Review: ಸಾಮ್ರಾಜ್ಯ ಕಟ್ಟಲು ಹೋದವನ ಕಥೆ ‘ಮ್ಯಾಂಗೋ ಪಚ್ಚ’

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಮ್ಯಾಂಗೋ ಪಚ್ಚ
ನಿರ್ಮಾಣ: ಪ್ರಿಯಾ ಸುದೀಪ್‍, ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ. ರಾಜ್‍
ನಿರ್ದೇಶನ: ವಿವೇಕ
ತಾರಾಗಣ: ಸಂಚಿತ್ ಸಂಜೀವ್, ಕಾಜಲ್‍ ಕುಂದರ್‍, ಜಯ್‍ ಗೋಪಿನಾಥ್‍, ಮಯೂರ್‍ ಪಟೇಲ್‍, ಪ್ರಶಾಂತ್‍ ಹಿರೇಮಠ್‍ ಮುಂತಾದವರು

ಅವನು ಪಚ್ಚ. ತಾಯಿ, ತಮ್ಮ, ಪ್ರೀತಿಸಿದ ಹುಡುಗಿ ಮತ್ತು ಒಂದಿಷ್ಟು ಹುಡುಗರೆಂದರೆ ಅವನಿಗೆ ಸರ್ವತ್ವ. ಡಿವಿಡಿ ಅಂಗಡಿ ನಡೆಸುತ್ತಾ, ಇಡೀ ಮೈಸೂರು ತನ್ನದೇ ಎಂದು ಓಡಾಡುತ್ತಾ, ಕನ್ನಡ ಚಿತ್ರಗಳನ್ನು ಪೈರಸಿ ಮಾಡುತ್ತಾ … ತನ್ನದೇ ಒಂದು ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿರುತ್ತಾನೆ.

ಅವನು ಮ್ಯಾಂಗೋ ಪಚ್ಚ. ಮೈಸೂರಿನಂಥ ಊರಿನಲ್ಲಿ ಡ್ರಗ್ಸ್ ಸಿಗಬಹುದು ಎಂದು ಯಾರೂ ಊಹಿಸದೇ ಇದ್ದ ಕಾಲದಲ್ಲಿ, ತನ್ನದೇ ಒಂದು ಸಿಂಡಿಕೇಟ್‍ ಮಾಡಿಕೊಂಡು, ಅತ್ತ ಪೊಲೀಸರನ್ನೂ ಯಾಮಾರಿಸಿ, ಇತ್ತ ಪ್ರತಿಸ್ಪರ್ಧಿಗಳಿಗೂ ಚಳ್ಳೆಹಣ್ಣು ತನ್ನಿಸಿ … ಒಂದು ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿರುತ್ತಾನೆ.

ಪಚ್ಚ ಎಂಬ ಸಾಮಾನ್ಯ ಹುಡುಗ, ಮ್ಯಾಂಗೋ ಪಚ್ಚ ಆಗಿ ಬದಲಾಗೋದು ಹೇಗೆ ಮತ್ತು ಯಾಕೆ? ಎಂಬ ಪ್ರಶ್ನೆ ಇದ್ದರೆ ಸಂಚಿತ್ ಸಂಜೀವ್‍ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರ ನೋಡಬೇಕು. ಇದು ಮೈಸೂರಿನ ಹುಡುಗನೊಬ್ಬನ ಕಾಲ್ಪನಿಕ ಕಥೆ. ಕಾಲ್ಪನಿಕ ಕಥೆಯಾದರೂ, 2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಚಿತ್ರ ಮಾಡಲಾಗಿದೆ.

ಒಬ್ಬ ಸಾಮಾನ್ಯ ಹುಡುಗ, ಒಂದು ದೊಡ್ಡ ಮಾಫಿಯಾ ಹಿನ್ನೆಲೆಯಲ್ಲಿ ಅಸಮಾನ್ಯನಾಗಿ ಬೆಳೆಯುವ ಕಥೆಗಳು ಕನ್ನಡಕ್ಕೆ ಹೊಸದೇನಲ್ಲ. ‘ಮ್ಯಾಂಗೋ ಪಚ್ಚ’ ಸಹ ಅದೇ ಸಾಲಿಗೆ ಸೇರುವ ಚಿತ್ರ. ಟೀಸರ್‍, ಟ್ರೇಲರ್‍ ನೋಡಿದರೆ ಇದೊಂದು ಸಿನಿಮಾ ಪೈರಸಿ ಹಿನ್ನೆಲೆಯ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದು ಮ್ಯಾಂಗೋ ಎಂಬ ಹೆಚ್ಚು ಪರಿಚಿತವಲ್ಲದ ಡ್ರಗ್ಸ್ ದಂಧೆ ಹಿನ್ನೆಲೆಯ ಚಿತ್ರ. ಚಿತ್ರತಂಡ ಆರಂಭದಲ್ಲೇ ಚಿತ್ರದಲ್ಲಿ ಡ್ರಗ್ಸ್ ವೈಭವೀಕರಿಸುತ್ತಿಲ್ಲ ಎಂದು Disclaimer ಹಾಕಿದರೂ, ಡ್ರಗ್ಸ್ ಜಾಲ ಮತ್ತು ಮಾರಾಟದ ಕುರಿತಾಗಿ ವಿವರವಾಗಿಯೇ ತೋರಿಸಲಾಗಿದೆ, ವೈಭವೀಕರಣ ಬೇಡವೆಂದರೂ ಆಗಿದೆ. ಡ್ರಗ್ಸ್ ಮಾರುವವನನ್ನು ಮಹಾನ್ ಕಿಲಾಡಿ ಎಂದು ಚಿತ್ರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರವು ಕಡಿಮೆ ಅವಧಿಯದ್ದಾಗಿರಬೇಕು ಮತ್ತು ವೇಗವಾಗಿರಬೇಕು ಎಂಬ ಮನಸ್ಥಿತಿ ಹೆಚ್ಚಾಗುತ್ತಿದೆ. ಕಡಿಮೆ ಅವಧಿ ಮತ್ತು ವೇಗವೇನೋ ಮುಖ್ಯವೇ. ಆದರೆ, ಯಾವುದೇ ವಿಷಯವನ್ನು ಎಷ್ಟು ಮತ್ತು ಹೇಗೆ ಹೇಳಬೇಕು ಎನ್ನುವುದು ಸಹ ಅಷ್ಟೇ ಮುಖ್ಯವೇ. ‘ಮ್ಯಾಂಗೋ ಪಚ್ಚ’, 95 ನಿಮಿಷಗಳ ಅವಧಿಯ ಚಿತ್ರ. ಚಿತ್ರ ಶುರುವಾಗಿ ಸ್ವಲ್ಪ ಹೊತ್ತಿಗೆ ಮಧ್ಯಂತರ ಬರುತ್ತದೆ. ಅದನ್ನು ಮುಗಿಸಿ, ಪ್ರೇಕ್ಷಕರು ಬಂದು ಚಿತ್ರಕ್ಕೆ ಹೊಂದಿಕೊಳ್ಳುವಷ್ಟರಲ್ಲೇ ಮುಗಿದು ಹೋಗುತ್ತದೆ. ಚಿತ್ರ ವೇಗವಾಗಿದೆ ಎನ್ನುವುದಕ್ಕಿಂತ ಬೇಗ ಮುಗಿಯುತ್ತದೆ ಎನ್ನುವುದು ಹೆಚ್ಚು ಸೂಕ್ತ.

ಚಿತ್ರ ಬೇಗ ಮುಗಿಯುತ್ತದೆ ಎನ್ನುವುದು ಬಿಟ್ಟರೆ, ಯಾವ ಹಂತದಲ್ಲೂ ಪ್ರೇಕ್ಷಕನನ್ನು ತಟ್ಟುವುದೇ ಇಲ್ಲ. ತೆರೆಯ ಮೇಲೆ ಚಿತ್ರ ಸಾಗುತ್ತಿದ್ದರೂ, ಒಂದಿಷ್ಟು ಘಟನೆಗಳು ನಡೆಯುತ್ತಿದ್ದರೂ, ಪ್ರೇಕ್ಷಕರು ಚಿತ್ರದ ಜೊತೆಗೆ emotionally attach ಆಗುವುದೇ ಇಲ್ಲ. ಅದಕ್ಕೆ ಕಾರಣವೂ ಇದೆ. ಇಲ್ಲಿ ಯಾವ ದೃಶ್ಯವೂ ಸುದೀರ್ಘವಾಗಿಲ್ಲ. ಸಾಲದ್ದಕ್ಕೆ ನೂರೆಂಟು ಶಾಟ್‍ಗಳು. ಹಾಗಾಗಿ, ಯಾವುದೂ ಪ್ರೇಕ್ಷಕನ ಮನಸ್ಸಿನಲ್ಲಿ ದಾಖಲಾಗುವುದೇ ಇಲ್ಲ. ಚಿತ್ರದಲ್ಲಿ ಒಂದಿಷ್ಟು ಆಪ್ತವೆನಿಸುವ ವಿಷಯ ಮತ್ತು ಸನ್ನಿವೇಶಗಳಿವೆಯಾದರೂ, ಯಾವುದೂ ಪ್ರೇಕ್ಷಕನ ಹೃದಯಕ್ಕೆ ತಟ್ಟದಂತೆ ಸಪ್ಪೆಯಾಗಿ ನಿರೂಪಿಸಲಾಗಿದೆ. ಹಾಗಾಗಿ, ಅಭಿನಯವಾಗಲಿ, ಶೇಖರ್‍ ಚಂದ್ರು ಛಾಯಾಗ್ರಹಣವಾಗಲಿ ಅಥವಾ ಚರಣ್‍ ರಾಜ್‍ ಸಂಗೀತವಾಗಲಿ … ಅದು ಪ್ರೇಕ್ಷಕರ ಮನಸ್ಸಿನಲ್ಲಿ ದಾಖಲಾಗುವುದೇ ಇಲ್ಲ.

ಸುದೀಪ್‍ ಅವರ ಸೋದರಳಿಯನ ಸಿನಿಮಾ ಎಂದು ಆಸೆಯಿಂದ ಹೋದವರಿಗೆ ನಿರಾಸೆ ಆಗದಂತೆ ತಡೆಯುವುದು ಕಷ್ಟ. ಹಾಗಂತ ಸಂಚಿತ್‍ ತಮ್ಮ ಕೆಲಸದಲ್ಲಿ ಮೋಸ ಮಾಡಿಲ್ಲ. ಅವರ ನೋಟ, ಮ್ಯಾನರಿಸಂ, ಮಾತಿನ ಶೈಲಿ ಎಲ್ಲವೂ ಸುದೀಪ್‍ ಅವರನ್ನೇ ನೆನಪಿಸುತ್ತವೆ. ಸಂಚಿತ್ ಕೆಲವು ದೃಶ್ಯಗಳಲ್ಲಿ ಇಂಟೆನ್ಸ್ ಆಗಿ ಅಭಿನಯಿಸಿರುವ ಜೊತೆಗೆ ಕಣ್ಣುಗಳಲ್ಲೇ ಮಾತಾಡಿದ್ದಾರೆ. ಅದೇ ಅವರ ಶಕ್ತಿ. ಬಿಲ್ಡಪ್‍ಗಿಂತ ಅಭಿನಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರೆ, ಭವಿಷ್ಯದಲ್ಲಿ ಭರವಸೆಯ ನಟನಾಗುತ್ತಾರೆ. ಸಂಚಿತ್‍ ಬಿಟ್ಟರೆ ಗಮನಸೆಳೆಯುವುದು ಮೇಯರ್‍ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಾಂತ್ ಹಿರೇಮಠ್‍. ಪ್ರಶಾಂತ್‍ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಯೂರ್‍ ಪಟೇಲ್‍, ಜಯ್‍ ಗೋಪಿನಾಥ್‍, ಹರಿಣಿ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಭಾವನಾಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ನಾಲ್ಕಾರು ದೃಶ್ಯಗಳಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಕೊನೆಯಲ್ಲಿ ಅತಿಥಿಯಾಗಿ ಬರುವ ಧನಂಜಯ್‍, ಇನ್ನೊಂದು ಭಾಗಕ್ಕೆ ಮುನ್ನುಡಿ ಬರೆಯುತ್ತಾರೆ.

ಮಾಸ್‍ ಚಿತ್ರಗಳನ್ನು ಇಷ್ಟಪಡುವವರು ಒಮ್ಮೆ ‘ಮ್ಯಾಂಗೋ ಪಚ್ಚ’ ನೋಡಬಹುದು.

ಚಿತ್ರರಂಗದ ಸಮಸ್ಯೆಯೆಂದರೆ ನಟ-ನಟಿಯರಿಗೆ ಸಂಬಂಧವಿಲ್ಲವೇ?

Discover more from KannadaScreens

Subscribe now to keep reading and get access to the full archive.

Continue reading