‘ಮಾರ್ಕ್’ ಚಿತ್ರದ ನಂತರ ಸುದೀಪ್ ಅಭಿನಯದ ಯಾವೊಂದು ಚಿತ್ರವೂ ಸೆಟ್ಟೇರಿಲ್ಲ. ಈಗಾಗಲೇ ಸೆಟ್ಟೇರಿದ್ದ ‘ಬಿಲ್ಲ ರಂಗ ಭಾಷಾ’ ಸಹ ನಿಂತಿದೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಇನ್ನು, CCLನಿಂದ ಅವರು ಎಲ್ಲೂ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗಲೇ, ‘ಕೆಡಿ – ದಿ ಡೆವಿಲ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಬಹಳ ದಿನಗಳ ನಂತರ ಮಾಧ್ಯಮದವರೆದುರು ಕಾಣಿಸಿಕೊಂಡರು. ಇಷ್ಟು ದಿನ ಅವರು ಏನು ಮಾಡುತ್ತಿದ್ದರು, ಮುಂದೇನು ಎಂಬುದರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ನಾನು ವರ್ಷ ಐದೂವರೆ ತಿಂಗಳಲ್ಲಿ 120 ದಿನ ಕೆಲಸ ಮಾಡಿದ್ದೆ. 166 ಕಾಲ್‍ಶೀಟ್ಗಳನ್ನು ಕೊಟ್ಟಿದ್ದೆ. ಅದರ ನಂತರ ‘ಬಿಗ್ ಬಾಸ್’, ಆಮೇಲೆ CCL ಬಂತು. ಮೊದಲ ಬಾರಿಗೆ ನನಗೆ ಏನೂ ಕೆಲಸ ಮಾಡದೆ, ಸುಮ್ಮನೆ ರೆಸ್ಟ್ ಮಾಡಬೇಕು ಎಂದನಿಸಿತು. ಹಾಗಾಗಿ, ಮನೆಯಲ್ಲೇ ಇದ್ದೆ. ಊಟ ಮಾಡಿದೆ. ವರ್ಕೌಟ್ ಮಾಡಿದೆ. ಅಡಿಗೆ ಮಾಡಿಕೊಂಡಿದ್ದೆ. ಗ್ಯಾಪ್‍ನಲ್ಲಿ ಕ್ರಿಕೆಟ್ ಆಡುತ್ತಿದ್ದೆ. ನಾನು ವಿಶ್ರಾಂತಿ ಪಡೆದಿದ್ದು ಇನ್ನಷ್ಟು ಉತ್ತಮನಾಗೋಕೆ. ಹೀರೋಗಳೆಂದರೆ, ಹೇಗೆ ಬೇಕಾದರೂ ಕಾಣಬಹುದು ಅಂದುಕೊಳ್ಳೋದು ತಪ್ಪು. ನಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಇರಬೇಕು. ಹಾಗಾಗಿ, ಕೆಲವು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದೆ. ‘ಬಿಲ್ಲ ರಂಗ ಭಾಷಾ’ ಸದ್ಯದಲ್ಲೇ ಶುರು ವಾಗಲಿದೆ. ನಾನೊಬ್ಬ ನಟ. ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಒಂದರ ಹಿಂದೊಂದು ಚಿತ್ರಗಳ ಚಿತ್ರೀಕರಣ ನಡೆಯಲಿದೆ. ಯಾವಾಗ ಏನು ಮಾಡಬೇಕೋ ಖಂಡಿತಾ ಮಾಡಿಯೇ ಮಾಡುತ್ತೇನೆ’ ಎಂದರು.

ಕಲಾವಿದರು ಸಿನಿಮಾಗಿಂತ ಬೇರೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಸ್ಟಾರ್ ನಟರ ಹೊಸ ಚಿತ್ರಗಳು ಬರುತ್ತಿಲ್ಲ, ಅದರಿಂದ ಚಿತ್ರರಂಗಕ್ಕೂ ಸಮಸ್ಯೆ ಎದುರಾಗುತ್ತಿದೆ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ನಾನು ನಾಲ್ಕು ವೀಕೆಂಡ್‍ಗಳಲ್ಲಿ CCL ಆಡಿದೆ. ಆ ನಾಲ್ಕು ವೀಕೆಂಡ್‍ಗಳನ್ನ ಮೈನಸ್ ಮಾಡಿದರೆ ಚಿತ್ರರಂಗಕ್ಕೆ ನನ್ನ ಎಲ್ಲಾ ಭಾಗಗಳನ್ನು ಕೊಟ್ಟಿದ್ದೇನೆ. CCLನಿಂದ ಏನು ತೊಂದರೆ ಆಗಿದೆ? ಇನ್ನು, IPL ವಿಷಯ ತೆಗೆದುಕೊಂಡರೆ, ಅದರಿಂದ ಚಿತ್ರರಂಗಕ್ಕೆ ಏನು ಸಮಸ್ಯೆ? ಇವತ್ತು ಯಾವುದೇ ಚಿತ್ರರಂಗ ತೆಗೆದುಕೊಂಡರೂ ಎಲ್ಲಾ ಕಡೆ ಸ್ಟಾರ್ ನಟರಿರಬಹುದು. ಹಾಗಂತ ಬೇರೆ ನಟರು ಸಿನಿಮಾ ಮಾಡುವುದಿಲ್ಲವೆ? ಇವತ್ತು ಚಿತ್ರರಂಗ ಸಮಸ್ಯೆ ಎದುರಿಸುತ್ತಿದೆ ಎಂದರೆ ಅದು IPLನಿಂದಲ್ಲ. ನಾವು ಕೆಲವು ತಪ್ಪುಗಳನ್ನು ಮಾಡಿರುವುದರಿಂದ ಸಮಸ್ಯೆ ಎದುರಾಗಿದೆ. ತಪ್ಪಾದಾಗ ತಿದ್ದಿಕೊಳ್ಳುತ್ತೇವೆ, ತಿದ್ದಿಕೊಂಡು ಬೆಳೆಯುತ್ತೇವೆ’ ಎಂದರು.
ಬರೀ ‘ಕೆಡಿ – ದಿ ಡೆವಿಲ್’ ಅಷ್ಟೇ ಅಲ್ಲ, ಬಿಡುಗಡೆಯಾಗುತ್ತಿರುವ ಚಿತ್ರಗಳೆಲ್ಲಾ ಕನ್ನಡಕ್ಕೆ ಮುಖ್ಯವಾದ ಚಿತ್ರಗಳು ಎನ್ನುವ ಅವರು, ‘ಇದರಲ್ಲಿ ದೊಡ್ಡದು, ಚಿಕ್ಕದು ಅಂತೇನಿಲ್ಲ. ಕನ್ನಡ ಚಿತ್ರರಂಗ ಇವತ್ತು ಬಹಳ ನಿರ್ಣಾಯಕ ಹಂತದಲ್ಲಿದೆ. ಹಾಗಿರುವಾಗ, ಪ್ರತಿ ಸಿನಿಮಾಗೂ ಎಷ್ಟು ಸಪೋರ್ಟ್ ಸಿಗುತ್ತದೋ ಅಷ್ಟು ಮಾಡಬೇಕು. ಇಲ್ಲಿ ಸಣ್ಣಪುಟ್ಟ ತಪ್ಪುಗಳಾದಾಗ, ಅದನ್ನೇ ದೊಡ್ಡದು ಮಾಡಲಾಗುತ್ತದೆ. ಯಾವಾಗೆಲ್ಲಾ ಒಂದು ಶೂನ್ಯ ಆವರಿಸುತ್ತದೋ, ಆವಾಗೆಲ್ಲಾ ಬೇರೆಯವರು ಇಲ್ಲಿಗೆ ಬರುತ್ತಾರೆ. ಚಿತ್ರರಂಗ ಎಂದ ಮೇಲೆ ಇವೆಲ್ಲಾ ಸಹಜ. ಇದು ನಮ್ಮ ಸಿನಿಮಾ. ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮೀರಬೇಕೆಂದರೆ, ನಾವು ದುರ್ಬೀನು, ಮೈಕ್ರೋಸ್ಕೋಪ್ ಹಾಕಿಕೊಂಡು ತಪ್ಪುಗಳನ್ನು ಹುಡುಕಬಾರದು. ಅದನ್ನೇ ದೊಡ್ಡದು ಮಾಡಬಾರದು. ತಪ್ಪು ಎನ್ನುವ ಬದಲು ತಿದ್ದಿಕೊಳ್ಳೋಕೆ ಒಂದು ಅವಕಾಶ ಕೊಟ್ಟು, ಸಿನಿಮಾಗಳನ್ನು ಉದ್ದಾರ ಮಾಡೋಕೆ ಹೋದಾಗ ಚಿತ್ರರಂಗ ಮತ್ತೆ ಎದ್ದು ನಿಲ್ಲುತ್ತದೆ. ಹಾಗಾಗಿ, ‘ಕೆಡಿ – ದಿ ಡೆವಿಲ್’ ಒಂದೇ ಅಲ್ಲ, ಬಿಡುಗಡೆಯಾಗತ್ತಿರುವ ಎಲ್ಲಾ ಚಿತ್ರಗಳು ಸಹ ಅದರಷ್ಟೇ ಮುಖ್ಯ. ಹಾಗಾಗಿ, ನಾವು ಎಲ್ಲಾ ಚಿತ್ರಗಳನ್ನೂ ಸಪೋರ್ಟ್ ಮಾಡಬೇಕು’ ಎಂದರು.

‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ನೀಡಿದ ಅವರು, ‘ಈ ಚಿತ್ರ ಮಾಡೋದಕ್ಕೆ ಇಬ್ಬರು ವ್ಯಕ್ತಿಗಳು ಕಾರಣ. ಈ ಹಿಂದೆಯೂ ನನ್ನ ಸ್ನೇಹಿತರು ಸಿನಿಮಾ ಮಾಡಿದಾಗ ಅವರ ಜೊತೆಗೆ ನಾನಿದ್ದೇನೆ. ಚಂದನ್ ಸಿನಿಮಾ ಮಾಡಿದಾಗ, ನೇರವಾಗಿ ಏರ್ಪೋರ್ಟ್ನಿಂದ ಸ್ಟುಡಿಯೋಗೆ ಹೋಗಿ ಒಂದು ಹಾಡು ಶೂಟ್ ಮಾಡಿಕೊಟ್ಟು ಬಂದೆ. ನನ್ನ ಗೆಳೆಯರಿಗೆ ನನ್ನ ಅವಶ್ಯಕತೆ ಇದೆ ಎಂದನಿಸಿದರೆ, ನಾವು ಎರಡನೇ ಯೋಚನೆ ಮಾಡಬಾರದು. ನನ್ನನ್ನು ಕರೆದರೆ, ನನ್ನನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜವಾಬ್ದಾರಿ ಅವರಿಗೂ ಇರುತ್ತದೆ. ಇಲ್ಲಿ ಚಿತ್ರದ ಹೀರೋ ಧ್ರುವ. ಅವರನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೀನಿ. ನನಗೆ ಅವರು ಒಬ್ಬ ನಟನಾಗಿ, ಡ್ಯಾನ್ಸರ್ ಆಗಿ ಬಹಳ ಇಷ್ಟ. ಅವರು ನಮ್ಮ ಕುಟುಂಬದವರ ತರಹ. ಇನ್ನು, ನನಗೆ ಪ್ರೇಮ್ ಹಳೆಯ ಪರಿಚಯ. ಅವರು ಮೊದಲು ನಮ್ಮ ಕುಟುಂಬದವರು. ಆ ನಂತರ ನಿರ್ದೇಶಕರು. ಕುಟುಂಬ ಅಂತ ಬಂದಾಗ ನಾನು ಅವರ ಜೊತೆಗೆ ಇದ್ದೇ ಇರುತ್ತೇನೆ’ ಎಂದರು.
ಇನ್ನು, ಚಿತ್ರಕ್ಕೆ ಎದುರಾದ ಸೆನ್ಸಾರ್ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ‘ಚಿತ್ರದ ಹಾಡಿನ ವಿವಾದವಾದಾಗ, ನಾನು ಪ್ರೇಮ್ ಅವರಿಗೆ ಫೋನ್ ಮಾಡಿ ಏನಾಯ್ತು ಅಂತ ಕೇಳಿದೆ. ‘ಕೆಲವೊಮ್ಮೆ ತಪ್ಪುಗಳಾಗುತ್ತವೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹಾಡಿಗೆ ಹೊಸದಾಗಿ ಸಾಹಿತ್ಯ ಬರೆಸಿ ಇನ್ನೊಮ್ಮೆ ಬಿಡುಗಡೆ ಮಾಡಿ ಎಂದು ಹೇಳಿದೆ. ಈ ಸೆನ್ಸಾರ್ ವಿಚಾರದಲ್ಲಿ ನಮ್ಮ ಸಿನಿಮಾಗಳೇ ಸಾಕಷ್ಟು ಸಮಸ್ಯೆ ಎದುರಿಸುತ್ತವೆ. ಸೆನ್ಸಾರ್ ಮಂಡಳಿಯವರಿಗೆ ಅವರದ್ದೇ ಆದ ಜವಾಬ್ದಾರಿಗಳಿರುತ್ತವೆ. ಇಲ್ಲಿ ಕೂತು ಅವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ. ಒಂದೊಂದು ಸಿನಿಮಾಗೆ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಈ ಸಿನಿಮಾದಲ್ಲಿ ಏನಾಯ್ತು ನನಗೆ ಗೊತ್ತಿಲ್ಲ’ ಎಂದರು.


