ತೆಲುಗಿನಲ್ಲಿ ಬಿಡುಗಡೆಯಾದ ರಾಮ್ ಚರಣ್ ತೇಜ ಮತ್ತು ಸಮಂತಾ ಅಭಿನಯದ ‘ರಂಗಸ್ಥಳ’ ನೆನಪಿರಬಹುದು. ಈ ಚಿತ್ರ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಅದೇ ಹೆಸರಿನ ಕನ್ನಡ ಚಿತ್ರವೊಂದು ಸದ್ದಿಲ್ಲದೆ ಶುರುವಾಗಿ, ಅರ್ಧ ಚಿತ್ರೀಕರಣ ಸಹ ಮುಗಿದಿದೆ. ಅದೇ ‘ರಂಗಸ್ಥಳ’.
ಅಘೋರ್ ಮೋಶನ್ ಪಿಚ್ಚರ್ಸ್ ಅಡಿಯಲ್ಲಿ ಡಾ. ರೇವಣ್ಣ ನಿರ್ಮಾಣದ ‘ರಂಗಸ್ಥಳ’ ಚಿತ್ರದ ಶೀರ್ಷಿಕೆ ಅನಾವಣ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಳ್ಳಲಾಯಿತು.
ಈ ಚಿತ್ರವನ್ನು ಈಶ್ವರ್ ನಿತಿನ್ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರವಂತೆ. ‘ರಂಗಸ್ಥಳ’ ಕುರಿತು ಮಾತನಾಡುವ ಅವರು, ‘ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು, ನಮ್ಮ ಪುತ್ತೂರು, ಸುಳ್ಯ, ಭಾಗದ ಭಾಷೆ, ಸೊಗಡು, ಆಚಾರ, ವಿಚಾರ, ಕಲೆ, ಬದುಕಿನ ಸುತ್ತ ನೈಜತೆಗೆ ಹತ್ತಿರವೆನ್ನುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ರಂಗಸ್ಥಳ ಎಂದರೆ ಒಂದು ವೇದಿಕೆ. ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಅದೇ ರೀತಿ ನನ್ನ ಕಥೆಯಲ್ಲಿ ಬರುವ ಪಾತ್ರಧಾರಿಗಳ ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಈ ರಂಗ ಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.
ಈ ಚಿತ್ರದಲ್ಲಿ ನಾಯಕನ ಯಕ್ಷಗಾನ ಕಲಾವಿದ ಹಾಗೂ ನಾಯಕಿ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿರುತ್ತಾರಂತೆ. ಹಾಗೆಯೇ ಮಲಯಾಳಂನ ಖ್ಯಾತ ನಟ ಮನೋಜ್. ಕೆ. ಜಯನ್ ಒಂದು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹಳಷ್ಟು ಹೊಸಬರು ಹಾಗೂ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದು, ಈಗಾಗಲೇ 25 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು, ಶೇ.40ರಷ್ಟು ಕೆಲಸ ಮುಗಿದಿದೆ ಎಂದು ನಿರ್ದೇಶಕರು ಹೇಳಿಕೊಂಡರು.
ನಾಯಕನಾಗಿ ಅಭಿನಯಿಸುತ್ತಿರುವ ವಿಲೋಕ್ ರಾಜ್ ಚಿತ್ರರಂಗದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದು, ಸುಮಾರು ಒಂಬತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗಿರ್ಕಿ’ ನಂತರ ಈ ‘ರಂಗಸ್ಥಳ’, ವಿಲೋಕ್ ಚಿತ್ರ ಜೀವನಕ್ಕೆ ಒಂದು ತಿರುವು ನೀಡುವಂತಹ ಸಿನಿಮಾ ವಾಗಲಿದೆಯಂತೆ. ಇನ್ನು, ಮಂಗಳೂರು ಮೂಲದ ಬೆಡಗಿ ಶಿಲ್ಪ ಕಾಮತ್ ನಾಯಕಿಯಾಗಿ ಈ ಚಿತ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಮನೋಜ್ ಜೆಬೆ ಎಂಬ ಮಲಯಾಳಂ ಪ್ರತಿಭೆ ಕಾಮಿಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಾಗೆಯೇ, ಮತ್ತೊಬ್ಬ ಪ್ರತಿಭೆ ಸಂಧ್ಯಾ ಅರ್ಕೆರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ವಿಶೇಷವೆಂದರೆ, ಮಲಯಾಳಂ ನಟ ಮನೋಜ್ ಕೆ. ಜಯನ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೋಜ್‍ಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಉಗ್ರನರಸಿಂಹ’ ಚಿತ್ರದಲ್ಲಿ ಮನೋಜ್ ನಟಿಸಿದ್ದರು. ಸುಮಾರು 18 ವರ್ಷಗಳ ನಂತರ ಮತ್ತೊಮ್ಮೆ ‘ರಂಗಸ್ಥಳ’ ಮೂಲಕ ವಿಲನ್ ಪಾತ್ರದಲ್ಲಿ ಕಾಡಿಸಿಕೊಂಡಿದ್ದಾರೆ. ಮಲಯಾಳಂ ಮೂಲದ ವ್ಯಕ್ತಿಯಾಗಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
‘ರಂಗಸ್ಥಳ’ ಚಿತ್ರಕ್ಕೆ ಎನಾಷ್ ಒಲಿವೇರ ಛಾಯಾಗ್ರಹಣ ಮಾಡುತ್ತಿದ್ದು , ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.


