ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಪ್ರಮೋದ್ ಮತ್ತು ಪೃಥ್ವಿ ಅಂಬರ್ ಅಭಿನಯದ ‘ಭುವನಂ ಗಗನಂ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ಪೃಥ್ವಿ ಅವರನ್ನು ಪರಿಚಯಿಸುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಈ ಭಾಗದ ಚಿತ್ರೀಕರಣಕ್ಕಾಗಿಯೇ ಹೆಸರುಘಟ್ಟ ಬಳಿ ಜಾತ್ರೆ ಸೆಟ್ ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್, ‘ನನ್ನ ಭಾಗದ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿಯೇ ಮುಗಿದಿತ್ತು. ಈಗ ಪೃಥ್ವಿ ಭಾಗದ ಚಿತ್ರೀಕರಣದ ಮೂಲಕ ಅಂತ್ಯವಾಗುತ್ತಿದೆ. ಈ ಚಿತ್ರದಲ್ಲಿ ನಾನು ಮೊದಲ ಬಾರಿಗೆ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ಈ ಹಿಂದೆ ಯಾವುದೇ ಚಿತ್ರದಲ್ಲೂ ನಾನು ಇಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿರಲಿಲ್ಲ’ ಎಂದರು.
ಈ ಪಾತ್ರವನ್ನು ಬಹಳ ಭಯದಲ್ಲಿ ಮಾಡಿದ್ದಾಗಿ ಹೇಳಿಕೊಂಡ ಪೃಥ್ವಿ, ‘ಈ ಪಾತ್ರ ಯಾವ ರೀತಿ ಮೂಡಿಬರುತ್ತದೆ ಎಂಬ ಕುತೂಹಲ ನನಗೆ ಇತ್ತು. ನಿರ್ದೇಶಕರಿಗೆ ನಾನು ಬಹಳ ಕಾಟ ಕೊಟ್ಟಿದ್ದೇನೆ. ಅವರು ಸಹ ನನಗೆ ಕಾಟ ಕೊಟ್ಟಿದ್ದಾರೆ. ಗಂಡ-ಹೆಂಡತಿ ಮಧ್ಯದಲ್ಲಿ ಇಷ್ಟೊಂದು ಜಗಳ ಆಗುತ್ತದೋ ಇಲ್ಲವೋ ಗೊತ್ತಿಲ್ಲ, ನನ್ನ ಪಾತ್ರದ ವಿಷಯದಲ್ಲಿ ನನ್ನ ಮತ್ತು ನಿರ್ದೇಶಕ ಗಿರೀಶ್ ನಡುವೆ ಸಾಕಷ್ಟು ಜಗಳಗಳಾಗಿವೆ. ಚಿತ್ರ ಬಹಳ ಚೆನ್ನಾಗಿ ಬಂದಿದೆ. ನನಗಂತೂ ತೃಪ್ತಿ ಕೊಟ್ಟಿದೆ. ನಮ್ಮಿಬ್ಬರದು ವ್ಯತಿರಿಕ್ತವಾದ ಪಾತ್ರಗಳು ಈ ಚಿತ್ರದಲ್ಲಿವೆ. ನನ್ನ ಪಾತ್ರ ಫೈಟ್ ಮಾಡುವುದಿಲ್ಲ. ಪ್ರಮೋದ್ ಅವರ ಪಾತ್ರ ಸಾಕಷ್ಟು ಫೈಟ್ ಮಾಡುತ್ತದೆ’ ಎಂದರು.
ಈ ಹಿಂದೆ ‘ರಾಜರು’ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್ ಮೂಲಿಮನಿ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಎಸ್.ವಿ.ಸಿ. ಫಿಲಂಸ್‍ನಡಿ ಈ ಚಿತ್ರವನ್ನು ಮುನೇಗೌಡ ನಿರ್ಮಿಸಿದ್ದಾರೆ.
‘ಭುವನಂ ಗಗನಂ’ ಚಿತ್ರಕ್ಕಾಗಿ ಸುಮಾರು 75 ದಿನಗಳ ಕಾಲ ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ, ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಪ್ರಮೋದ್‍ಗೆ ನಾಯಕಿಯಾಗಿ ರಾಚೆಲ್ ಡೇವಿಡ್ ಮತ್ತು ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಮಿಕ್ಕಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ‘ಸಿದ್ಲಿಂಗು’ ಶ್ರೀಧರ್, ಹರಿಣಿ, ‘ಸ್ಪರ್ಶ’ ರೇಖಾ ಮುಂತಾದವರು ನಟಿಸಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಮತ್ತು ಗುಮ್ಮಿನೇನಿ ವಿಜಯ್ ಸಂಗೀತ ಈ ಚಿತ್ರಕ್ಕಿದೆ.


