ಬಹುಶಃ ರವಿಚಂದ್ರನ್ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜಿಸದಿದ್ದರೆ ಏನಾಗುತ್ತಿತ್ತು? ಹಂಸಲೇಖ ಸಂಯೋಜಿಸಿದ ಹಾಡುಗಳನ್ನು ರವಿಚಂದ್ರನ್ ಚಿತ್ರಿಸದಿದ್ದರೆ ಏನಾಗುತ್ತಿತ್ತು? ಗೊತ್ತಿಲ್ಲ. ಬೇರೆ ಯಾರಾಗಿದ್ದರೂ ಅಂಥದ್ದೊಂದು output ನಿರೀಕ್ಷಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲವೇನೋ? ಆ ಮಟ್ಟಿಗೆ ರವಿಚಂದ್ರನ್ ಮತ್ತು ಹಂಸಲೇಖ ಅವರದ್ದು ಅಪರೂಪದ ಜೋಡಿ. ಎಲ್ಲೋ ಇದ್ದವರು. ಒಟ್ಟಿಗೆ ಸೇರಿದರು. ಮ್ಯಾಜಿಕ್ ಮಾಡಿದರು. ದೂರವಾದರು. ಇಬ್ಬರೂ ಈಗ ಒಟ್ಟಿಗೆ ಕೆಲಸ ಮಾಡದಿರಬಹುದು. ಅವರಿಬ್ಬರ ಮಧ್ಯೆ ಸ್ನೇಹ ಕಡಿಮೆಯಾಗಿಲ್ಲ. ಸೋಮವಾರ (ಜೂನ್ 23) ಹಂಸಲೇಖ ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ನಿರ್ದೇಶನದ ಮೊದಲ ಚಿತ್ರ ‘ಓಕೆ’ ಸೆಟ್ಟೇರಿತು. ರಾತ್ರಿ ನಡೆದ ಸಮಾರಂಭದಲ್ಲಿ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಹಂಸಲೇಖ ತಮ್ಮ ಯಜಮಾನರ ಬಗ್ಗೆ ಒಂದಿಷ್ಟು ಮಾತನಾಡಿದ ನಂತರ, ರವಿಚಂದ್ರನ್ ತಮ್ಮ ಪ್ರೀತಿಯ ರಾಜು ಬಗ್ಗೆ ಮಾತನಾಡಿದ್ದು ಹೀಗೆ …
* ಈಗ ಎಲ್ಲರೂ ತಮ್ಮ ಚಿತ್ರ ಗೆದ್ದಿದೆ ಎಂದು ಹೇಳಿಕೊಳ್ಳುತ್ತಾರೆ. ಸಕ್ಸಸ್ ಯಾವುದು ಅಂತ ಅವನಿಗೇ (ಪ್ರೇಕ್ಷಕ) ಗೊತ್ತಿಲ್ಲ. ಅದೇ ಯಶಸ್ಸೇನೋ, ಇನ್ನು ಜಾಸ್ತಿ ಕೊಡೋದು ಬೇಡ ಎಂದು ನಿಲ್ಲಿಸಿಬಿಟ್ಟಿದ್ದಾನೆ. ಅದೇ ಸಮಸ್ಯೆ ಆಗಿರೋದು ಈಗ. 1986ರಲ್ಲಿ ನಾವು ಕೊಡೋಕೆ ಶುರು ಮಾಡಿದೆವಲ್ಲಾ ಅದು ನಿಜವಾದ ಯಶಸ್ಸು. ನಾವು ಒಂದು ದಿವಸವೂ ಯಶಸ್ಸನ್ನು ಹೆಗಲ ಮೇಲೆ ಹಾಕಿಕೊಂಡು ಓಡಾಡಲೇ ಇಲ್ಲ. ಒಂದು ಸಿನಿಮಾ ಯಶಸ್ಸಾಗುತ್ತಿದ್ದಂತೆಯೇ, ಇನ್ನೊಂದು ಶುರುವಾಗೋದು. ಇನ್ನೊಂದು ಮುಗಿಯುತ್ತಿದ್ದಂತೆಯೇ ಮತ್ತೊಂದು ಶುರುವಾಗೋದು. ಸದಾ ಸಿನಿಮಾ ಜೊತೆಗೆ ಇರುತ್ತಿದ್ದೆವು, ಹೊಸಹೊಸ ಕನಸುಗಳನ್ನು ಕಟ್ಟುತ್ತಲೇ ಇದ್ದೆವು. ನಾವು ಯಾವುದನ್ನೂ ಯೋಚನೆ ಮಾಡಲಿಲ್ಲ. ಎಲ್ಲವೂ Destiny. ನಾವು ಏನೇ ಮಾಡಿದ್ದರೂ ಕೂಡಾ, ಎಷ್ಟೇ ದೂರ ನಡೆದು ಬಂದಿದ್ದರೂ ಅದಕ್ಕೆ ಕಾರಣ ನಾವು ಯಾವತ್ತೂ ಲೆಕ್ಕಾಚಾರ ಹಾಕಿಲ್ಲ. ಇವತ್ತೂ ಎಲ್ಲದಕ್ಕೂ ಲೆಕ್ಕಾಚಾರ. ಸ್ನೇಹದಲ್ಲೂ ಲೆಕ್ಕಾಚಾರ, ಸಿನಿಮಾದಲ್ಲೂ ಲೆಕ್ಕಾಚಾರ, ಪ್ರತಿಯೊಂದಕ್ಕೂ ಲೆಕ್ಕಾಚಾರ. ಲೆಕ್ಕಾಚಾರ ಹಾಕಿಕೊಂಡೇ ಮಾತನಾಡುತ್ತೇವೆ. ಆದರೆ, ನನ್ನ ಮತ್ತು ಹಂಸಲೇಖ ಮಧ‍್ಯೆ ಯಾವತ್ತೂ ಲೆಕ್ಕಾಚಾರ ಇರಲೇ ಇಲ್ಲ. ಇದರಿಂದ ಏನು ಲಾಭ ಬರುತ್ತೆ, ಏನು ವಾಪಸ್ಸು ಪಡೆಯುತ್ತೇವೆ ಎಂದು ನಾವು ಯಾವತ್ತೂ ಯೋಚನೆ ಮಾಡಲಿಲ್ಲ. ನಾನು ಸುಮ್ಮನೆ ಸಿನಿಮಾ ಮಾಡಿಕೊಂಡು ಹೋದೆ. ಸಿನಿಮಾ ಚೆನ್ನಾಗಿರಬೇಕು ಎಂಬುದಷ್ಟೇ ನನ್ನ ಉದ್ದೇಶ. ‘ಪ್ರೇಮಲೋಕ’ ಆಗಲೀ, ‘ರಣಧೀರ’ ಆಗಲೀ ಲಾಭ ಎಷ್ಟು ಎಂದು ಗೊತ್ತಿಲ್ಲ. ಪರದೆ ಮೇಲೆ ನಾನಂದುಕೊಂಡ ಸಿನಿಮಾ ಬಂತಾ? ಅಷ್ಟು ಸಾಕು.
* ಹಂಸಲೇಖ ಅವರನ್ನು ಪರಿಚಯಿಸಿದ್ದು ಎನ್.ಎಸ್. ರಾವ್. ರಾಜು ಗಿಟಾರ್ ಹಿಡಿದುಕೊಂಡು ಬಂದರು. ಆ ಗಿಟಾರ್ ನನಗೆ ಕೊಟ್ಟರು. ನಾನು ಬಾರಿಸಿಕೊಂಡು ಹೋದೆ. ಅದು ಇಲ್ಲಿಯವರೆಗೂ ಸಾಗಿ ಬಂದಿದೆ. ಬಹುಶಃ ನನ್ನ ಅವರ ಸ್ನೇಹ ಕಲ್ಮಶ ಇಲ್ಲದ ಸ್ನೇಹ. ನಾವಿಬ್ಬರೂ ಹೆಗಲ ಮೇಕೆ ಕೈಹಾಕಿಕೊಂಡು ಓಡಾಡೋದು ಯಾವತ್ತೂ ಮಾಡಿಲ್ಲ. ಬರೀ ಸಿನಿಮಾ ಸಿನಿಮಾ ಎಂದು ಯೋಚನೆ ಮಾಡಿದವರು ನಾವು. ನಾನು cards ಆಡುವಾಗ ಒಮ್ಮೆ ಹೋಗಿದ್ದೆ ಎಂದು ಹಂಸಲೇಖ ಹೇಳಿದರು. ಅವರನ್ನು ಕರೆದಾಗ ನಾನು ಯಾವತ್ತೂ ಕಾರ್ಡ್ಸ್ ಆಡುತ್ತಾ ಕೂತಿರಲಿಲ್ಲ. ಅವರು ನುಗ್ಗಿ ಬಂದಿರಬಹುದು. ನನಗೆ ಸಂಗೀತದ ಕೆಲಸ ಮಾಡುವಾಗ ಕಾರ್ಡ್ಸ್ ಆಡುವ ಹುಚ್ಚೂ ಇಲ್ಲ. ಸಿನಿಮಾ ಮುಂದೆ ಕಾರ್ಡ್ಸ್ ಏನೂ ಅಲ್ಲ. ಕಾರ್ಡ್ಸ್ ಆಡಿ ಗೆದ್ದಿರುವ ದುಡ್ಡಿನಲ್ಲಿ ಎಷ್ಟೋ ಸಿನಿಮಾ ಮಾಡಿದ್ದೇನೆ. ಆಗ ಗಳಿಕೆ ಅಷ್ಟು ಚೆನ್ನಾಗಿತ್ತು. ಕ್ಯಾಸಿನೋ ದುಡ್ಡಲ್ಲೇ ನಾನು ಒಂದು ವರ್ಷ ಬದುಕಿದ್ದೂ ಇದೆ. Gambling has been my life. ಸಿನಿಮಾ ಒಂಥರಾ gambling ಎಂದರೆ, gambling ಆಡುತ್ತಲೇ ಇದ್ದೀನಿ. ಈಗ ಎರಡು ವರ್ಷ ಆಯ್ತು ನಾನು gambling ಆಡಿ. ಈಗ ಹೋಗೋದೇ ಇಲ್ಲ. ಈಗ ಸಿನಿಮಾ ಮಾಡಬೇಕು ಅಷ್ಟೇ.

* ನಾನು ಯಾಕೆ ‘ರಾಮಾಚಾರಿ’ ಮಾಡಲ್ಲ, ‘ಹಳ್ಳಿ ಮೇಷ್ಟ್ರು’ ಮಾಡಲ್ಲ ಅಂತ ಹಂಸಲೇಖ ಕೇಳಿದರು. ಈಗ ಹುಡುಗಿಯನ್ನ ಹಿಡಿದರೆ, 63ನೇ ವಯಸ್ಸಿಗೆ ಇವನಿಗೆ ಇವೆಲ್ಲಾ ಬೇಕಾ? ಅಂತಾರೆ. ಬೇಡ ಎಂದು ಸುಮ್ಮನಿದ್ದರೆ, ನೀನು ಹುಡುಗಿಯನ್ನು ಹಿಡಿಯದಿದ್ದರೆ, ಬೇರೆ ಯಾರು ಹಿಡಿಯಬೇಕು ಅಂತಾರೆ. ನನಗೆ ವಯಸ್ಸಾಗಿಲ್ಲ ಅಂತ ಬಲವಾಗಿ ನಂಬಿದವನು ನಾನು. ಈಗಲೂ ಸಿನಿಮಾ ಮಾಡಬೇಕು ಎಂದರೆ, ‘ಪ್ರೇಮಲೋಕ’ ಸಮಯದಲ್ಲಿ ಹೇಗೆ ನುಗ್ಗಿದ್ದೆನೋ, ಈಗಲೂ ಹಾಗೆಯೇ ನುಗ್ಗುತ್ತೇನೆ. ನನಗೆ 63 ಇರಲಿ, 36 ಸಹ ಆಗಿಲ್ಲ. 24ರಲ್ಲೇ ಇದ್ದೀನಿ. ನನ್ನ ಹೊಸ ಚಿತ್ರದಲ್ಲಿ ನನ್ನ ಜೊತೆಗೆ ಒಂದಿಷ್ಟು ಮಕ್ಕಳು ನಟಿಸುತ್ತಿದ್ದಾರೆ. ನಡೆದು ಹೋಗುತ್ತಿದ್ದರೆ, ನನ್ನ ಸ್ಪೀಡಿಗೆ ಅವರಿಗೆ ನಡೆಯೋದಕ್ಕೆ ಸಾಧ್ಯವಾಗಲ್ಲ. ‘ಏನು ಇಷ್ಟು ಫಾಸ್ಟ್ ಆಗಿ ನಡೆಯುತ್ತೀರಾ’ ಎನ್ನುತ್ತಾರೆ. ನಾನು ಅವತ್ತಿನಿಂದ ಅದೇ ಸ್ಪೀಡಿನಲ್ಲಿ ನಡೆಯುತ್ತಿದ್ದೇನೆ ಎನ್ನುತ್ತೇನೆ. ನಾನು ಮುಂದೆ ಹೋಗುತ್ತಿದ್ದೇನೆ. ನೀವು ಹಿಂದೆ ಉಳೀಯುತ್ತಿದ್ದೀರ. ನಾನು ಯಾವುದೇ ಸಿನಿಮಾ ಮಾಡಿದರೂ ಮುಂದೆಯೇ ಇದ್ದೇನೆ. ಸೋಲಾದಾಗ ವಾಪಸ್ಸು ಎಳೆದುಕೊಳ್ಳುತ್ತಾರೆ. ನಾನು ಮತ್ತೆ ರೀಮೇಕೋ ಏನೋ ಮಾಡಿಕೊಂಡು ಇರುತ್ತೇನೆ. ಏಕೆಂದರೆ, ಮೊದಲು ಬದುಕಬೇಕು.
* ನಾವಿಬ್ಬರು ದೂರ ಆಗಿದ್ದು ಯಾಕೆ ಗೊತ್ತಿಲ್ಲ. ಸಡನ್ ಆಗಿ ಒಂದು ದಿನ ನಾವಿಬ್ಬರೂ ದೂರ ಆಗಿಬಿಟ್ಟೆವು. ಇವತ್ತಿನವರೆಗೂ ನಾವಿಬ್ಬರೂ ಜಗಳ ಆಡಿಲ್ಲ. ಯಾಕೆ ದೂರ ಆಗಿದ್ದು ಎಂದು ನನಗೂ ಗೊತ್ತಿಲ್ಲ. ಏನೇನೋ ಕಾರಣಗಳನ್ನು ನಾವು ಹೇಳಿಕೊಳ್ಳುತ್ತೇವೆ. ಏಕೆಂದರೆ, ನೀವು ಬಿಡುವುದಿಲ್ಲ. ಏನಾದರೂ ಹೇಳಬೇಕಲ್ಲ ಎಂದು ನಾವೂ ಏನೇನೋ ಹೇಳುತ್ತೇವೆ. ಯಾವುದೂ ಬಿಟ್ಟು ಹೋಗುವಂತಹ ಕಾರಣಗಳಲ್ಲ. ಸಮಯ, destiny ನಮ್ಮನ್ನು ಹೇಗೆ ಸೇರಿಸಿತೋ, ಹಾಗೆಯೇ ದೂರ ಮಾಡಿತು. ಬಹುಶಃ ಬೇರೆ ದಾರಿಗಳು ಓಪನ್ ಆಗಬೇಕಿತ್ತೇನೋ? ನಾನು ಬರೆಯಬೇಕಿತ್ತೇನೋ, ನನ್ನ ಕೈಯಲ್ಲೂ ಪೆನ್ ಬರಬೇಕಿತ್ತೇನೋ? ನಾನು ಸಂಗೀತ ಮಾಡಬೇಕಿತ್ತೇನೋ? ಗೊತ್ತಿಲ್ಲ. ಅದರಿಂದ ನಾವಿಬ್ಬರೂ ದೂರ ಆಗಬೇಕಾದಂಥಹ ಪರಿಸ್ಥಿತಿ ಬಂದಿರಬಹುದು. ಈಗ ನಾನು ದೂರ ಆದೆ. ನನ್ನ departmentಗೆ ಈಗ ಅವರೇ ಬಂದಿದ್ದಾರೆ. ಇಷ್ಟು ದಿವಸ ನಾವು ಆ್ಯಕ್ಷನ್ ಹೇಳುತ್ತಿದ್ವಿ. ಎಸಿ ರೂಂನಲ್ಲಿ ಕೂತು ಪ್ರತಿಕ್ರಿಯೆ ನೀಡುತ್ತಿದ್ರಿ. ಈಗ ಇಲ್ಲಿ ಬನ್ನಿ. ನಾವು ಅಲ್ಲಿ ಕೂತು react ಮಾಡುತ್ತೀವಿ.
* ನಾನು ಹೃದಯ ಆದರೆ, ನೀವು ನನ್ನ heartbeat. ನನ್ನ ಲೈಫ್‍ನ rhythm ನೀವು. ನಿಮ್ಮ ಜೀವನ ಸಹ ನನ್ನಷ್ಟೇ ವೇಗವಾಗಿ ಹೊರಡಲಿ. ಇದೇ ತರಹ ನಿರ್ದೇಶನ ಮಾಡಿ, ಜೊತೆಗೆ ನಾವು ಯಾವತ್ತೂ ಇರುತ್ತೇವೆ. ನಾನು ನಗೋದು ಕಡಿಮೆ. ಅವರಿದ್ದಾಗ ಮಾತ್ರ ನಾನು ಜಾಸ್ತಿ ನಗುತ್ತೇನೆ. ಅವರ ಜೊತೆಗೆ ಬರುವ ನಗು, ಬೇರೆ ಯಾರ ಜೊತೆಗೂ ಬರುವುದಿಲ್ಲ. ಮಾತಾಡುತ್ತಾ ಆಡುತ್ತಾ, ತುಂಬಾ ನಕ್ಕಿರುತ್ತೇನೆ. ಅದು ಒಂದು ತಿಂಗಳಿಗಾಗುವಷ್ಟು ನನ್ನ ನನ್ನ ಮನಸ್ಸಿನಲ್ಲಿ ಇರುತ್ತದೆ. ನಾವು ದೂರ ಆಗಿರಬಹುದು. ಆದರೆ, ನಮ್ಮ ನಡುವೆ ಸ್ನೇಹ ಕಡಿಮೆ ಆಗಿಲ್ಲ. ಗಟ್ಟಿಯಾಗಿಯೇ ಇದೆ. ನಾವು ಜೊತೆಗೆ ಸಿನಿಮಾ ಮಾಡೋಕೆ ಆಗಿಲ್ಲದಿರಬಹುದು. ಅದಕ್ಕೊಂದು ಸಮಯ ಬಂದಾಗ, ಮತ್ತೆ ಜೊತೆಗೆ ಸಿನಿಮಾ ಮಾಡಬಹುದು. ಅದು ಮತ್ತೆ destiny. ಇನ್ನೊಬ್ಬ ಎನ್.ಎಸ್. ರಾವ್ ಬಂದು ಹಂಸಲೇಖ ಅವರನ್ನು ಜೊತೆಗೆ ಸೇರಿಸಬೇಕು.


