ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರದ ಟ್ರೇಲರ್ ಕಳೆದ ವಾರ ಬಿಡುಗಡೆಯಾಗಿದ್ದು, ಪ್ರಚಾರದ ಹಂತವಾಗಿ ಚಿತ್ರದ ಇನ್ನೊಂದು ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಕಮಾನ್ ಕಾಳಿ …’ ಎಂದು ಸಾಗುವ ಹಾಡನ್ನು ಸುದೀಪ್ ಬಿಡುಗಡೆ ಮಾಡಿದ್ದು ವಿಶೇಷ. ಚಿತ್ರದಲ್ಲಿ ಸುದೀಪ್ ಕಾಲಭೈರವ ಎಂಬ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಆದರೆ, ಸುದೀಪ್ ಎಲ್ಲೂ ಚಿತ್ರದ ಬಗ್ಗೆ ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ ಚಿತ್ರದ ಹಾಡು ಬಿಡುಗಡೆ ಮಾಡುವುದರ ಜೊತೆಗೆ, ಚಿತ್ರದ ಬಗ್ಗೆಯೂ ಒಂದಿಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.
ಹಾಡು ಬಿಡುಗಡೆ ಮಾಡುವ ಮುನ್ನ ಮಾತನಾಡಿದ ಸುದೀಪ್, ‘ಪ್ರೇಮ್ ಒಬ್ಬ ಪ್ಯಾಶನೇಟ್ ನಿರ್ದೇಶಕ. ಜೊತೆಗೆ ವ್ಯಕ್ತಿಯಾಗಿ ನನಗೆ ಅವರು ಬಹಳ ಇಷ್ಟ. ಒಬ್ಬರು ಇಷ್ಟವಾದ ಮೇಲೆ ಅವರಿಗಾಗಿ ಏನು ಬೇಕಾದರೂ ಮಾಡುತ್ತೇವೆ. ಹಾಗಾಗಿ, ಪ್ರೇಮ್ ಕರೆದಾಗ ಇಲ್ಲ ಎನ್ನಲಾಗಲಿಲ್ಲ. ಇದು ನಾನು ಮಾಡುತ್ತಿರುವ ಉಪಕಾರವಲ್ಲ. ಅದು ಅವರ ಪ್ರೀತಿಗಾಗಿ. ಕನ್ನಡ ಚಿತ್ರರಂಗದಲ್ಲಿ ‘ಕೆಡಿ – ದಿ ಡೆವಿಲ್’ ಎಂಬ ಬಹಳ ಅದ್ಧೂರಿಯಾದಂತ ಒಂದು ಸಿನಿಮಾ ಮೂಡಿಬರುತ್ತಿದೆ ಎಂಬ ವಿಷಯ ಗೊತ್ತಿತ್ತು. ಅಷ್ಟು ದೊಡ್ಡ ಸಿನಿಮಾ ಆಗಬೇಕಾದರೆ ನಾನು ಒಂದು ಚಿಕ್ಕದಾಗಿ ಇರೋಣ ಅಂದುಕೊಂಡು ಬಂದೆ. ಪ್ರೇಮ್ ಎಲ್ಲಿರುತ್ತಾರೋ ಅಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ‘ದಿ ವಿಲನ್’ ಚಿತ್ರದಲ್ಲಿ ಕೆಲಸ ಮಾಡುವಾಗ ತುಂಬಾ ಖುಷಿಯಾಯ್ತು. ಅಲ್ಲಿ ಸಿನಿಮಾ ಬಿಟ್ಟು ಬೇರೆ ಮಾತು ಬರುವುದೇ ಇಲ್ಲ. ಅನಾವಶ್ಯಕವಾದಂತಹ ಯಾವುದೇ ಒಂದು ವಿಚಾರಗಳು ಇರಲ್ಲ. ಅಲ್ಲಿ ಕೇಳೋದು ಸಿನಿಮಾ ಬಗ್ಗೆ ಮಾತ್ರ. ಅವರ ಜೊತೆಗೆ ಕೆಲಸ ಮಾಡಿದರೆ, ನಮ್ಮ ಎನರ್ಜಿ ಸಹ ಹೆಚ್ಚಾಗುತ್ತದೆ. ಇನ್ನು, ಧ್ರುವ ಅವರನ್ನು ಅವರು ಚಿಕ್ಕವರಾಗಿದ್ದಾಗಿನಿಂದ ನೋಡಿಕೊಂಡು ಬಂದಿದ್ದೇನೆ. ಅವರ ಅಣ್ಣನ ಜೊತೆಗೆ ಕೆಲಸ ಮಾಡಿದ್ದೆ. ಈಗ ಅವರ ಜೊತೆಗೂ ಕೆಲಸ ಮಾಡುವಂತಾಯಿತು’ ಎಂದರು.

ಈ ಚಿತ್ರದಲ್ಲಿ ಸುದೀಪ್ ಅವರದ್ದು ಕಾಲಭೈರವ ಎಂಬ ಪವರ್ ಫುಲ್ ಪಾತ್ರವೆಂದ ಪ್ರೇಮ್, ‘ಈ ಸಿನಿಮಾದ ಒಂದು ಪಾತ್ರ ನೀವು ಮಾಡಬೇಕು ಎಂದು ಅವರನ್ನು ಕೇಳಿದಾಗ ಒಂದೇ ಮಾತಿಗೆ ಆಯ್ತು ಬರ‍್ತೀನಿ ಅಂದರು. ಚಿತ್ರದಲ್ಲಿ ಅವರು ಕಾಲಭೈರವನಾಗಿ ಅಬ್ಬರಿಸಿದ್ದಾರೆ. ಅವರ ಪಾತ್ರ ತುಂಬಾ ವೈಲೆಂಟ್ ಆಗಿದೆ’ ಎಂದರು.
ಸುದೀಪ್ ಜೊತೆಗೆ ಕೆಲಸ ಮಾಡಿ ತುಂಬಾ ಕಲಿತಿದ್ದಾಗಿ ಧ್ರುವ ಸರ್ಜಾ ಹೇಳಿಕೊಂಡರು. ‘ಒಂದು ದೃಶ್ಯ ಮುಗಿಯಿತು. ಎಲ್ಲರೂ ಚಪ್ಪಾಳೆ ಹೊಡೆದರು. ಥ್ಯಾಂಕ್ ಯೂ ಅಂತ ಹೇಳಿ ತಕ್ಷಣ, ಮುಂದಿನ ಶಾಟ್ ಏನಮ್ಮಾ ಎಂದರು. ಜೀವನದಲ್ಲಿ ಅಷ್ಟು ಯಶಸ್ಸು ನೋಡಿದ್ದರೂ, ಅವರ ತಲೆ ನಿಲ್ಲುತ್ತಿದೆ. ಅದನ್ನು ನೋಡಿ ಅವರಿಂದ ಕಲಿತೆ. ನಾನು ಆರು ಸಿನಿಮಾಗಳನ್ನಷ್ಟೇ ಮಾಡಿರುವವನು. ಆದರೂ ಬಂದು ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡಿದರು’ ಎಂದು ಅವರು ಥ್ಯಾಂಕ್ಸ್ ಹೇಳಿದರು.
ಈ ಸಂದರ್ಭದಲ್ಲಿ ನಾಯಕಿ ರೀಶ್ಮಾ ನಾಣಯ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರು.


