ರಜನಿಕಾಂತ್ ಅಭಿನಯದ ‘ಜೈಲರ್ 2’, ಅಕ್ಟೋಬರ್ 15ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಮೂರು ದಶಕಗಳ ಬಳಿಕ, ರಜನಿಕಾಂತ್ ಮತ್ತು ಮಿಥುನ್ ಚಕ್ರವರ್ತಿ, ‘ಜೈಲರ್ 2’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು 90ರ ದಶಕದಲ್ಲಿ ಬಿಡುಗಡೆಯಾದ ‘ಭ್ರಷ್ಟಾಚಾರ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.
‘ಜೈಲರ್ 2’ ಚಿತ್ರದಲ್ಲಿ ನಟಿಸುವುದಕ್ಕೆ ಮಿಥುನ್ ಚಕ್ರವರ್ತಿ ಮೊದಲು ಒಪ್ಪಿಕೊಂಡಿರಲಿಲ್ಲವಂತೆ. ಈ ವಿಷಯವನ್ನು ಸ್ವತಃ ರಜನಿಕಾಂತ್ ಹೇಳಿಕೊಂಡಿದ್ದಾರೆ. ಚಿತ್ರದ ಬಿಡುಗಡೆಗೂ ಮೊದಲು ನಡೆದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ್ದ ಅವರು, ಈ ಚಿತ್ರದಲ್ಲಿ ಮಿಥುನ್ ನಟಿಸುವುದಕ್ಕೆ ನಿರಾಕರಿಸಿದ್ದರು ಮತ್ತು ಆ ನಂತರ ಒಂದು ಷರತ್ತಿನೊಂದಿಗೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು ಎಂದು ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಮಿಥುನ್ ಚಕ್ರವರ್ತಿ ಈ ಚಿತ್ರತಂಡವನ್ನು ಸೇರಿಕೊಂಡಿದ್ದರ ಹಿಂದಿನ ಘಟನೆಯನ್ನು ಹಂಚಿಕೊಂಡರು. ‘ಚಿತ್ರದ ನಿರ್ಮಾಪಕರು ಖಳನಾಯಕನ ಪಾತ್ರದಲ್ಲಿ ನಟಿಸುವಂತೆ ಮಿಥುನ್ ಅವರನ್ನು ಸಂಪರ್ಕಿಸಿದಾಗ, ಅವರು ನೇರವಾಗಿಯೇ ನಿರಾಕರಿಸಿದ್ದರು. ‘ನಾನು ರಜನಿಕಾಂತ್ಗೆ ಖಳನಾಯಕನಾಗಿ ನಟಿಸಬೇಕಾ?’ ಎಂದು ಕೇಳಿದ್ದರು. ಅವರು ನನ್ನ ಒಳ್ಳೆಯ ಸ್ನೇಹಿತ. ಆದರೂ ಅವರು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿರಲಿಲ್ಲ. ‘ರಜನಿಕಾಂತ್ ಅವರಿಂದ ಹೊಡೆತ ತಿನ್ನಬೇಕಾ? ಖಂಡಿತಾ ಸಾಧ್ಯವಿಲ್ಲ. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ’ ಎಂದು ಹೇಳಿದ್ದರು’ ಎಂದು ರಜನಿಕಾಂತ್ ನೆನಪಿಸಿಕೊಂಡರು.
ಮಿಥುನ್ ಆರಂಭದಲ್ಲಿ ಈ ಪಾತ್ರವನ್ನು ನಿರಾಕರಿಸಿದ್ದರೂ, ನಂತರ ಒಂದು ಷರತ್ತಿನೊಂದಿಗೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಈ ಕುರಿತು ಮಾತನಾಡಿರುವ ರಜನಿಕಾಂತ್, ‘ನಂತರ ಒಂದು ಕಾರ್ಯಕ್ರಮದಲ್ಲಿ ಮಿಥುನ್ ಅವರನ್ನು ಭೇಟಿಯಾಗಿದ್ದೆ. ಆಗ ಅವರು, ‘ಈ ಚಿತ್ರದವರು ನನ್ನನ್ನು ಸಂಪರ್ಕಿಸಿದ್ದಾರೆ. ನೀವು ಹೇಳಿದರೆ ನಾನು ನಟಿಸುತ್ತೇನೆ’ ಎಂದರು. ಅದಕ್ಕೆ ನಾನು, ‘ಖಂಡಿತಾ, ತುಂಬಾ ಚೆನ್ನಾಗಿರುತ್ತದೆ’ ಎಂದು ಹೇಳಿದೆ. ಆಗ ಅವರು, ‘ಸರಿ, ಆದರೆ ಒಂದು ಷರತ್ತು. ನೀವು ನನಗೆ ಹೊಡೆಯಬಾರದು ಅಥವಾ ಗುಂಡು ಹಾರಿಸಬಾರದು’ ಎಂದರು. ನಾನು, ‘ನಿರ್ದೇಶಕರನ್ನು ಕೇಳಿ ನಿಮಗೆ ತಿಳಿಸುತ್ತೇನೆ’ ಎಂದು ಹೇಳಿದೆ. ಅವರು ತಮಾಷೆಗಾಗಿ ಹಾಗೆ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಿದ್ದರೂ, ಅವರ ಷರತ್ತಿನ ಪ್ರಕಾರವೇ ಚಿತ್ರತಂಡದವರು ಅವರ ಪಾತ್ರವನ್ನು ರೂಪಿಸಿದರು’ ಎಂದು ನೆನಪಿಸಿಕೊಂಡರು.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಮೊದಲ ಭಾಗದಲ್ಲಿ ನಟಿಸಿದ್ದ ರಜನಿಕಾಂತ್, ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ ಮತ್ತು ರಿತ್ವಿಕ್ ತಮ್ಮ ಪಾತ್ರಗಳನ್ನು ಈ ಚಿತ್ರದಲ್ಲಿಯೂ ಮುಂದುವರಿಸಲಿದ್ದಾರೆ. ಈ ಚಿತ್ರಕ್ಕೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜಾರಮೂಡು, ವಿದ್ಯಾ ಬಾಲನ್ ಮುಂತಾದವರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತವಿದೆ.


