ಚಿತ್ರ: ಉತ್ತರ
ನಿರ್ಮಾಣ: ನಾಗೇಶ್ವರ ರಾವ್
ನಿರ್ದೇಶನ: ದಿನೇಶ್ ಬಾಬು
ತಾರಾಗಣ: ನಾರಾಯಣಸ್ವಾಮಿ, ಸಂಪ್ರತಿ ಆಳ್ವ, ತಾರಾ, ಅಶ್ವಿನಿ ಗೌಡ, ರಾಮ್ ಮಂಜುನಾಥ್ ಮುಂತಾದವರು
ಈ ಸ್ವಾತಂತ್ರ್ಯ ದುರ್ಬಳಕೆ ಆಗ್ತಿದೆ ಅಂತ ಅನಿಸದಿಲವಾ?
ಗಂಭೀರವಾಗಿ ಪ್ರಶ್ನಿಸುತ್ತಾರೆ ಆ ನ್ಯಾಯಾಧೀಶರು. ಅದಕ್ಕೆ ಕಾರಣವೂ ಇದೆ. ಆಕೆ ಅನೈತಿಕ ಸಂಬಂಧದಲ್ಲಿ ತೊಡಗಿಕೊಂಡಿರುತ್ತಾಳೆ. ಗಂಡನಿಗೆ ಗೊತ್ತಾಗಿ, ಆಕೆಯಿಂದ ಡೈವೋರ್ಸ್ ಪಡೆಯುವುದಕ್ಕೆ ಮುಂದಾಗುತ್ತಾನೆ. ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಹೆಣ್ಣಿನ ರಕ್ಷಣೆಗೆಂದು ಮಾಡಲಾಗಿರುವ ಕಾನೂನುಗಳನ್ನೇ ಮುಂದಿಟ್ಟುಕೊಂಡು ಆತನನ್ನು ಹಣಿಯಲಾಗುತ್ತದೆ. ಮೇಲಿನ ಪ್ರಶ್ನೆ ಉದ್ಭವವಾಗುವುದೇ ಆಗ.
‘ಗಂಡ ಆಗಲೀ, ಹೆಂಡ್ತಿ ಆಗಲೀ … ಯಾರೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರೂ ಅದಕ್ಕೆ ಶಿಕ್ಷೆ ಇಲ್ಲ. ಇಬ್ಬರೂ ತಮಗೆ ಇಷ್ಟಬಂದವರ ಜೊತೆಗೆ ಹೋಗಬಹುದು, ಕಾನೂನು ಪ್ರಶ್ನೆ ಮಾಡುವ ಹಾಗೇ ಇಲ್ಲ. ಹಾಗಾದರೆ, ಮದುವೆ ಅನ್ನೋದಕ್ಕೆ ಏನರ್ಥವಿದೆ?’ ಎಂಬ ಪ್ರಶ್ನೆಯೊಂದಿಗೆ ‘ಉತ್ತರ’ ಮುಗಿಯುತ್ತದೆ.
ಬಹುಶಃ ದಿನೇಶ್ ಬಾಬು ವೃತ್ತಿಜೀವನದ ಅತ್ಯಂತ ಗಂಭೀರವಾದ ಚಿತ್ರವೆಂದರೆ, ಅದು ‘ಉತ್ತರ’. ಈ ಬಾರಿ ಅವರು ಒಂದು ಚಿಂತನೆಗೆ ಹಚ್ಚುವ ವಿಷಯವನ್ನು ತೆಗೆದುಕೊಂಡಿರುವುದಷ್ಟೇ ಅಲ್ಲ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾರೆ. ಒಬ್ಬ ವಿವಾಹಿತ ಮಹಿಳೆ ಅನೈತಿಕ ಸಂಬಂಧ ಇಟ್ಟುಕೊಂಡಾಗ, ಆಕೆಯ ಪತಿ ಹೇಗೆಲ್ಲಾ ಹೋರಾಡುತ್ತಾನೆ ಎನ್ನುವುದರ ಜೊತೆಗೆ, ಮಹಿಳೆಯರ ರಕ್ಷಣೆಗೆಂದು ರಚಿಸಿಲಾಗಿರುವ ಕೆಲವು ಕಾನೂನುಗಳನ್ನು ಮುಂದಿಟ್ಟುಕೊಂಡು, ಹೇಗೆ ಇಡೀ ಪ್ರಕರಣವನ್ನು ತಿರುಚಲಾಗುತ್ತದೆ ಎಂದು ಅವರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಜೊತೆಗೆ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವ ಕಾನೂನು ಲೋಪಗಳೀಘೆ ಕನ್ನಡಿ ಹಿಡಿದಿದ್ದಾರೆ. ಈ ಮೂಲಕ ವಿವಾಹ, ಹಕ್ಕುಗಳು ಮತ್ತು ಕೌಟಂಬಿಕ ಕಾನೂನಿನ ಸಂಕೀರ್ಣತೆಗಳ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆ ನಿಟ್ಟಿನಲ್ಲಿ ಇದು ಅವರ ವೃತ್ತಿಜೀವನದಲ್ಲಿ ವಿಭಿನ್ನವಾದ ಸಿನಿಮಾ.

ಸಾಮಾನ್ಯವಾಗಿ ಇಂತಹ ಚಿತ್ರಗಳಲ್ಲಿ ರೋಚಕತೆ ಜಾಸ್ತಿಯೇ ಇರುತ್ತದೆ. ಆದರೆ, ಬಾಬು ಅದನ್ನು ಮಿತವಾಗಿ ಬಳಸಿಕೊಂಡು ವಿಷಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಹಾಗಾಗಿಯೇ ಚಿತ್ರ ನಿಧಾನವಾಗಿ ಸಾಗುತ್ತದೆ. ಚಿತ್ರಕ್ಕೊಂದು ವೇಗ ಸಿಗುವುದು ಮಧ್ಯಂತರದ ನಂತರವೇ. ಯಾವಾಗ ಕಥೆ ಮನೆಯಿಂದ, ನ್ಯಾಯಾಲಯಕ್ಕೆ ಶಿಫ್ಟ್ ಆಗುತ್ತದೋ ಅಲ್ಲಿಂದ ಬೇರೆಯದೇ ಆಯಾಮ ಪಡೆಯುತ್ತದೆ. ಇನ್ನು, ಬಾಬು ಸಾಕಷ್ಟು ರೀಸರ್ಚ್ ಮಾಡಿದ್ದಾರೆ. ಈ ವಿಷಯವಾಗಿ ಕಾನೂನು, ಹಿಂದಿನ ತೀರ್ಪುಗಳು ಇವೆಲ್ಲವನ್ನೂ ಸಾಕಷ್ಟು ಅಧ್ಯಯನ ಮಾಡಿಯೇ ಚಿತ್ರಕಥೆ ಮಾಡಿದ್ದಾರೆ.
ಇನ್ನು, ನ್ಯಾಯಾಲಯದ ಕಾರ್ಯವೈಖರಿಯನ್ನು ತೋರಿಸುವಾಗ ಸಾಕಷ್ಟು Cinematic Liberty ಬಳಸಿಕೊಂಡಿದ್ದಾರೆ. ತೀರ್ಪು ಮತ್ತು ಸೆಕ್ಷನ್‍ಗಳೆಲ್ಲಾ ಗಹನವಾಗಬಾರದು, ಪ್ರೇಕ್ಷಕರನ್ನು ಗೊಂದಲಗೊಳಿಸಬಾರದು ಎಂದು ಬೇರೆ ಪಾತ್ರಗಳನ್ನು ಇಟ್ಟುಕೊಂಡು ಅದನ್ನು ಸರಳೀಕರಿಸಿ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ, ನ್ಯಾಯಾಲಯದ ಕಲಾಪ ವಾಸ್ತವಿಕತೆಗಿಂತ ಸಿನಿಮೀಯವಾಗಿಯೇ ಕಾಣಿಸುತ್ತದೆ.
ಬರವಣಿಗೆ ಮತ್ತು ನಿರ್ದೇಶನದ ಜೊತೆಗೆ ಛಾಯಾಗ್ರಹಣದಲ್ಲೂ ಗುರುತಿಸಿಕೊಂಡವರು. ಇಲ್ಲೂ ಛಾಯಾಗ್ರಹಣ ಗಮನಾರ್ಹವಾಗಿದೆ. ಅಸಹಾಯಕ ಪತಿಯಾಗಿ ನಾರಾಯಣಸ್ವಾಮಿ ಮತ್ತು ತಪ್ಪು ಮಾಡಿ ಪಾಪಪ್ರಜ್ಞೆಯಿಂದ ಬಳಲುವ ಪತ್ನಿಯಾಗಿ ಸಂಪ್ರೀತಾ ಆಳ್ವ ಅಭಿನಯ ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾಗಿದೆ. ನ್ಯಾಯಾಧೀಶರಾಗಿ ಬರುವ ತಾರಾ ತೆರೆಯ ಮೇಲೆ ಸ್ವಲ್ಪ ಹೊತ್ತು ಕಾಣಿಸಿಕೊಂಡರೂ, ಹಲವು ಪ್ರಶ್ನೆಗಳನ್ನು ಎತ್ತಿ ಗಮನಸೆಳೆಯುತ್ತಾರೆ.
‘ಉತ್ತರ’ ಅಂತಿಮವಾಗಿ ಪ್ರೇಕ್ಷಕರಿಗೆ ಒಂದು ಸ್ಪಷ್ಟ ಉತ್ತರ ನೀಡುವ ಬದಲು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.


