ಚಿತ್ರ: ಮೃತ್ಯುದೇವತೆ
ನಿರ್ಮಾಣ: ವರ್ಷಿತಾ ಪ್ರೊಡಕ್ಷನ್ಸ್
ನಿರ್ದೇಶನ: ನವೀನ್ ಮಹಾದೇವ್
ತಾರಾಗಣ: ಸಾರಿಕ ರಾವ್, ಹಿಮಶ್ರೀ, ಮಾಹೀನ್, ವಿನಯ ಪ್ರಸಾದ್, ಪವನ್ ಶೆಟ್ಟಿ ಮುಂತಾದವರು
* ಶರಧಿ
ಅತಿಯಾದ ನಂಬಿಕೆ, ಕುರುಡು ಪ್ರೀತಿ ಕೆಲವೊಮ್ಮೆ ಜೀವಕ್ಕೆ ದೊಡ್ಡ ಅಪಾಯವನ್ನೇ ತಂದೊಡ್ಡುತ್ತದೆ. ಪ್ರೀತಿಸಿ, ತನ್ನ ಸರ್ವಸ್ವವನ್ನು ಅರ್ಪಿಸಿದವರಿಂದಲೇ ಮೋಸಕ್ಕೆ ಒಳಗಾದಾಗ ಆಗುವ ನೋವನ್ನು ತಡೆದುಕೊಳ್ಳುವುದು ಕಷ್ಟ. ‘ಮೃತ್ಯುದೇವತೆ’ ಇಂಥದ್ದೇ ಕಥಾಹಂದರ ಹೊಂದಿರುವ ಸಿನಿಮಾ.
ತಾವು ಪ್ರೀತಿಸಿದ ಹುಡುಗರಿಂದ ಮೋಸ ಹೋಗುವ ಹುಡುಗಿಯರಿಬ್ಬರ ಕಥೆಯನ್ನು ಇಲ್ಲಿ ಹೇಳಲಾಗಿದೆ. ನಿರ್ದೇಶಕ ನವೀನ್ ಮಹಾದೇವ್ ಅವರಿಗೆ ಮಹಿಳೆಯರಿಗೆ ಹೇಗೆ ಅನ್ಯಾಯಕ್ಕೆ ಒಳಗಾಗುತ್ತಾರೆ ಅನ್ನೋದನ್ನು ತೋರಿಸುವ ತುಡಿತ. ಅದೇ ಕಾರಣದಿಂದ ಸಾಕಷ್ಟು ಸನ್ನಿವೇಶಗಳನ್ನು ತರುತ್ತಾರೆ. ಆದರೆ, ಅದನ್ನು ಸಮರ್ಪಕ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಅವರು ಅಲ್ಲಲ್ಲಿ ಎಡವಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಕಥೆಯ ಎಳೆಯನ್ನು ಅವರು ಬೆಳೆಸುವಲ್ಲಿ ಸೋತಿದ್ದಾರೆ. ಅದೇ ಕಾರಣದಿಂದ ಸಿನಿಮಾದಲ್ಲಿ ಹೊಸದೇನೋ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.
ಸಮಾಜದಲ್ಲಿ ಮಹಿಳೆ ಯಾವ ರೀತಿ ಮೋಸ ಹೋಗಿ ವಂಚಕರ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ, ನಂತರ ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾಳೆ, ಅಂಥವರಿಗೆ ಶಿಕ್ಷಿಸಲು ಯಾವ ಅವತಾರ ಎತ್ತುತ್ತಾಳೆ ಎಂದು ಮೃತ್ಯುದೇವತೆ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ನವೀನ್ ಮಹಾದೇವ್. ಈ ಹಾದಿ ಇನ್ನಷ್ಟು ವಿಸ್ತೃತವಾಗಿದ್ದರೆ ಚಿತ್ರದ ಆಶಯಕ್ಕೊಂದು ತೂಕ ಬರುತ್ತಿತ್ತು. ಆದರೆ, ಒಂದಷ್ಟು ಬೇಡದ ದೃಶ್ಯಗಳಿಂದ ಚಿತ್ರದ ಅವಧಿ ಹೆಚ್ಚಿದೆಯಷ್ಟೇ.
ಸಿನಿಮಾದಲ್ಲಿ ಕೆಲವೇ ಕೆಲವು ಪಾತ್ರಗಳಿವೆ ಮತ್ತು ಬಹುತೇಕ ಸಿನಿಮಾ ರೆಸಾರ್ಟ್‍ವೊಂದರಲ್ಲಿ ನಡೆಯುತ್ತದೆ. ಕಥೆಯಲ್ಲಿ ಇನ್ನೊಂದಿಷ್ಟು ರೋಚಕ ಅಂಶ ಸೇರಿಸುವ ಅವಕಾಶ ಅವರಿಗಿತ್ತು. ಜೊತೆಗೆ ನಿರೂಪಣೆಯಲ್ಲಿ ವೇಗ ಇರಬೇಕಿತ್ತು. ಚಿತ್ರದಲ್ಲಿ ನವೀನ್ ಮಹಾದೇವ್ ಕೂಡಾ ವಿಕ್ಷಿಪ್ತ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶ್ರೀಮಂತಿಕೆಯ ಮದದಲ್ಲಿ ಮೆರೆಯಬಾರದು ಹಾಗೂ ಹೆಣ್ಣಿಗೆ ಗೌರವ ನೀಡಬೇಕು ಎಂಬ ಸಂದೇಶವೇ ಈ ಚಿತ್ರದ ಹೈಲೈಟ್.
ಚಿತ್ರದಲ್ಲಿ ಸಾರಿಕ ರಾವ್, ಹಿಮಶ್ರೀ, ವಿನಯ ಪ್ರಸಾದ್, ಮಾಹೀನ್, ಪವನ್ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ. ತಾಂತ್ರಿಕವಾಗಿ ಚಿತ್ರದ ಬಗ್ಗೆ ಹೆಚ್ಚೇನೂ ಹೇಳುವ ಹಾಗಿಲ್ಲ.


