ಚಿತ್ರ: ಡಿಟೆಕ್ಟಿವ್ ತೀಕ್ಷ್ಣ
ನಿರ್ಮಾಣ: ಗುತ್ತ ಮುನಿ ಪ್ರಸನ್ನ, ಮುನಿ ವೆಂಕಟ್ ಚರಣ್ ಮತ್ತು ಪುರುಷೋತ್ತಮ್ ಬಿ. ಕೊಯ್ಯೂರು
ನಿರ್ದೇಶನ: ತ್ರಿವಿಕ್ರಮ್ ರಘು
ತಾರಾಗಣ: ಪ್ರಿಯಂಕಾ ಉಪೇಂದ್ರ, ವಿಜಯ್ ಸೂರ್ಯ, ಅವಿನಾಶ್, ‘ಸಿದ್ಲಿಂಗು’ ಶ್ರೀಧರ್ ಮುಂತಾದವರು
ರಾಥೋಡ್ ಎಂಬ ಡಾನ್‍ನನ್ನು ಅದ್ಯಾರೋ ಅನಾಮಧೇಯ ಸಾಯಿಸುತ್ತಾನೆ. ಅಪ್ಪನನ್ನು ಕೊಂದಿದ್ದು ಯಾರು ಎಂದು ಮೆಕ್ಸಿಕೋದಲ್ಲಿ ಕೂತಿರುವ ರಾಥೋಡ್ ಮಗ ಜಾನ್ ಮೆಸ್ಸಿ ತಲೆ ಕೆಡಿಸಿಕೊಳ್ಳುತ್ತಾನೆ. ಹೇಗಾದರೂ ಮಾಡಿ, ಕೊಲೆಗಾರನನ್ನು ಹುಡುಕಿಕೊಡು ಎಂದು ಒಬ್ಬ ರಾಜಕಾರಣಿಗೆ ಜವಾಬ್ದಾರಿ ಒಪ್ಪಿಸುತ್ತಾನೆ. ಆ ರಾಹಕಾರಣಿ, ಪೊಲೀಸ್ ಅಧಿಕಾರಿಯೊಬ್ಬರಿಗೆ ಈ ಕೆಲಸ ಕೊಡುತ್ತಾನೆ. ಇಂಥದ್ದೊಂದು ಸವಾಲು ಸ್ವೀಕರಿಸೋರು ಯಾರಾದರೂ ಇದ್ದರೆ, ಅದು ಡಿಟೆಕ್ಟಿವ್ ತೀಕ್ಷ್ಣ ಮಾತ್ರ ಎಂದು ಆಕೆಯನ್ನು ಅಧಿಕಾರಿ ಕರೆಸುತ್ತಾನೆ. ರಾಥೋಡ್‍ನನ್ನು ಕೊಂದಿದ್ದು ಯಾರು? ಅವನು ಎಲ್ಲಿದ್ದಾನೆ? ಎಂದು ಡಿಟೆಕ್ಟಿವ್ ತೀಕ್ಷ್ಣಗೆ ಕಂಡು ಹಿಡಿಯೋಕೆ ಸಾಧ್ಯವಾ?
ಖಂಡಿತಾ ಇಲ್ಲ. ಕಂಡು ಹಿಡಿಯುವುದಿದ್ದರೂ ಅದು ಎರಡನೇ ಭಾಗದಲ್ಲೇ. ಮೊದಲ ಭಾಗವನ್ನು ಒಂದು ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಆ ನಿಟ್ಟಿನಲ್ಲಿ ಇದೊಂದು ಅಪೂರ್ಣ ಚಿತ್ರ. ಎರಡು ಗಂಟೆ ಅವಧಿಯ ಚಿತ್ರದಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತವಾದರೂ, ಕಥೆಗೊಂದು ತಾರ್ಕಿಕ ಅಂತ್ಯವಿಲ್ಲ. ಏಕೆಂದರೆ, ಇಲ್ಲಿ ಬರೀ ಡಾನ್‍ನ ಕೊಂದಿರುವ ಕೊಲೆಗಾರನ ಹುಡುಕಾಟ ಮಾತ್ರವಲ್ಲ. ತೀಕ್ಷ್ಣಳ ಹಿನ್ನೆಲೆ ಇದೆ. ಮಂದಾರ ಎಂಬ ಯುವತಿ ತೀಕ್ಷ್ಣಳಾಗಿದ್ದು ಹೇಗೆ ಎಂದು ತೋರಿಸಲಾಗಿದೆ. ತೀಕ್ಷ್ಣ ಎಷ್ಟು ತೀಕ್ಷ್ಣ ಎಂದು ಸಾಬೀತು ಮಾಡುವುದಕ್ಕೆ ಎರಡು ಕೇಸ್‍ಗಳಿವೆ. ವರ್ತಮಾನ, ಫ್ಲಾಶ್‍ಬ್ಯಾಕ್ ಎಂದು ಕಥೆ ಹಿಂದೆ-ಮುಂದೆ ಹೋಗಿ ಕಲಸುಮೇಲೋಗರವಾಗಿದೆ. ಎಲ್ಲಾ ವಿಷಯಗಳನ್ನು ಹೇಳುವುದಕ್ಕೆ ಹೋಗಿ, ಕಥೆ ದೊಡ್ಡದಾಗಿ, ಅದನ್ನೆಲ್ಲಾ ಒಂದೇ ಭಾಗದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದನಿಸಿ ಎರಡು ಭಾಗಗಳಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ಮೊದಲ ಭಾಗ ಅಸ್ಪಷ್ಟವಾಗಿ ಅಂತ್ಯವಾಗಿದೆ. ಹಾಗಾಗಿ, ಚಿತ್ರದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ವಿಜಯ್ ಸೂರ್ಯ ಯಾಕೆ ಬರುತ್ತಾರೆ? ಅವರ ಪಾತ್ರವೇನು? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ, ಮುಂದಿನ ಭಾಗದವರೆಗೂ ಕಾಯಬೇಕು.
ಅರ್ದಂಬರ್ಧ ಕಥೆ ಹೇಳಿ ಪ್ರೇಕ್ಷಕರನ್ನು ನಿರಾಸೆಗೊಳಿಸುವ ಇಂದಿನ ಟ್ರೆಂಡ್‍ಗೆ ತಕ್ಕಂತೆ ನಿರ್ದೇಶಕರು ಚಿತ್ರ ಮಾಡಿದ್ದಾರಾದರೂ, ಮಿಕ್ಕಂತೆ ಅವರು ಹಳೆಯ ಜಮಾನದಿಂದ ಹೊರಬಂದಂತೆ ಕಾಣುವುದಿಲ್ಲ. ಪತ್ತೆದಾರಿಗಳು ಎಂದರೆ ತಲೆ ಮೇಲೊಂದು ಹ್ಯಾಟು, overcoat, boots ಎಂಬ ಹಳೆಯ ಕಲ್ಪನೆಯಿಂದ ಅವರು ಇನ್ನೂ ಹೊರಬಂದಿಲ್ಲ. ತೀಕ್ಷ್ಣ ಮತ್ತು ತಂಡದವರು ಸದಾ ಇವನ್ನೆಲ್ಲಾ ಧರಿಸಿ ಓಡಾಡುವುದು ತಮಾಷೆ ಎಂದನಿಸುತ್ತದೆ. ಮಿಕ್ಕಂತೆ ಚಿತ್ರದಲ್ಲಿ ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ. ಆದರೆ, ಯಾವುದೂ ಸರಿಯಾಗಿ ಬಳಕೆಯಾಗಿಲ್ಲ. ಬರವಣಿಗೆ ಮತ್ತು ಚಿತ್ರಕಥೆಯಲ್ಲಿ ಇನ್ನಷ್ಟು ತೀಕ್ಷ್ಣತೆ ಬೇಕಿತ್ತು. ಬಿಲ್ಡಪ್ ಮತ್ತು ಮೇಕಿಂಗ್‍ಗೆ ಕೊಟ್ಟಿರುವ ಪ್ರಾಶಸ್ತ್ಯವನ್ನು ಬರವಣಿಗೆಗೂ ಕೊಟ್ಟಿದ್ದರೆ, ಚಿತ್ರ ವಿಭಿನ್ನವಾಗಿರುತ್ತಿತ್ತು.
ಪ್ರಿಯಾಂಕಾ ಉಪೇಂದ್ರ ಇಂಥದ್ದೊಂದು ಪಾತ್ರ ಮಾಡಿರಲಿಲ್ಲ. ಆ ನಿಟ್ಟಿನಲ್ಲಿ ಇದು ಅವರಿಗೆ ಭಿನ್ನ ಪ್ರಯೋಗ ಮತ್ತು ಪ್ರಯತ್ನ. ಅವಿನಾಶ್, ‘ಸಿದ್ಲಿಂಗು’ ಶ್ರೀಧರ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


