ಚಿತ್ರ: ಕೆಡಿ – ದಿ ಡೆವಿಲ್
ನಿರ್ಮಾಣಳ: ಕೆ. ವೆಂಕಟ್ ನಾರಾಯಣ್
ನಿರ್ದೇಶನ: ಪ್ರೇಮ್
ತಾರಾಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು
ನಿರ್ದೇಶಕ ಪ್ರೇಮ್ ಭೂಗತ ಲೋಕದ ಚಿತ್ರಗಳಿಗೆ ಜನಪ್ರಿಯರು. ‘ಕರಿಯ’, ‘ಜೋಗಿ’, ‘ಜೋಗಯ್ಯ’ ಇವೆಲ್ಲವೂ ಭೂಗತಲೋಕದ ಕುರಿತಾದ ಚಿತ್ರಗಳೇ. ಹಾಗೆಯೇ ಅವರ ಚಿತ್ರಗಳಲ್ಲಿ ತಾಯಿ ಸೆಂಟಿಮೆಂಟ್ ಪ್ರಮುಖ ಪಾತ್ರ ವಹಿಸುತ್ತದೆ. ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಅವರು ಭೂಗತ ಲೋಕದಲ್ಲಿ ಅಡ್ಡಾಡುವುದನ್ನು ಮುಂದುವರೆಸಿದ್ದರೂ ಮದರ್ ಸೆಂಟಿಮೆಂಟ್ ಬಿಟ್ಟಿದ್ದಾರೆ. ಮೊದಲ ಬಾರಿಗೆ ಬ್ರದರ್ ಸೆಂಟಿಮೆಂಟ್ ಹಿನ್ನೆಲೆಯಲ್ಲಿ ಒಂದು ಕಥೆಯನ್ನು ಹೇಳಿದ್ದಾರೆ.
ಕೆಡಿ ಅಲಿಯಾಸ್ ಕಾಳಿದಾಸ (ಧ್ರುವ ಸರ್ಜಾ) 70ರ ಕಾಲಘಟ್ಟದ ಹಳೆಯ ಬೆಂಗಳೂರು ನಿವಾಸಿ. ಓದು ಬಿಟ್ಟು ಸೀಮೆ ಎಣ್ಣೆ ವ್ಯಾಪಾರ ಮಾಡುತ್ತಿರುವ ಈ ಮುಗ್ಧ ಮತ್ತು ಅನಕ್ಷರಸ್ಥ ತಮ್ಮನ ಕುರಿತು ಅಣ್ಣನಿಗೆ (ರಮೇಶ್ ಅರವಿಂದ್) ತಾತ್ವಿಕ ಭಿನ್ನಾಭಿಪ್ರಾಯ. ಆದರೆ, ಅಣ್ಣನ ಬಗ್ಗೆ ತಮ್ಮನಿಗೆ ಅತೀವವಾದ ಪ್ರೀತಿ ಮತ್ತು ಗೌರವ. ಹೀಗಿರುವಾಗಲೇ, ಕಾಳಿಗೆ ಊದಿನ ಕಡ್ಡಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಬಜಾರಿ ಮಚ್ಚ್ ಲಕ್ಷ್ಮೀ ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಇನ್ನೇನು ಅವರು ಒಂದಾಗಬೇಕು ಎನ್ನುವಷ್ಟರಲ್ಲಿ ಕಾಳಿ ಜೀವನದಲ್ಲಿ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಆ ಘಟನೆಗಳೇನು ಮತ್ತು ಆ ಘಟನೆಗಳಿಂದ ಕಾಳಿಯ ಜೀವನ ಎಷ್ಟು ಬದಲಾಗುತ್ತದೆ ಎಂಬುದೇ ‘ಕೆಡಿ – ದಿ ಡೆವಿಲ್’ ಚಿತ್ರದ ಕಥೆ.
ಬೆಂಗಳೂರಿನ ಭೂಗತಲೋಕದ ಬಗ್ಗೆ ಹಲವಾರು ಸಿನಿಮಾಗಳು ಬಂದಿವೆ. ಅದರಲ್ಲೂ ಜಯರಾಜ್, ಕೋತ್ವಾಲ್ ಮುಂತಾದ ರೌಡಿಗಳ ಕಾಲಘಟ್ಟದ ಹಲವು ಕಥೆಗಳು ಸಿನಿಮಾಗಳಾಗಿವೆ. ಇದು ಅದಕ್ಕಿಂತ ಹಿಂದಿನ ಒಂದು ಕಥೆ. ಇಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಅವರ ಅಳಿಯ ನಟರಾಜ್ ಅವರ ಹೋಲುವ ಪಾತ್ರಗಳಿವೆಯಾದರೂ, ಇದೊಂದು ಕಾಲ್ಪನಿಕ ಕಥೆ. ಈ ಕಾಲ್ಪನಿಕ ಕಥೆಗಾಗಿ ಆಗಿನ ಬೆಂಗಳೂರನ್ನೇ ಮರುಸೃಷ್ಟಿ ಮಾಡಿದ್ದಾರೆ ಪ್ರೇಮ್. ಆಗಿನ ಶಿವಾಜಿ ಚಿತ್ರಮಂದಿರ, ಟೌನ್ ಹಾಲ್, ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳನ್ನು ಸೃಷ್ಟಿ ಮಾಡಿ, ಆ ಹಿನ್ನೆಲೆಯಲ್ಲಿ ಒಂದು ರೌಡಿಸಂ ಕಥೆಯನ್ನು ಹೇಳಿದ್ದಾರೆ.
ಹಾಗಂತ ಕಥೆ ಪೂರ್ತಿಯಾಗಿಲ್ಲ. ಒಂದು ಘಟ್ಟ ಮುಗಿದಿದೆ ಅಷ್ಟೇ. ಅದನ್ನು ಇನ್ನೊಂದು ಚಿತ್ರದಲ್ಲಿ ಪೂರ್ತಿ ಮಾಡುತ್ತಾರಂತೆ ಪ್ರೇಮ್. ಹಾಗಂತ ಅವರೇ ಚಿತ್ರದ ಕೊನೆಯಲ್ಲಿ ‘ಕೆಡಿ – ದಿ ಡೆವಿಲ್ 2’ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಹಾಗಾಗಿ, ಚಿತ್ರದ ಕಥೆ ಏನು ಎಂಬುದಕ್ಕೆ ಮುಂದುವರೆದ ಭಾಗದವರೆಗೂ ಕಾಯಬೇಕು. ಚಿತ್ರದಲ್ಲಿ ಉದ್ಭವವಾಗಿರುವ ಹಲವು ಪ್ರಶ್ನೆಗಳಿಗೆ ಎರಡನೆಯ ಭಾಗದಲ್ಲಿ ಉತ್ತರ ಸಿಗಬೇಕು. ಕಾಲಭೈರವ, ಸತ್ಯವತಿ, ಧರ್ಮ, ಅಣ್ಣಯ್ಯಪ್ಪ ಮುಂತಾದ ಪಾತ್ರಗಳು ಪರಿಪೂರ್ಣವಾಗುವುದಕ್ಕೆ ಇನ್ನಷ್ಟು ಸಮಯ ಬೇಕು. ಕಥೆಯಲ್ಲಿ ಆ ಪಾತ್ರಗಳ ಪಾತ್ರವೇನು? ಅವು ಯಾಕಾಗಿ ಬರುತ್ತವೆ? ಮುಂದೇನು ಮಾಡುತ್ತವೆ? ಮುಂತಾದ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಹಾಗಾಗಿ, ಕಥೆಯ ವಿಷಯದಲ್ಲಿ ಇದು ಸದ್ಯಕ್ಕೆ ಒಂದು ಅಪೂರ್ಣವಾದ ಚಿತ್ರ.
ಕಥೆ ಅಪೂರ್ಣ ಎನ್ನುವುದಷ್ಟೇ ‘ಕೆಡಿ – ದಿ ಡೆವಿಲ್’ ಚಿತ್ರದ ತೊಡಕಲ್ಲ. ಪಟ್ಟಿ ಮಾಡುತ್ತಾ ಹೋದರೆ, ಸಾಕಷ್ಟು ಹೆಕ್ಕಬಹುದು. ಪ್ರಮುಖವಾಗಿ, ಇಲ್ಲಿ ಎಲ್ಲವೂ ‘ಟೂ ಮಚ್ಚು’ ಆಗಿದೆ. ಬಜೆಟ್, ಅದ್ದೂರಿತನ, ನಾಟಕೀಯತೆ, ಅಭಿನಯ, ರಕ್ತಪಾತ, ಶಬ್ಧ ಎಲ್ಲವೂ ಜೋರಾಗಿಯೇ ಇದೆ. ಇಡೀ ಚಿತ್ರವನ್ನು ಸಾಕಷ್ಟು ನಾಟಕೀಯವಾಗಿ ನಿರೂಪಿಸಿದ್ದಾರೆ ಪ್ರೇಮ್. ಒಂದೆರಡು ಪಾತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಬಹಳಷ್ಟು ಪಾತ್ರಗಳು ಮಾತಾಡುವ ಶೈಲಿ, ಮ್ಯಾನರಿಸಂ ಎಲ್ಲವೂ ಜಾಸ್ತಿ ಎನಿಸುತ್ತದೆ. ಚಿತ್ರ ಒಂದು ಕುತೂಹಲಕರ ಅಂಶದೊಂದಿಗೆ ಶುರುವಾದರೂ, ಪ್ರಮುಖ ಪಾತ್ರಗಳಿಗೆ ಬಿಲ್ಡಪ್ ಕೊಡುವುದಕ್ಕೆ ಹೋಗಿ ಸಾಕಷ್ಟು ಸಮಯವಾಗುತ್ತದೆ. ಹೀಗೆ ಮಂದವಾಗಿ ಸಾಗುವ ಚಿತ್ರಕ್ಕೆ ವೇಗ ಸಿಗುವುದು ದ್ವಿತೀಯಾರ್ಧದಲ್ಲೇ. ಮಧ್ಯೆ ಮಧ್ಯೆ ಒಂದೆರಡು ಹಾಡು, ಫೈಟು, ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ದ್ವಿತೀಯಾರ್ಧದಲ್ಲಿ ರಕ್ತದ ಓಕುಳಿಯನ್ನೇ ಹರಿಸಿದ್ದಾರೆ ಪ್ರೇಮ್. ತನ್ನವರನ್ನು ಕಾಪಾಡಬೇಕು ಎಂದರೆ ಯುದ್ಧ ಮಾಡುವುದು ಅನಿವಾರ್ಯ ಎಂದು ಕಾಳಿಗೆ ಯಾವಾಗ ಸ್ಪಷ್ಟವಾಗುತ್ತದೋ, ಅಲ್ಲಿಂದ ಹಿಂಸೆ, ಕ್ರೌರ್ಯ ಎಲ್ಲವೂ ದುಪ್ಪಟ್ಟಾಗುತ್ತದೆ. ರುಂಡ-ಮುಂಡಗಳು, ಕೈ-ಕಾಲುಗಳು ಗಾಳಿಯಲ್ಲಿ ಹಾರಾಡುತ್ತವೆ. ನಾಯಕನ ಆರ್ಭಟದ ಮುಂದೆ ಪೊಲೀಸ್ ವ್ಯವಸ್ಥೆ ಮತ್ತು ಸೆನ್ಸಾರ್ ಮಂಡಳಿ ಎರಡೂ ಅಸಹಾಯಕವಾಗಿದೆ.
ಇನ್ನು, ಇದುವರೆಗೂ ಬಂದ ರೆಟ್ರೋ ರೌಡಿಸಂ ಕಥೆಗಳಿಗೆ ಆ ಕಾಲಘಟ್ಟದ ಪರಿಕರಗಳನ್ನು ಬಳಸಿ, ವೇಷಭೂಷಣಗಳನ್ನು ತೋರಿಸಿ ಆ ಕಾಲಘಟ್ಟವನ್ನು ಕಟ್ಟಿಕೊಡಲಾಗುತ್ತಿತ್ತು. ಆದರೆ, ಈ ಚಿತ್ರಕ್ಕೆ ಒಂದು ಕೃತಕ ಬೆಂಗಳೂರನ್ನೇ ಮರುಸೃಷ್ಟಿ ಮಾಡಿದ್ದಾರೆ ಪ್ರೇಮ್. ಈ ಕಾಲಘಟ್ಟ ಮತ್ತು ಪರಿಸರ ನೈಜವಾಗಿ ಮೂಡಿಬರುವುದಕ್ಕೆ ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಮತ್ತು ಛಾಯಾಗ್ರಾಹಕ ವಿಲಿಯಂ ಡೇವಿಡ್ ಅವರ ಪಾತ್ರ ದೊಡ್ಡದು. ಕಲಾ ನಿರ್ದೇಶನ, ಛಾಯಾಗ್ರಹಣ ಮತ್ತು VFX ನಿಜಕ್ಕೂ ಚಿತ್ರದ ಹೈಲೈಟ್‍ಗಳು ಎಂದರೆ ತಪ್ಪಿಲ್ಲ. ಇಂಥದ್ದೊಂದು ಸೃಷ್ಟಿಗೆ ಕೆ.ವಿ.ಎನ್ ಪ್ರೊಡಕ್ಷನ್ಸ್ ಉದಾರವಾಗಿ ಹಣ ಖರ್ಚು ಮಾಡದಿದ್ದರೆ, ಚಿತ್ರ ಇಷ್ಟೊಂದು ಚೆಂದವಾಗಿ ಕಾಣುವುದಕ್ಕೆ ಸಾಧ‍್ಯವಾಗುತ್ತಿರಲಿಲ್ಲ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಖುಷಿಕೊಟ್ಟರೆ, ಹಿನ್ನೆಲೆ ಸಂಗೀತ ಕಿವಿಗೆ ಅಪ್ಪಳಿಸುತ್ತದೆ. ಹೊಸ ಸಾಹಿತ್ಯದೊಂದಿಗ ‘ಸರ್ಸೆ ಸರ್ಸೆ …’ ಹಾಡು ಬರಬಹುದು ಎಂದು ಕಾದವರಿಗೆ ನಿರಾಶೆ ಖಂಡಿತಾ. ಹಾಡನ್ನು ಕಟ್ ಮಾಡಲಾಗಿದೆ. ಇನ್ನು, ಪ್ರೇಮ್ ತಮ್ಮ ಹಿಂದಿನ ಚಿತ್ರಗಳಂತೆಯೇ ಈ ಚಿತ್ರವನ್ನೂ ಅದ್ದೂರಿಯಾಗಿಯೇ ಮಾಡಿದ್ದಾರೆ. ಪ್ರತಿ ಫೇಮ್‍ನಲ್ಲೂ ನೂರಾರು ಜನ ಕಾಣುತ್ತಾರೆ. ಅವರನ್ನೆಲ್ಲಾ ಸಂಭಾಳಿಸುವುದು ಅಷ್ಟು ಸುಲಭದ ಮಾತಲ್ಲ. ಅದ್ದೂರಿತನಕ್ಕೆ ಮತ್ತು ತಂತ್ರಜ್ಞಾನಕ್ಕೆ ಸಾಕಷ್ಟು ತಲೆ ಕೆಡಿಸಿಕೊಂಡಿರುವ ಪ್ರೇಮ್, ಚಿತ್ರಕಥೆ ಮತ್ತು ನಿರೂಪಣೆ ವಿಷಯದಲ್ಲೂ ಅಷ್ಟೇ ತಲೆ ಕೆಡಿಸಿಕೊಂಡಿದ್ದರೆ, ಚಿತ್ರ ಇನ್ನೊಂದು ರೇಂಜಿಗೆ ಇರುತ್ತಿತ್ತು.
ಧ್ರುವ ಸರ್ಜಾ ಎರಡು ಶೇಡ್‍ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ಅವರು ಹೆಚ್ಚು ಮಿಂಚಿದ್ದಾರೆ. ನೃತ್ಯ, ಫೈಟು ಎರಡರಲ್ಲೂ ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸುತ್ತಾರೆ. ರೀಷ್ಮಾ ನಾಣಯ್ಯ, ಮಚ್ಚ್ ಲಕ್ಷ್ಮೀ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಭಾಷೆ ತೊಡಕಾದ್ದರಿಂದ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯ ಡಲ್ ಎನಿಸುತ್ತದೆ. ಧ್ರುವ ಅಣ್ಣನಾಗಿ ರಮೇಶ್ ಇಷ್ಟವಾಗುತ್ತಾರೆ. ರವಿಚಂದ್ರನ್ ಮೂರು ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಸುದೀಪ್ ಭಾಗದ ದೃಶ್ಯಗಳು ಶುರುವಾಗುತ್ತಿದ್ದಂತೆಯೇ ಮುಗಿದು ಹೋಗುತ್ತವೆ. ರವಿಶಂಕರ್, ಯಶ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರಿದ್ದಾರೆ.
ಇದಕ್ಕೆ ಮೊದಲು ಪ್ರೇಮ್ ಸಂದರ್ಶನವೊಂದರಲ್ಲಿ, ಚಿತ್ರವು ಟ್ರೇಲರ್‍ನಂತಿದೆ ಎಂದು ಹೇಳಿದ್ದರು. ಅವರ ಮಾತು ಅಕ್ಷರಶಃ ನಿಜ. ‘ಕೆಡಿ – ಡಿ ಡೆವಿಲ್’ ಚಿತ್ರವು ‘ಕೆಡಿ – ಡಿ ಡೆವಿಲ್ – ಭಾಗ 2’ರ ಟ್ರೇಲರ್‍ನಂತಿದೆ. ಚಿತ್ರ ನೋಡಬೇಕಿದ್ದರೆ, ‘ಭಾಗ 2’ ಬಿಡುಗಡೆ ಆಗುವವರೆಗೂ ಕಾಯಬೇಕು.
ಕಾಳಿದಾಸನ ಹಾಡು ಕಾಲಭೈರವನಿಂದ ಬಿಡುಗಡೆ; ‘ಕೆಡಿ’ಯಿಂದ ಬಂತು ಮತ್ತೊಂದು ಹಾಡು


