‘ಟಾಕ್ಸಿಕ್’ ಮತ್ತು ‘ರಾಮಾಯಣ’ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಯಶ್, ಬೆಂಗಳೂರಿನಿಂದ ಮುಂಬೈಗೆ ಆಗಾಗ ಹೋಗುತ್ತಿರುವ ವಿಷಯ ಗೊತ್ತೇ ಇದೆ. ಈಗ ಮುಂಬೈಗೆ ಹೋಗಿ ಬರುತ್ತಿರುವುದಷ್ಟೇ ಅಲ್ಲ, ಅಲ್ಲೇ ಒಂದು ಮನೆಯನ್ನೂ ಖರೀದಿಸಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ.
ಹೌದು, ಯಶ್ ಮತ್ತು ರಾಧಿಕ ಪಂಡಿತ್ ಇತ್ತೀಚೆಗೆ ಮುಂಬೈನ ಆಲಿಬಾಗ್ ಪ್ರದೇಶದಲ್ಲಿ 24 ಕೋಟಿ ರೂ. ಮೌಲ್ಯದ ಹೊಸ ಮನೆಯನ್ನು ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಹರಡಿದೆ. ಈ ಪ್ರದೇಶದಲ್ಲಿ ಬಾಲಿವುಡ್‍ನ ಹಲವು ಸೆಲೆಬ್ರಿಟಿಗಳು ಮನೆ ಮಾಡಿದ್ದು, ಇದೀಗ ಆ ಸಾಲಿಗೆ ಯಶ್ ಸಹ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ 18ರಂದು ಈ ಮನೆಯ ಖರೀದಿಯಾಗಿದ್ದು, 24 ಕೋಟಿ ರೂ. ಕೊಟ್ಟು ಖರೀದಿಸುವುದರ ಜೊತೆಗೆ 1.44 ಕೋಟಿ ರೂ. ನಷ್ಟು ಸ್ಟಾಂಪ್ ಡ್ಯೂಟಿ ಕಟ್ಟಿದ್ದಾರಂತೆ ಯಶ್. 5289 ಚದುರಡಿಯ ಈ ಮನೆಗೆ, ಒಂದು ಚದುರಡಿಗೆ 3750 ರೂ.ನಷ್ಟು ಮೌಲ್ಯವಿದೆಯಂತೆ. ವಿಶೇಷವೆಂದರೆ, ಈ ಮನೆ ಇರುವುದು ಸಮುದ್ರದಡದಲ್ಲಂತೆ. ಸದ್ಯದಲ್ಲೇ ಯಶ್, ಮುಂಬೈಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮತ್ತು ಮುಂಬೈನಲ್ಲಿ ಮನೆ ಖರೀದಿಸುವುದರ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಹಾಸನದಲ್ಲೂ ದೊಡ್ಡ ತೋಟ ಮತ್ತು ಮನೆ ಮಾಡಿದ್ದಾರೆ ಯಶ್. ಈ ಮನೆಯಲ್ಲಿ ಯಶ್ ಅವರ ತಂದೆ-ತಾಯಿ ಅರುಣ್ ಕುಮಾರ್ ಮತ್ತು ಪುಷ್ಪಾ ವಾಸವಿದ್ದಾರೆ.


