ನಿರ್ದೇಶನಕ್ಕೆ ‘ಓಕೆ’ ಎಂದ ಹಂಸಲೇಖ; ಸೋಮವಾರ ಹೊಸ ಚಿತ್ರ ಪ್ರಾರಂಭ

ಚಂದನವನ, ಸಿನಿ ಸುದ್ದಿ

ಜನಪ್ರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮೊದಲ ನಿರ್ದೇಶನದ ಚಿತ್ರ ಸೆಟ್ಟೇರಲಿದೆ.

ಹಂಸಲೇಖ ನಿರ್ದೇಶಕರಾಗುತ್ತಿರುವ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಕಾರಣಾಂತರಗಳಿಂದ ಚಿತ್ರ ಶುರುವಾಗಿರಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಅವರು ಚಿತ್ರ ನಿರ್ದೇಶಿಸುತ್ತಿರುವುದಾಗಿ ಘೋಷಿಸಿದ್ದರು. ಚಿತ್ರವು 2025ರ ಜನವರಿಯಲ್ಲಿ ಸೆಟ್ಟೇರಲಿದೆ ಎಂದು ಹೇಳಿದ್ದರು.

ಈಗ ಚಿತ್ರವು ಕೊನೆಗೂ ತಮ್ಮ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಚಿತ್ರಕ್ಕೆ ‘ಓಕೆ’ ಎಂಬ ಹೆಸರನ್ನು ಇಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚಿತ್ರಕ್ಕೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಿದ್ದಾರೆ. ಈ ಚಿತ್ರವನ್ನು ಆಕಾಂಕ್ಷ ಪ್ರೊಡಕ್ಷನ್ಸ್ ಮತ್ತು ಐದನಿ ಎಂಟರ್‍ಟೈನ್‍ಮೆಂಟ್‍ ಅಡಿ ನಾಗೇಶ್‍ ವಾಷ್ಟರ್‍ ಮತ್ತು ಸೂರ್ಯಪ್ರಕಾಶ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

ಬೆಳಿಗ್ಗೆ ಮುಹೂರ್ತವಾದರೆ, ಸಂಜೆ ಪತ್ರಿಕಾಗೋಷ್ಠಿ ನಡೆಯಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ವಿ. ರವಿಚಂದ್ರನ್, ಹಿರಿಯ ನಿರ್ಮಾಪಕ ಬಿ.ಎನ್‍. ಗಂಗಾಧರ್‍ ಮತ್ತು ಲತಾ ಹಂಸಲೇಖ ಸಹ ಹಾಜರಿರಲಿದ್ದಾರೆ. ಚಿತ್ರದಲ್ಲಿ ಯಾರು ನಟಿಸಲಿದ್ದಾರೆ, ಯಾವಾಗ ಪ್ರಾರಂಭ ಎಂಬ ವಿಷಯಗಳು ಸೋಮವಾರ ಸಂಜೆ ತಿಳಿಯಲಿದೆ.

ಚಿತ್ರ ನಿರ್ದೇಶನ ಮಾಡಬೇಕು ಎಂಬುದು ಹಂಸಲೇಖ ಅವರ ಹಲವು ವರ್ಷಗಳ ಕನಸು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅವರು ನಿರ್ದೇಶಕರಾಗಿಯೇ ಎರಡು ದಶಕಗಳು ಕಳೆದಿರಬೇಕಿತ್ತು. ಹಂಸಲೇಖ ಅವರು ತಮ್ಮ ಮಗ ಅಲಂಕಾರ್‍ ಅಭಿನಯದಲ್ಲಿ ‘ಸುಗ್ಗಿ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರವನ್ನು ಎಸ್. ಮಹೇಂದರ್‍ ನಿರ್ದೇಶಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಕಾರಣಾಂತರಗಳಿಂದ ಹಂಸಲೇಖ ಅವರೇ ಚಿತ್ರದ ನಿರ್ದೇಶನವನ್ನು ಕೈಗೆತ್ತಿಕೊಂಡರು. ಚಿತ್ರ ಮುಗಿದರೂ ಇದುವರೆಗೂ ಬಿಡುಗಡೆಯಾಗಲಿಲ್ಲ. ಆ ನಂರ ಹಂಸಲೇಖ ಅವರ ‘ಬಾಗಿನ’, ‘4ಕೆ’, ‘ಗಿಟಾರ್‍’ ಮತ್ತು ‘ಶಕುಂತ್ಲೆ’ ಚಿತ್ರಗಳನ್ನು ನಿರ್ದೇಶಿಸುವುದಾಗಿ ಹೇಳಿದ್ದರು. ಕಾರಣಾಂತರಗಳಿಂದ ಈ ಚಿತ್ರಗಳೂ ಸೆಟ್ಟೇರಲಿಲ್ಲ. ಈಗ ‘ಓಕೆ’ ಮೂಲಕ ಕೊನೆಗೂ ಹಂಸಲೇಖ ನಿರ್ದೇಶಕರಾಗುತ್ತಿದ್ದಾರೆ.

ನಾಲ್ಕು ಶೇಡ್‍ಗಳು, ಅದರಲ್ಲೊಂದಕ್ಕೆ ಮುಂಬೈನ ವಿಗ್‍; ಹೊಸ ಅವತಾರದಲ್ಲಿ ಅಜೇಯ್‍ ರಾವ್‍ …

Discover more from KannadaScreens

Subscribe now to keep reading and get access to the full archive.

Continue reading