ತೇರೆ ಪಾಸ್‍ ಕ್ಯಾ ಹೇ ಅಂದರೆ ನಮ್ಮಲ್ಲಿ ಉತ್ತರವಿಲ್ಲ …

by | Apr 20, 2024 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ | 0 comments

  • ಚೇತನ್‍ ನಾಡಿಗೇರ್

 

ಕನ್ನಡ

 ಶರಣ್‍ – ಛೂ ಮಂತರ್‍ (ಮೇ 10)

ಧನಂಜಯ್‍ – ಕೋಟಿ (ಜೂನ್‍ 14)

ಶಿವರಾಜಕುಮಾರ್‍ – ಭೈರತಿ ರಣಗಲ್‍ (ಆಗಸ್ಟ್ 15)

ದರ್ಶನ್‍ – ದಿ ಡೆವಿಲ್‍ (ಅಕ್ಟೋಬರ್)

ಉಪೇಂದ್ರ – ಯುಐ (ಗೊತ್ತಿಲ್ಲ)

ಸುದೀಪ್‍ – ಮ್ಯಾಕ್ಸ್ (ಗೊತ್ತಿಲ್ಲ)

ಮುರಳಿ – ಬಘೀರಾ (ಗೊತ್ತಿಲ್ಲ)

ಧ್ರುವ ಸರ್ಜಾ – ಮಾರ್ಟಿನ್‍ (ಗೊತ್ತಿಲ್ಲ)

‘ದುನಿಯಾ’ ವಿಜಯ್‍ – ಭೀಮ (ಗೊತ್ತಿಲ್ಲ)

ಗಣೇಶ್‍ – ಕೃಷ್ಣಂ ಪ್ರಣಯ ಸಖಿ (ಗೊತ್ತಿಲ್ಲ)

ಪ್ರಜ್ವಲ್‍ ದೇವರಾಜ್‍ – ಮಾಫಿಯಾ (ಗೊತ್ತಿಲ್ಲ)

ಅಜೇಯ್‍ ರಾವ್‍ – ಯುದ್ಧಕಾಂಡ (ಗೊತ್ತಿಲ್ಲ)

ತಮಿಳು

ವಿಕ್ರಮ್‍ – ತಂಗಾಳನ್‍ (ಮೇ)

ಕಮಲ್‍ ಹಾಸನ್‍ – ಇಂಡಿಯನ್‍ 2 (ಜೂನ್‍ 13)

ವಿಜಯ್ – The Greatest of All Time – GOAT (ಸೆಪ್ಟೆಂಬರ್ 05)

ಧನುಶ್‍ – ರಾಯನ್‍ (ಸೆಪ್ಟೆಂಬರ್‍ 30)

ರಜನಿಕಾಂತ್‍ – ವೆಟ್ಟಾಯನ್‍ (ಅಕ್ಟೋಬರ್‍)

ಅಜಿತ್‍ ಕುಮಾರ್‍ – ವಿದಾಮಯುರ್ಚಿ (ಡಿಸೆಂಬರ್)

ಸೂರ್ಯ – ಕಂಗುವ (ಡಿಸೆಂಬರ್‍)

ತೆಲುಗು

ಪ್ರಭಾಸ್‍ – ಕಲ್ಕಿ 2898 ಎಡಿ (ಮೇ 09)

ಅಲ್ಲು ಅರ್ಜುನ್‍ – ಪುಷ್ಪ 2 (ಆಗಸ್ಟ್ 15)

ರಾಮ್‍ ಚರಣ್‍ ತೇಜ – ಗೇಮ್‍ ಚೇಂಜರ್‍ (ಸೆಪ್ಟೆಂಬರ್‍)

ಪವನ್‍ ಕಲ್ಯಾಣ್‍ – ಓಜಿ (ಸೆಪ್ಟೆಂಬರ್‍ 27)

ಜ್ಯೂನಿಯರ್‍ ಎನ್‍.ಟಿ.ಆರ್ – ದೇವರ (ಅಕ್ಟೋಬರ್ 10)

ಚಿರಂಜೀವಿ – ವಿಶ್ವಂಬರ (ಜನವರಿ 20 2025)

 

ಹಿಂದಿ

ಅಕ್ಷಯ್‍ ಕುಮಾರ್ – ಸರ್ಫಿರಾ (ಜುಲೈ 02)

ಅಜಯ್‍ ದೇವಗನ್‍ ಮತ್ತು ಅಕ್ಷಯ್‍ ಕುಮಾರ್ – ಸಿಂಗಂ ಅಗೇನ್‍ (ಆಗಸ್ಟ್ 15)

ಅಕ್ಷಯ್‍ ಕುಮಾರ್ – ಸ್ಕೈ ಫೋರ್ಸ್ (ಅಕ್ಟೋಬರ್‍ 02)

ಶಾಹೀದ್ ಕಪೂರ್ – ದೇವ (ಅಕ್ಟೋಬರ್‍ 11)

ಅಜಯ್‍ ದೇವಗನ್ – ರೇಡ್‍ 2 (ನವೆಂಬರ್‍ 15)

ಅಕ್ಷಯ್‍ ಕುಮಾರ್ – ವೆಲ್‍ಕಮ್‍ ಟು ದಿ ಜಂಗಲ್‍ (ಡಿಸೆಂಬರ್ 20)

ಆಮೀರ್ ಖಾನ್‍ – ಸಿತಾರೆ ಜಮೀನ್‍ ಪರ್‍ (ಡಿಸೆಂಬರ್‍ 25)

 

ಮಲಯಾಳಂ

ಮೋಹನ್‍ ಲಾಲ್‍ – ಬ್ಯಾರೋಜ್‍ (ಮೇ)

ನಿವಿನ್‍ ಪಾಲಿ – ಮಲಯಾಳಿ ಫ್ರಂ ಇಂಡಿಯಾ (ಮೇ 01)

ಟೊವಿನೋ ಥಾಮಸ್‍ – ನಡಿಕರ್‍ (ಮೇ 03)

ಪೃಥ್ವಿರಾಜ್‍ ಸುಕುಮಾರನ್‍ – ಗುರುವಾಯೂರ್‍ ಅಂಬಲನಾದಯಿಲ್‍ (ಮೇ 16)

ಮಮ್ಮೂಟ್ಟಿ – ಟರ್ಬೋ (ಜೂನ್‍ 13)

ಸೂಕ್ಷ್ಮವಾಗಿ ಈ ಪಟ್ಟಿಯನ್ನು ಗಮನಿಸಿಬಿಟ್ಟರೆ, ಬೇರೇನೂ ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಈ ಮೂರೂವರೆ ತಿಂಗಳುಗಳಲ್ಲಿ 85 ಪ್ಲಸ್‍ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಒಂದಿಷ್ಟು ವಿಭಿನ್ನ ಕಂಟೆಂಟ್‍ ಇರುವ ಮತ್ತು ಗಮನಸೆಳೆಯುವ ಚಿತ್ರಗಳು ಬಿಡುಗಡೆಯಾಗಿವೆ. ಆ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಏನಾಯ್ತು ಮತ್ತು ಎಷ್ಟು ಹಣ ಬಂತು ಎನ್ನುವುದು ಬೇರೆ ಮಾತು, ಕನಿಷ್ಠ ಈ ಚಿತ್ರಗಳು ವಿಭಿನ್ನವಾಗಿವೆ ಎಂದು ಕರೆಯಲ್ಪಟ್ಟಿವೆ. ಇನ್ನು ಜನಪ್ರಿಯ ನಟರ ಚಿತ್ರಗಳೆಂದರೆ, ಶಿವರಾಜಕುಮಾರ್‍, ಜಗ್ಗೇಶ್‍, ವಿನಯ್‍ ರಾಜಕುಮಾರ್‍, ಶರಣ್‍, ಸತೀಶ್‍ ನೀನಾಸಂ, ದಿಗಂತ್‍ ಅಭಿನಯದ ತಲಾ ಒಂದೊಂದು ಚಿತ್ರಗಳು, ಪೃಥ್ವಿ ಅಂಬಾರ್‍ ಅಭಿನಯದ ಮೂರು ಚಿತ್ರಗಳು, ವಿಜಯ್‍ ರಾಘವೇಂದ್ರ, ದೀಕ್ಷಿತ್‍ ಶೆಟ್ಟಿ ಅಭಿನಯದ ಎರಡು ಚಿತ್ರಗಳು ಬಿಟ್ಟರೆ ಮಿಕ್ಕಂತೆ 70ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಅದೆಷ್ಟು ಚಿತ್ರಗಳು, ಅದೆಷ್ಟು ಪ್ರದರ್ಶನಗಳನ್ನು ಕಂಡಿವೆಯೋ ಯಾರಿಗೂ ಗೊತ್ತಿಲ್ಲ. ಇದೇ ವೇಗದಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ದಾಖಲೆಯ ವರ್ಷವಾಗುವ ಸಾಧ್ಯತೆ ಇದೆ.

ಎಷ್ಟೇ ಚಿತ್ರಗಳು ಬಿಡುಗಡೆಯಾದರೂ ಹೆಚ್ಚು ಗಮನಸೆಳೆಯುವುದು, ಸುದ್ದಿಯಾಗುವುದು, ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ಸ್ಟಾರ್‍ ಅಥವಾ ಜನಪ್ರಿಯ ನಟರ ಚಿತ್ರಗಳೇ. ಅಂತಹ ಎಷ್ಟು ಚಿತ್ರಗಳಿವೆ ಎಂದು ಲೆಕ್ಕ ಹಾಕಿದರೆ, ಉತ್ತರ ಸಿಗುವುದಿಲ್ಲ. ಬೇರೆ ಭಾಷೆಗಳಲ್ಲಿ ಇನ್ನೊಂದು ವರ್ಷಕ್ಕಾಗುವಷ್ಟು ಸ್ಟಾರ್‍ ಚಿತ್ರಗಳ ಕ್ಯೂ ಇವೆ. ಕೆಲವು ಚಿತ್ರಗಳ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿವೆ. ಇನ್ನೂ ಕೆಲವು ಚಿತ್ರಗಳ ನಿಖರವಾದ ದಿನ ಘೋಷಣೆಯಾಗದಿದ್ದರೂ, ಇಂಥ ತಿಂಗಳಲ್ಲಿ ಬಿಡುಗಡೆ ಎಂದು ಆಗಲೇ ಘೋಷಿಸಲಾಗಿದೆ.

ತೆಲುಗು ಚಿತ್ರರಂಗದಲ್ಲಿ ಕಳೆದ ವರ್ಷ ಹಿರಿಯರೆಲ್ಲಾ ಸಿನಿಮಾ ಮೇಲೆ ಸಿನಿಮಾ ಮಾಡಿದ್ದರು. ಈ ವರ್ಷ ಕಿರಿಯರಿಗೆ ಬಿಟ್ಟುಕೊಟ್ಟಿದ್ದು ಅಲ್ಲು ಅರ್ಜುನ್‍, ಜ್ಯೂನಿಯರ್ NTR, ಪ್ರಭಾಸ್‍, ರಾಮ್‍ಚರಣ್ ತೇಜ ಮುಂತಾದವರ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತಮಿಳು ಚಿತ್ರರಂಗದಲ್ಲಿ 14 ವರ್ಷಗಳ ನಂತರ ಈ ವರ್ಷ ರಜನಿಕಾಂತ್‍, ಕಮಲ್‍ ಹಾಸನ್‍, ವಿಜಯ್‍, ಅಜಿತ್‍ ಮತ್ತು ವಿಕ್ರಮ್‍ ಅಭಿನಯದ ಚಿತ್ರಗಳು ಬಿಡುಗಡೆ ಆಗುತ್ತಿವೆ. ಮಲಯಾಳಂ ಚಿತ್ರರಂಗದಲ್ಲಿ ಈ ಮೂರೂವರೆ ತಿಂಗಳಲ್ಲಿ ಐದಾರು ಸಿನಿಮಾಗಳು ಗೆದ್ದು 600 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್‍ ಆಗಿವೆ. ಹಿಂದಿಯಲ್ಲಿ ‘ಫೈಟರ್‍’, ‘ಶೈತಾನ್‍’, ‘ಕ್ರ್ಯೂ’ ಮುಂತಾದ 100 ಕೋಟಿ ಕ್ಲಬ್‍ ಚಿತ್ರಗಳು ಬಂದಿವೆ. ಇನ್ನು, ಇತ್ತೀಚಿನ ಎರಡೇ ಚಿತ್ರಗಳಿಂದ 300 ಕೋಟಿ ರೂ ನಷ್ಟವಾಗಿದೆ. ದೊಡ್ಡ ಬಜೆಟ್‍ನಲ್ಲಿ ನಿರ್ಮಾಣವಾದ ಅಕ್ಷಯ್‍ ಕುಮಾರ್‍ ಅಭಿನಯದ ‘ಬಡೆ ಮಿಯಾ ಚೋಟೆ ಮಿಯಾ’ ಮತ್ತು ಅಜಯ್‍ ದೇವಗನ್‍ ಅಭಿನಯದ ‘ಮೈದಾನ್‍’ ಚಿತ್ರಗಳು ಮೊದಲ ವಾರ 50 ಕೋಟಿ ಸಹ ಮಾಡಿಲ್ಲ. ಈ ಎರಡೂ ಚಿತ್ರಗಳಿಂದ ಕನಿಷ್ಠ 300 ಕೋಟಿ ಲಾಸ್‍ ಆಗಿದೆ ಎಂದು ಹೇಳಲಾಗುತ್ತಿದೆ. ಆದರೂ ಈ ವರ್ಷ ಅಕ್ಷಯ್‍ ಕುಮಾರ್‍ ಅಭಿನಯದ ನಾಲ್ಕು ಮತ್ತು ಅಜಯ್‍ ದೇವಗನ್‍ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ.

ಗೆಲುವೋ, ಸೋಲೋ, ಲಾಭವೋ, ನಷ್ಟವೋ ಪ್ರತಿಯೊಂದು ಚಿತ್ರರಂಗದಲ್ಲೂ ಒಂದು ಸಂಚಲನವಿದೆ. ಏನೂ ಇಲ್ಲದೆ ನೀರಸವಾಗಿರುವುದು ಕನ್ನಡ ಚಿತ್ರರಂಗ ಮಾತ್ರವಿರಬಹುದು. ಈ ವರ್ಷವಂತೂ ಕುತೂಹಲ, ನಿರೀಕ್ಷೆ, ಚರ್ಚೆ ಏನೂ ಆಗುತ್ತಿಲ್ಲ. ನಮ್ಮಲ್ಲೂ ಹೇಳಿಕೊಳ್ಳುವುದಕ್ಕೆ ಜನಪ್ರಿಯ ನಟರ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಈ ಪೈಕಿ ಮೂವರು ನಟರ ಚಿತ್ರಗಳ ಬಿಡುಗಡೆ ದಿನಾಂಕ ಮಾತ್ರ ಘೋಷಣೆಯಾಗಿವೆ. ಮಿಕ್ಕಂತೆ ಉಪೇಂದ್ರ, ಸುದೀಪ್‍, ಮುರಳಿ, ಧ್ರುವ ಸರ್ಜಾ, ‘ದುನಿಯಾ’ ವಿಜಯ್‍, ಗಣೇಶ್‍, ಪ್ರಜ್ವಲ್‍ ದೇವರಾಜ್‍, ಅಜೇಯ್‍ ರಾವ್‍ ಮುಂತಾದವರ ಚಿತ್ರಗಳಿವೆ. ಆದರೆ, ಅವೆಲ್ಲವೂ ಯಾವಾಗ ಬಿಡುಗಡೆಯೋ ಗೊತ್ತಿಲ್ಲ. ಈ ಪೈಕಿ ಕೆಲವು ಹೀರೋಗಳ ಚಿತ್ರಗಳು ಕೆಲವು ವರ್ಷಗಳಿಂದ ಚಿತ್ರೀಕರಣವಾಗುತ್ತಲೇ ಇವೆ. ಅವೆಲ್ಲವೂ ಮುಗಿದಿದ್ದರೂ, ಬ್ಯುಸಿನೆಸ್‍ ಆಗದ್ದರಿಂದ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಈ ವರ್ಷ ಕೆಲವರ ಚಿತ್ರಗಳ ಬಿಡುಗಡೆಯಾದರೂ ಅವರ ಮುಂದಿನ ನಡೆ ಏನು ಎಂದು ಗೊತ್ತಿಲ್ಲ. ಈ ಪಟ್ಟಿಯಲ್ಲಿ ಯಶ್‍, ರಕ್ಷಿತ್‍ ಶೆಟ್ಟಿ, ರಿಷಭ್‍ ಶೆಟ್ಟಿ ಮುಂತಾದವರ ಚಿತ್ರಗಳೇ ಇಲ್ಲ.

ಇದು ಕನ್ನಡ ಚಿತ್ರರಂಗದ ಸದ್ಯದ ಗತಿ. ಕನ್ನಡದ ಹೀರೋಗಳು ಯಾಕೆ ಸಿನಿಮಾಗಳನ್ನು ಮಾಡುತ್ತಿಲ್ಲ, ಎಲ್ಲರೂ ಯಾಕೆ ಹೀಗೆ ಇಷ್ಟೊಂದು ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ನಿಜ ಹೇಳಬೇಕೆಂದರೆ, ಅವರೆಲ್ಲ ಬ್ಲಾಂಕ್‍ ಆಗಿದ್ದಾರೆ. ಅವರಿಗೇನು ಮಾಡಬೇಕು ಗೊತ್ತಾಗುತ್ತಿಲ್ಲ. ಯಾವ ತರಹದ ಚಿತ್ರಗಳನ್ನು ಕೊಡಬೇಕು ಅರ್ಥವಾಗುತ್ತಿಲ್ಲ. ಜನರು ಬದಲಾಗಿದ್ದಾರೆ, ಅವರ ಮನಸ್ಥಿತಿ ಬದಲಾಗಿದೆ, ಅವರಿಗೆ ಬೇರೇನೋ ಕೊಡಬೇಕು ಎಂಬುದು ಗೊತ್ತಿದೆ. ಆದರೆ, ಏನು ಕೊಡಬೇಕು ಗೊತ್ತಾಗುತ್ತಿಲ್ಲ. ಮುಂಚೆಯಾದರೆ, ಅವರ ಬ್ರಾಂಡ್‍ ಮತ್ತು ಇಮೇಜ್‍ಗೆ ತಕ್ಕ ಹಾಗೆ ಏನೋ ಮಾಡಿಕೊಂಡು ಹೋಗುತ್ತಿದ್ದರು. ಇವತ್ತಿನ ಪರಿಸ್ಥಿತಿಯಲ್ಲಿ ಅದನ್ನೇ ಮುಂದುವರೆಸಿದರೆ ಜನ ಕ್ಯಾರೇ ಎನ್ನುವುದಿಲ್ಲ ಎಂದು ಗೊತ್ತಾಗಿದೆ. ಬದಲಾಗಲೂ ಬೇಕು, ಬದಲಾಗಲೂ ಬಾರದು … ಇದು ಹೇಗೆ ಮಾಡಬೇಕು ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ.

ಇದೆಲ್ಲದರ ಜೊತೆಗೆ ‘ಕೆಜಿಎಫ್‍’ ಮತ್ತು ‘ಕಾಂತಾರ’ ಚಿತ್ರಗಳ ಗೆಲುವು ಹಲವರ ನಿದ್ದೆ ಕೆಡಿಸಿದೆ. ಈ ಚಿತ್ರಗಳು ಪ್ಯಾನ್‍ ಇಂಡಿಯಾ ಮಟ್ಟದಲ್ಲಿ ಗಮನಸೆಳೆದಿದ್ದಷ್ಟೇ ಅಲ್ಲ, ದೊಡ್ಡ ಲಾಭ ಮಾಡಿದವು. ಅದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಕೆಲವೇ ವರ್ಷಗಳ ಅನುಭವವಿರುವ ಯಶ್‍ ಮತ್ತು ರಿಷಭ್‍ ಶೆಟ್ಟಿ ಒಂದು ದೊಡ್ಡ ಮೈಲಿಗಲ್ಲಿ ಸ್ಥಾಪಿಸಿಬಿಟ್ಟರು. ತಮಗಿಂತ ಚಿಕ್ಕವರು ಈ ರೀತಿ ಏನೋ ಮಾಡಿರುವಾಗ ತಾವೇಕೆ ಮಾಡಬಾರದು ಎಂಬುದು ಹಲವರ ಆಸೆ. ಹಾಗಾಗಿ, ‘ಕೆಜಿಎಫ್‍’ ಮತ್ತು ‘ಕಾಂತಾರ’ ಚಿತ್ರಗಳನ್ನು ಮೀರಿಸುವ ಚಿತ್ರ ಮಾಡುವುದಕ್ಕೆ ಎಲ್ಲರೂ ಹೊರಟಿದ್ದಾರೆ ಅಥವಾ ತಮ್ಮ ಚಿತ್ರಗಳನ್ನೇ ಮೀರಿಸುವ ಇನ್ನೊಂದು ಚಿತ್ರ ಮಾಡುವ ಪೈಪೋಟಿಗೆ ಬಿದ್ದಿದ್ದಾರೆ. ಅಂತಹ ಕಥೆಗಳು ಸಿಗದಿದ್ದಾಗ, ಒಪ್ಪಿಕೊಂಡಿರುವ ಕಥೆಗಳನ್ನೇ ಹಿಗ್ಗಿಸಿ ಏನೋ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಅಷ್ಟೇ.

ಇದರಿಂದ ಸಮಯ ಜಾರುತ್ತಿದೆ, ಜನಪ್ರಿಯ ನಟರ ಚಿತ್ರಗಳಿಲ್ಲದೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ ಮತ್ತು ಕನ್ನಡ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ನಂಬಿಕೆ ಕಡಿಮೆ ಆಗುತ್ತಿದೆ ಎನ್ನುವುದು ಬಿಟ್ಟರೆ, ಬೇರೇನೂ ಆಗುತ್ತಿಲ್ಲ. ಒಂದು perfect ಆದಂತಹ ಸಿನಿಮಾ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೇ ದೊಡ್ಡೋರು, good films cannot be made, it happens ಅಂತಾರೆ. ಒಂದೊಳ್ಳೆಯ ಚಿತ್ರ ಮಾಡಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ, ಅದು ಪ್ರಜ್ಞಾಪೂರ್ವಕವಾಗಿ ಮಾಡಲಾಗುವುದಿಲ್ಲ. ಅದಾಗಿಯೇ ಕೂಡಿ ಬರಬೇಕು. ಇದು ಬೇರೆ ಭಾಷೆಯವರಿಗೆ ಸ್ಪಷ್ಟವಾಗಿದೆ, ನಮಗಾಗಿಲ್ಲ ಅಷ್ಟೇ.

ಅದೇ ಕಾರಣಕ್ಕೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದರ ಹಿಂದೊಂದು ಸಿನಿಮಾ ಮಾಡುತ್ತಲೇ ಇರುತ್ತಾರೆ. ‘ಮರಕ್ಕರ್‍’ನಂತಹ 100 ಕೋಟಿ ಸಿನಿಮಾ ಮಾಡುವ ಮೋಹನ್‍ ಲಾಲ್‍, ‘12th Man’ನಂತಹ 10 ಕೋಟಿಯ ಚಿತ್ರ ಮಾಡುತ್ತಾರೆ. ‘ಸಾಮ್ರಾಟ್‍ ಪೃಥ್ವಿರಾಜ್‍’ನಂತಹ ಪಾತ್ರ ಮಾಡುವ ಅಕ್ಷಯ್‍ ಕುಮಾರ್‍, ನಂತರ ‘ರಕ್ಷಾ ಬಂಧನ್‍’ ಅಥವಾ ‘ಕಟ್‍ಪುತ್ಲಿ’ ಚಿತ್ರಗಳನ್ನು ಮಾಡುತ್ತಾರೆ. ಇಲ್ಲಿ ಚಿತ್ರದ ಗಾತ್ರ, ಬಜೆಟ್ ಮುಖ್ಯವಲ್ಲ, ಕಥೆ ಮತ್ತು ಪಾತ್ರ ಮುಖ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ‘ಬಾಹುಬಲಿ’ ನಂತರ ಪ್ರಭಾಸ್‍ ಇನ್ನೊಂದು ಅಂತಹ ದೊಡ್ಡ ಹಿಟ್‍ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಏನೇನೋ ಪ್ರಯತ್ನ ಮತ್ತು ಪ್ರಯೋಗಗಳನ್ನು ಅವರು ಮಾಡುತ್ತಲೇ ಇದ್ದಾರೆ. ಆದರೆ, ಅದರ ಯಶಸ್ಸು ಮೀರಿಸುವ ಇನ್ನೊಂದು ಚಿತ್ರ ಅವರಿಗೆ ಸಿಕ್ಕಿಲ್ಲ. ಹಾಗಾಗಿ, ‘2.0’ದಂತಹ ದೊಡ್ಡ ಚಿತ್ರ ಮಾಡಿದೆ ಎಂದು ರಜನಿಕಾಂತ್‍ ಬೀಗುವುದಿಲ್ಲ. ‘ಕಾಲಾ’ದಂತಹ ಪಾತ್ರ ಮಾಡಿಲ್ಲ ಎಂದು ಅಂಥದ್ದೊಂದು ಪಾತ್ರ ಮಾಡುವುದಕ್ಕೆ ಮುಂದಾಗುತ್ತಾರೆ. ಹಾಗಾಗಿಯೇ ಸೋಲು, ಗೆಲುವು, ಬಜೆಟ್‍, ಕ್ಯಾನ್ವಾಸ್‍, ಗಾತ್ರ ಇದ್ಯಾವುದೂ ಲೆಕ್ಕಕ್ಕೆ ಬರುವುದೇ ಇಲ್ಲ.

ಈ ಸರಳ ವಿಷಯ ನಮ್ಮವರಿಗೆ ಯಾವಾಗ ಅರ್ಥವಾಗುತ್ತದೋ?

ಸಿನಿಮಾಗಾಗಿ 2 ಮನೆ ಮಾರಿದೆ: ಪ್ರದೀಪ್‍ ಯಾದವ್‍ ಅಳಲು

Discover more from KannadaScreens

Subscribe now to keep reading and get access to the full archive.

Continue reading