‘13’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ರಾಘವ್ ಪೂಜಾರಿ, ಒಂದು ಚಿತ್ರ ಮಾಡಬೇಕೆಂದು ಆಸೆಪಟ್ಟು, ಕಳೆದ ಡಿಸೆಂಬರ್‍ನಲ್ಲೊಂದು ಚಿತ್ರ ಶುರು ಮಾಡಿದರಂತೆ. ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವೂ ನಡೆದಿದೆ. ಚಿತ್ರವೇನೋ ಪ್ರಾರಂಭವಾಯಿತು. ಆದರೆ, ನಿರ್ದೇಶಕರಿಗೆ ಕೆಲಸವೇ ಗೊತ್ತಿಲ್ಲ. ಒಂದು ಶಾಟ್ ಇಡುವುದಕ್ಕೂ ಬರಲಿಲ್ಲವಂತೆ. ಕೊನೆಗೆ ಅವರನ್ನು ಹೊರದಬ್ಬಿ, ಇನ್ನೊಬ್ಬರಿಗೆ ಅವಕಾಶ ಕೊಟ್ಟು, ಬೇರೆ ಕಥೆಯೊಂದಿಗೆ ಚಿತ್ರ ಶುರು ಮಾಡಿದ್ದಾರೆ. ಅದೇ ‘ಕ್ಷೇತ್ರಪಾಲ’.
ಕರ್ನಾಟಕದ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳ ಸುತ್ತ ಈಗಾಗಲೇ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈಗ ಅದೇ ಸಾಲಿನ ಇನ್ನೊಂದು ಚಿತ್ರ ‘ಕ್ಷೇತ್ರಪಾಲ’. ಈ ಚಿತ್ರವನ್ನು ರಾಘವ್ ನಿರ್ಮಿಸುವುದರ ಜೊತೆಗೆ ನಾಯಕನಾಗಿ ನಟಿಸಿದರೆ, ಜಗದೀಶ್ ಮಂಜಣ್ಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿರುವ ಈ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು.
ಚಿತ್ರದ ಹೆಸರು ‘ಕ್ಷೇತ್ರಪಾಲ’ ಅಂತಿದ್ದರೂ, ಇದು ಕೇವಲ ಕರಾವಳಿಯ ಯಾವುದೇ ದೈವದ ಕುರಿತಾದ ಸಿನಿಮಾವಲ್ಲ. ಆದರೆ, ಧಾರ್ಮಿಕ ಹಿನ್ನೆಲೆಯಲ್ಲಿ ಊರನ್ನು ರಕ್ಷಣೆ ಮಾಡುವ ವ್ಯಕ್ತಿಯೊಬ್ಬನ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ. ನ್ಯಾಯ, ನೀತಿ, ಧರ್ಮ, ನಂಬಿಕೆ, ಜೀವನ, ಹೋರಾಟ ಎಲ್ಲವೂ ‘ಕ್ಷೇತ್ರಪಾಲ’ ಈ ಚಿತ್ರದಲ್ಲಿ ಇರಲಿದೆ. ಚಿತ್ರದಲ್ಲಿ ರಾಘವ ಪೂಜಾರಿ ಜೊತೆಗೆ ಬಲ ರಾಜ್ ವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ಅದ್ವಿಕಾ ಶೆಟ್ಟಿ, ರಾಘು ರಾಮನಕೊಪ್ಪ, ಗೌತಮಿ ಗೌಡ, ನಮಿತಾ ಕಿರಣ್ ಮುಂತಾದವರು ನಟಿಸುತ್ತಿದ್ದಾರೆ.

ಸುಮಾರು ಒಂದೂವರೆ ದಶಕಗಳ ಕಾಲ ಮಾಧ್ಯಮ ಲೋಕದಲ್ಲಿ ಕೆಲಸ ಮಾಡಿದ ಅನುಭವವಿರುವ ಜಗದೀಶ್ ಮಂಜಣ್ಣ ಮಾತನಾಡಿ, ‘ಇದೊಂದು ಕರಾವಳಿ ಸೊಗಡಿನ ಕಥೆಯ ಸಿನಿಮಾ. ಇದರಲ್ಲಿ ತಾಯಿ ಸೆಂಟಿಮೆಂಟ್ ಮತ್ತು ಊರಿನ ಸೆಂಟಿಮೆಂಟ್ ಎರಡೂ ಇದೆ. ಕರಾವಳಿಯ ಸಂಪ್ರದಾಯ, ಸೌಂದರ್ಯದ ಜೊತೆಗೆ ಊಹಿಸಲಾಗದ ರೋಚಕ ಅಂಶಗಳು ಈ ಸಿನಿಮಾದ ಹೈಲೈಟ್’ ಎಂದರು.
‘ಕ್ಷೇತ್ರಪಾಲ’ ಬಗ್ಗೆ ಮಾತನಾಡಿದ ಕುಂದಾಪುರ ಮೂಲದ ನಾಯಕ ನಟ ರಾಘವ ಪೂಜಾರಿ, ‘ಈಗಾಗಲೇ ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಮ್ಮ ಊರಿನ ಕಥೆಯೊಂದನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ತರಲು ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಆಚರಣೆ, ಸಂಸ್ಕೃತಿಯ ಜೊತೆಗೆ ಒಂದು ಸಂದೇಶ ಕೂಡ ಇದೆ’ ಎಂದರು.
ಮುತ್ತಮ್ಮ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಕ್ಷೇತ್ರಪಾಲ’ ಚಿತ್ರಕ್ಕೆ ಕೆ. ನವೀನ್ ಸುವರ್ಣ ಛಾಯಾಗ್ರಣ, ಯತೀಶ್ ರಾಜ್ ಸಂಗೀತವಿದೆ. ಈಗಾಗಲೇ ಸುಮಾರು 10 ದಿನಗಳ ಕಾಲ ‘ಕ್ಷೇತ್ರಪಾಲ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಜುಲೈ ಅಂತ್ಯದಿಂದ ಸುಮಾರು 40 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ.


