‘ಕನ್ನಡ ಮಾಧ್ಯಮ’ ಉಳಿಸಿಕೊಳ್ಳಲು ಇನ್ನೊಂದು ಪ್ರಯತ್ನ

ಚಂದನವನ, ಸಿನಿ ಸುದ್ದಿ

ಸರ್ಕಾರಿ ಶಾಲೆಗಳನ್ನು ಉಳಿಸುವ, ಕನ್ನಡ ಮಾಧ್ಯಮವನ್ನು ಉತ್ತೇಜಿಸುವ ಹಲವು ಚಿತ್ರಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ. ಈಗ ಅಖಿಲ್‍ ಪುತ್ತೂರು ಸಹ ಇನ್ನೊಂದು ಪ್ರಯತ್ನ ಮಾಡುತ್ತಿದ್ದಾರೆ. ಅವರು ‘ಕನ್ನಡ ಮಾಧ್ಯಮ’ ಎಂಬ ಚಿತ್ರವನ್ನು ಮಾಡುತ್ತಿದ್ದು, ಮೇ 7ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು ಚಿತ್ರದ ಮೋಷನ್‍ ಪೋಸ್ಟರ್‍ ಬಿಡುಗಡೆಯಾಗಿದೆ.

ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು.

‘ಕನ್ನಡ ಮಾಧ್ಯಮ’ ಚಿತ್ರವನ್ನು ಕಲ್ಕಿ ಪ್ರೊಡಕ್ಷನ್‍ನಡಿ ವೆಂಕಟೇಶ್.ಎಸ್ ನಿರ್ಮಾಣ ಮಾಡುತ್ತಿದ್ದು, ಅಖಿಲ್‍ ಪುತ್ತೂರು ನಿರ್ದೇಶನ ಮಾಡುತ್ತಿದ್ದಾರೆ. ಸವಾದ್ ಮಂಗಳೂರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವುದರ ಜೊತೆ ಛಾಯಾಗ್ರಹಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

ಡಾ. ದೊಡ್ಡರಂಗೇಗೌಡ ಮಾತನಾಡಿ, ‘ಕನ್ನಡದ ಯಾವುದೇ ಕಾರ್ಯಕ್ರಮವಿರಲಿ, ಸಮಾರಂಭವಿರಲಿ, ನಾನು ಪಾಲ್ಗೊಳ್ಳಲು ಮುಖ್ಯ ಕಾರಣ ಕನ್ನಡವೇ ನನ್ನ ಉಸಿರು, ಕನ್ನಡವೇ ನನ್ನ ಬದುಕು, ಕನ್ನಡವೇ ನನ್ನ ಹೆಸರು, ಕನ್ನಡವೇ ನನ್ನ ಬೆಳಕು ಕೂಡ. ವಿಧಾನಸೌಧದಲ್ಲಿ ಮೊದಲ ಕನ್ನಡ ಬಳಕೆ ಪ್ರಾರಂಭವಾಗಬೇಕು. ಎಷ್ಟೋ ಅಧಿಕಾರಿಗಳು ಕನ್ನಡವನ್ನು ಬಳಸುವುದಿಲ್ಲ. ನಾನು ಆಶಾವಾದಿ. ನನ್ನಲ್ಲಿ ಆಶಾ ಕಿರಣವಿದೆ. ಕನ್ನಡ ಇಂದಲ್ಲ ನಾಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಕನ್ನಡ ನಮ್ಮೆಲ್ಲರ ಚೈತ್ಯನವಾಗಲಿ, ಉಸಿರಾಗಲಿ. ಕನ್ನಡ ಮಾಧ್ಯಮ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳನ್ನು ಅಳವಡಿಸುವಂತಾಗಲಿ. ಸಮಗ್ರವಾದ ಕನ್ನಡ ಸಮಸ್ಯೆಗಳ ಕೈಪಿಡಿ ತರಹ ಚಿತ್ರ ಇರಲಿ’ ಎಂದು ಹೇಳಿದರು.

ಅಖಿಲ್ ಪುತ್ತೂರು ಮಾತನಾಡಿ,  ‘ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ. ಜನಗಳಿಗೆ ಗೊತ್ತಿಲ್ಲದ ಒಂದಷ್ಟು ವಿಷಯಗಳನ್ನು ‘ಕನ್ನಡ ಮಾಧ್ಯಮ’ ಚಿತ್ರದಲ್ಲಿ ತಿಳಿಸುತ್ತೇವೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ನಾನು ಯೋಧನಾಗಿ ಪಾತ್ರ ಮಾಡುತ್ತಿದ್ದೇನೆ ಎಂದರು.

‘ಕನ್ನಡ ಮಾಧ್ಯಮ’ ಚಿತ್ರದಲ್ಲಿ ದೊಡ್ಡರಂಗೇಗೌಡ, ನಾಗೇಂದ್ರ ಅರಸ್ , ವಾಣಿ, ಅಖಿಲ್, ಜಾಹ್ನವಿ, ಚಿನ್ಮಯ್ , ಶಿವಮೊಗ್ಗ ರಾಮಣ್ಣ, ಪ್ರದೀಪ್ ಕುಮಾರ್ ನಟಿಸುತ್ತಿದ್ದಾರೆ. ವಿಶಾಲ್‍ ಕೃಷ್ಣ ಅವರ ಸಂಗೀತ ಮತ್ತು ಕೃಷ್ಣ ಸಂಕಲನ ಈ ಚಿತ್ರಕ್ಕಿದೆ.

ಚಿತ್ರಗಳ ಕೊರತೆ; ಮೇ 10ಕ್ಕೆ ‘ಅಂಜನಿಪುತ್ರ’ ಮರುಬಿಡುಗಡೆ

Latest Posts

Discover more from KannadaScreens

Subscribe now to keep reading and get access to the full archive.

Continue reading