ ಜನ ಹೇಗೆ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ತೋರಿಸಲಾಗಿದೆ.
‘ಶೇರ್’ ಚಿತ್ರದಲ್ಲಿ ಎರಡು ಗುಂಪುಗಳಿವೆ. ಒಳ್ಳೆಯವರ ಗುಂಪಿಗೆ ಶಿವ ನಾಯಕನಾದರೆ, ಕೆಟ್ಟವರ ಗುಂಪಿಗೆ ಗಿಲ್ಲಿ ನಾಯಕ. ಅವರಿಬ್ಬರ ನಡುವಿನ ಸಂಘರ್ಷದಿಂದ ಶುರುವಾಗುವ ಚಿತ್ರದಲ್ಲಿ ಪ್ರೀತಿ, ಸ್ನೇಹ, ನಂಬಿಕೆ ದ್ರೋಹ ಎಲ್ಲವೂ ಇದೆ. ಎಲ್ಲವನ್ನೂ ಕಮರ್ಷಿಯಲ್ ಆಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಪ್ರಸಿದ್ಧ್ ಮಾಡಿದ್ದಾರೆ. ಇಂಥ ಚಿತ್ರಗಳಿಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿರುವುದರಿಂದ, ಆ ಚೌಕಟ್ಟಿನಿಂದ ಹೊರಬರುವುದಕ್ಕೆ ಪ್ರಯತ್ನಿಸಿಲ್ಲ. ಬಿಲ್ಡಪ್, ಅಬ್ಬರದಲ್ಲೇ ಎಲ್ಲವನ್ನೂ ತೂಗಿಸಿದ್ದಾರೆ. ಒಂದಿಷ್ಟು ಒಳ್ಳೆಯ ವಿಷಯಗಳು ಗಾಂಜಾ ನಶೆಯಲ್ಲಿ ಕಳೆದು ಹೋಗಿವೆ. ಮಧ್ಯಂತರದ ಹೊತ್ತಿಗೆ ಪ್ರೇಕ್ಷಕರಿಗೆ ಒಂದು ಸಣ್ಣ ಶಾಕ್ ಆಗುವುದು ಬಿಟ್ಟರೆ ಎಲ್ಲವೂ ನಿರೀಕ್ಷಿಸಿದಂತೆಯೇ ಮತ್ತು ಅಷ್ಟೇ ನಿಧಾನವಾಗಿ ನಡೆಯುತ್ತದೆ. ನೂರಾರು ಮಾಸ್ ಕಮರ್ಷಿಯಲ್ ಚಿತ್ರಗಳನ್ನು ನೋಡಿರುವ ಕನ್ನಡಿಗರಿಗೆ, ಈ ‘ಶೇರ್’ ಹೊಸದೂ ಇಲ್ಲ, ವಿಭಿನ್ನವೂ ಅಲ್ಲ.
ಕಿರಣ್ ರಾಜ್ ಪಾಲಿಗೆ ಇದು ಇನ್ನೊಂದು ಚಿತ್ರ ಎನ್ನುವುದು ಬಿಟ್ಟರೆ ಹೆಚ್ಚೇನೂ ಹೇಳುವುದು ಕಷ್ಟ. ನಾಯಕಿ ನಮ್ರಿತಾ ಮಲ್ಲ ಸುಸ್ತಾದಂತೆ ಕಾಣುತ್ತಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾಗಿರುವ ನಿರ್ಮಾಪಕ ಕ್ರಿಸ್ ರಾಡ್ರಿಗ್ ಅವರ ಪಾತ್ರ ‘ಲೂಸ್ ಮಾದ’ನ ಪಾತ್ರ ನೆನಪಿಸುತ್ತದೆ. ತನಿಷಾ ಕುಪ್ಪಂಡ ಪೊಲೀಸ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಯಶ್ ಶೆಟ್ಟಿ, ವೀಣಾ ಸುಂದರ್, ಶೋಭರಾಜ್‍ಗೆ ಹೆಚ್ಚು ಕೆಲಸವಿಲ್ಲ. ಬಲ ರಾಜವಾಡಿ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳನ್ನು ಹೊರತುಪಡಿಸಿದರೆ, ಛಾಯಾಗ್ರಹಣ, ಸಂಕಲನ ಅಷ್ಟೇನೂ ಗಮನಸೆಳೆಯುವುದಿಲ್ಲ.
‘ಶಿಖಂಡಿ’ ಚಿತ್ರ ವಿಮರ್ಶೆ: ದುಷ್ಟಶಕ್ತಿ ಮತ್ತು ದೈವಶಕ್ತಿಯ ನಡುವಿನ ಸಂಘರ್ಷ


