ಮಾಜಿ ಸಚಿವ ಎಚ್.ಎಂ. ರೇವಣ್ಣ ಮಗ ಅನೂಪ್, ಹೊಸ ಚಿತ್ರವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಯಾಗಿ ಅಭಿನಯಿಸುತ್ತಿರುವ ವಿಷಯ ಗೊತ್ತಿರಬಹುದು. ‘ಕನಕರಾಜ’ ಎಂಬ ಈ ಚಿತ್ರವು ಕಳೆದ ವರ್ಷವೇ ಶುರುವಾಗಿತ್ತು. ಈಗ ಚಿತ್ರದ ಚಿತ್ರೀಕರಣ ಮುಗಿದು, ಚಿತ್ರದ ಮೋಷನ್ ಪೋಸ್ಟರ್ ಮತ್ತು ‘ಎಕ್ಸ್ಕ್ಯೂಸ್ ಮೀ ಮಾಮು …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸುತ್ತಿರುವ, ವಿ. ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡುತ್ತಿರುವ ಚಿತ್ರವನ್ನು ಆರ್. ರವೀಂದ್ರ ನಿರ್ದೇಶಿಸುತ್ತಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಈ ಚಿತ್ರದ ಹಾಡನ್ನು ಎಚ್.ಎಂ. ರೇವಣ್ಣ ಬಿಡುಗಡೆ ಮಾಡಿದರೆ, ಹಿರಿಯ ನಟ ದೊಡ್ಡಣ್ಣ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.
ನಿರ್ಮಾಪಕ ಸನತ್ ಕುಮಾರ್ ಮಾತನಾಡಿ, ‘ಇದೊಂದು ವಿಭಿನ್ನ ಕಥೆ. ಯುವಜನತೆಯನ್ನು ಮನದಲ್ಲಿಟ್ಟಿಕೊಂಡು ವಿ. ನಾಗೇಂದ್ರಪ್ರಸಾದ್ ಅವರು ಕಥೆ ಬರೆದಿದ್ದಾರೆ. ಇದಲ್ಲದೆ ಇನ್ನೂ ಮೂರು ಹಾಡುಗಳು ಚಿತ್ರದಲ್ಲಿವೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.

ಇಂದಿನ ಯುವಪೀಳಿಗೆಗೆ ಹತ್ತಿರವಾದ ಕಥೆಯಿದು ಎಂದ ವಿ. ನಾಗೇಂದ್ರ ಪ್ರಸಾದ್, ‘ನಿರ್ಮಾಪಕ ಸನತ್ ಕುಮಾರ್ ಹಾಗೂ ನಿರ್ದೇಶಕ ರವೀಂದ್ರ ಈ ಚಿತ್ರದ ಸಂಗೀತ ನಿರ್ದೇಶನದ ಜೊತೆಗೆ, ಕಥೆ, ಚಿತ್ರಕಥೆಯನ್ನು ನೀವೇ ಬರೆಯಬೇಕೆಂದು ಹೇಳಿದರು. ಚಿತ್ರದಲ್ಲಿ ನಾಯಕ ಮುಖ್ಯಮಂತ್ರಿಗಳ ಅಭಿಮಾನಿಯಾಗಿರುತ್ತಾನೆ’ ಎಂದರು.
‘ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ. ಮುಖ್ಯಮಂತ್ರಿ ರಾಮಯ್ಯ ಅವರ ಅಭಿಮಾನಿಯಾಗಿರುತ್ತೇನೆ’ ಎಂದು ನಾಯಕ ಅನೂಪ್ ರೇವಣ್ಣ ತಿಳಿಸಿದರು.
ಈ ಚಿತ್ರದಲ್ಲಿ ಅನೂಪ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅನೂಪ್‍ಗೆ ನಾಯಕಿಯಾಗಿ ನಿಮಿಷ ನಟಿಸಿದ್ದಾರೆ. ಮಿಕ್ಕಂತೆ ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಸುಂದರರಾಜ್, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ. ಪ್ರಮೋದ್ ಭಾರತೀಯ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.


