‘ಗುಡ್ಡದ ಭೂತ’ದ ಹಿಂದೆ ಬಿದ್ದ ಸಮರ್ಜಿತ್‍ ಲಂಕೇಶ್‍

ಚಂದನವನ, ಸಿನಿ ಸುದ್ದಿ

‘ಗೌರಿ’ ಚಿತ್ರದ ನಂತರ ಸಮರ್ಜಿತ್‍ ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಈಗ ಅವರು ಸದ್ದಿಲ್ಲದೆ ‘ಗುಡ್ಡದ ಭೂತ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ‘ಗುಡ್ಡದ ಭೂತ’ ಎಂದರೆ ನೆನಪಾಗುವುದು 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ. ಈಗ ಅದೇ ಹೆಸರಿನ ಚಿತ್ರದೊಂದಿಗೆ ಸಮರ್ಜಿತ್‍ ವಾಪಸ್ಸಾಗಿದ್ದಾರೆ.

ಈ ಹಿಂದೆ ‘ಫಾರೆಸ್ಟ್’ ಚಿತ್ರವನ್ನು ನಿರ್ಮಿಸಿದ್ದ ಎನ್.ಎಂ ಕಾಂತರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಮುಗಿಲ್ ಪೇಟೆ’, ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರಗಳ ನಿರ್ದೇಶಕ ಭರತ್ ಎಸ್. ನಾವುಂದ್ ನಿರ್ದೇಶನದ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮರ್ಜಿತ್‍ ಇನ್‍ಸ್ಪೆಕ್ಟರ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್‍ ಇತ್ತೀಚೆಗೆ ಬಿಡುಗಡೆ ಆಗಿದೆ.

‘ಗುಡ್ಡದ ಭೂತ’ ಕುರಿತು ಮಾತನಾಡುವ ನಿರ್ದೇಶಕ ಭರತ್‍, ‘ಇದು ಕರಾವಳಿ ಭಾಗದಲ್ಲಿ ನಡೆಯುವ ಒಂದು ಕಥೆ. ಒಂದು ಘಟನೆ ಆಧಾರಿಸಿ, ಸಿನಿಮಾಗೆ ಬೇಕಾದ ಹಲವು ಅಂಶಗಳನ್ನು ಸೇರಿಸಿ ಕಥೇ-ಚಿತ್ರಕಥೆ ಮಾಡಿದ್ದೇನೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಕುಟುಂಬವೊಂದರಲ್ಲಿ ನಡೆಯುವ ಕೊಲೆಯ ಸುತ್ತ ಹೆಣೆದಿರುವ ಕಥೆ ಇದು. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಶಿರಸಿ, ಮಂಚಿಕೆರೆ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ಕೊಟ್ಟರು.

ಈ ಚಿತ್ರಕ್ಕೆ ಸಮರ್ಜಿತ್ ಲಂಕೇಶ್ ನಾಯಕರಾದರೂ, ನಿಜವಾದ ನಾಯಕ ಚಿತ್ರದ ಕಥೆ ಎನ್ನುವ ಭರತ್, ಈ ಚಿತ್ರದ ಮೂಲಕ ಸಾಕಷ್ಟು ರಂಗಭೂಮಿ ಕಲಾವಿದರನ್ನು ಪರಿಚಯಿಸಲಾಗುತ್ತಿದೆಯಂತೆ. ಮಿಕ್ಕಂತೆ ಶ್ರೀಹರಿ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಛಾಯಾಗ್ರಹಣ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ.

ನಿರ್ದೇಶಕ ಭರತ್ ಅವರು ನನ್ನ ಆಫೀಸ್ ಗೆ ಬಂದು ಕಥೆ ಹೇಳಿದಾಗ,‌ ಕಥೆ ಕೇಳಿ ನನಗೆ ರೋಮಾಂಚನವಾಯಿತು ಎಂದು ಮಾತು ಶುರು ಮಾಡಿದ ಕಾಂತರಾಜ್, ‘ತಕ್ಷಣವೇ ಅವರಿಗೆ ಅಡ್ವಾನ್ಸ್ ಕೊಟ್ಟು ಸಿನಿಮಾ ಮಾಡೋಣ ಅಂದೆ. 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸುವುದು ಅಂತ ತೀರ್ಮಾನವಾಗಿತ್ತು. ಆದರೆ, ಅಂದುಕೊಂಡದಕ್ಕಿಂತ ಸ್ವಲ್ಪ ಹೆಚ್ಚಿನ ದಿನಗಳ ಚಿತ್ರೀಕರಣವಾಗಿದೆ. ಸಮರ್ಜಿತ್ ಅಭಿನಯ ಕೂಡ ಚೆನ್ನಾಗಿದೆ’ ಎಂದರು.

ಭರತ್ ಅವರು ಕಥೆ ಹೇಳಿದ ರೀತಿಯೇ ಬಹಳ ಅದ್ಭುತವಾಗಿತ್ತು ಅಂತ ಸಮರ್ಜಿತ್‍ ಸಹ ಹೇಳಿದರು. ‘ಅವರು ನಟಿಸುತ್ತಲೆ ಕಥೆ ಹೇಳುತ್ತಿದ್ದರು. ನಾನು ಈ ಚಿತ್ರದಲ್ಲಿ ಸಬ್‍ ಇನ್‍ಸ್ಪೆಕ್ಟರ್ ಪಾತ್ರ ಮಾಡಿದ್ದೇನೆ. ಅಲೋಕ್ ನನ್ನ ಪಾತ್ರದ ಹೆಸರು. ಈ ಚಿತ್ರದಿಂದ ಸಾಕಷ್ಟು ಕಲಿತಿದ್ದೇನೆ. ಕಂಟೆಂಟ್ ಚೆನ್ನಾಗಿರುವ ಚಿತ್ರಗಳನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ’ ಎಂದರು.

‘ಗುಡ್ಡದ ಭೂತ’ ಚಿತ್ರದ VFX ಕೆಲಸಗಳು ನಡೆಯುತ್ತಿವೆ. ಅದು ಪೂರ್ಣವಾದ ಬಳಿಕ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.

‘ಜೈಲರ್ 2’ನಲ್ಲಿ ನಟಿಸಲು ಮಿಥುನ್‍ ಚಕ್ರವರ್ತಿ ವಿಧಿಸಿದ ಷರತ್ತೇನು?

Discover more from KannadaScreens

Subscribe now to keep reading and get access to the full archive.

Continue reading