ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ‘ಸೆಪ್ಟೆಂಬರ್ 10’ ಎಂಬ ಸಾಮಾಜಿಕ ಕಳಕಳಿ ಚಿತ್ರ ಮಾಡಿದ್ದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತದೆ ಎಂಬ ಕಲ್ಪನೆಯೊಂದಿಗೆ ಹೊಸದೊಂದು ಚಿತ್ರ ಮಾಡಿದ್ದಾರೆ. ‘ಕೆರೆಬೇಟೆ’ ಚಿತ್ರದ ನಾಯಕ ಗೌರಿಶಂಕರ್ ಈ ಬಾರಿ ‘ಕಾಮನ್ ಮ್ಯಾನ್’ ಆಗಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ.
‘ಕಾಮನ್ ಮ್ಯಾನ್’ ಚಿತ್ರವನ್ನು ಸುರಭಿ ಫಿಲಂಸ್ ಅಡಿ ಎನ್. ನರಸಿಂಹಮೂರ್ತಿ ನಿರ್ಮಿಸುವುದರ ಜೊತೆಗೆ ಚಿತ್ರಕ್ಕೆ ಕಥೆ ಬರೆದು, ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿನಯ ಚಂದ್ರ ಅವರ ಸಂಗೀತ ನಿರ್ದೇಶನ, ಜೆ.ಜಿ.ಕೃಷ್ಣ ಮತ್ತು ದೀಪಕ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದು ಸಾಯಿಪ್ರಕಾಶ್ ನಿರ್ದೇಶನದ 106ನೇ ಚಿತ್ರ. ‘ಒಬ್ಬ ಸಾಮಾನ್ಯ ಮನುಷ್ಯ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದ ಮೂಲಕ ತೋರಿಸಿದ್ದೇವೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತದೆ. ಚಿತ್ರದ ನಾಯಕ ಒಬ್ಬ ಲಾಯರ್. ಆತ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗುತ್ತಾನೆ. ನಂತರ ಆತ ಏನೇನು ಮಾಡಬಹುದು, ಸಮಾಜದಲ್ಲಿ ಏನಾದರೂ ಸುಧಾರಣೆ ಮಾಡಲು ಸಾಧ್ಯವಾಯಿತಾ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಕಥೆ ಕೇಳಿದ ಕೂಡಲೇ ಇದು ಒಳ್ಳೆಯ ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ಗೌರಿಶಂಕರ್ ಅವರಿಗೆ ನಾಯಕಿಯಾಗಿ ಸೋನಾ ಲದ್ವಾ ನಟಿಸಿದ್ದಾರೆ. ಮುಂಬೈ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಇದು ಕಂಟೆಂಟ್ ಇರುವ ಸಿನಿಮಾ. ಜಾತ್ರೆ ಸಿನಿಮಾ ಅಲ್ಲ’ ಎಂದರು.

ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ, ‘ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ, ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು ಮೂರನೇ ಚಿತ್ರ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದ್ರೂ ಮಾಡಬಹುದು. ಮಾತಿನ ಭಾಗ 40 ದಿನ ಶೂಟಿಂಗ್ ಅಂದಿದ್ದರು. 32 ದಿನಕ್ಕೇ ಮುಗಿಸಿ ಕೊಟ್ಟರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ’ ಎಂದರು.
ನಾಯಕ ಗೌರಿಶಂಕರ್ ಮಾತನಾಡಿ, ‘’ಕೆರೆಬೇಟೆ ನಂತರ ಒಂದೊಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಅವಕಾಶ ಸಿಕ್ಕಾಗ ನನಗೆ ಆಶ್ಚರ್ಯವಾಯ್ತು. ಬಯಸಿದಂಥ ಪಾತ್ರವೇ ಹುಡುಕಿಕೊಂಡು ಬಂದಿತ್ತು. ನಿರ್ದೇಶಕರು ನನ್ನಂಥ ಚಿಕ್ಕ ಕಲಾವಿದನಿಗೆ ತಾಳ್ಮೆಯಿಂದ ಕಥೆ ಹೇಳಿದರು. ಪಾತ್ರಗಳು, ದೃಶ್ಯಗಳನ್ನು ಆರಂಭದಿಂದ ಎಂಡ್ ವರೆಗೆ ನೀಟಾಗಿ ತೆಗೆದುಕೊಂಡು ಹೋಗಿದ್ದರು. ತುಂಬಾ ಶಿಸ್ತುಬದ್ದವಾಗಿ ಸಿನಿಮಾ ಮಾಡುತ್ತಾರೆ. ನಮಗೆಲ್ಲಾ ಅವರು ದೊಡ್ಡ ಪಾಠ. ಯಾವ ಸಿನಿಮಾನೂ ಕಥೆಗಿಂತ ದೊಡ್ಡದಲ್ಲ ಎಂಬ ಅವರ ಮಾತು ಖಂಡಿತಾ ನಿಜ. ಚಿಕ್ಕಂದಿನಿಂದ ನನಗೂ ಅಡ್ವೊಕೇಟ್ ಆಗಬೇಕೆಂಬ ಆಸೆ ಇತ್ತು. ಅದು ಈ ಚಿತ್ರದಲ್ಲಿ ಈಡೇರಿದೆ’ ಎಂದು ಹೇಳಿದರು.
‘ಕಾಮನ್ ಮ್ಯಾನ್’ ಚಿತ್ರದಲ್ಲಿ ಗಣೇಶ್ ರಾವ್ ಕೇಸರ್ಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಮುಂತಾದವರು ನಟಿಸಿದ್ದಾರೆ.
ಕಾಳಿದಾಸನ ಹಾಡು ಕಾಲಭೈರವನಿಂದ ಬಿಡುಗಡೆ; ‘ಕೆಡಿ’ಯಿಂದ ಬಂತು ಮತ್ತೊಂದು ಹಾಡು


