‘ವರಾಹಚಕ್ರಂ’ನಲ್ಲಿ ಡಿಜಿಟಲ್‍ ಲೋಕದ ಮೋಸ ಅನಾವರಣ

Small Screen

‘ವರಾಹಚಕ್ರಂ’ ಎಂಬ ಚಿತ್ರದಲ್ಲಿ ಪ್ರೇಮಾ ನಟಿಸುತ್ತಿದ್ದಾರೆ, ಈ ಚಿತ್ರದ ಮೂಲಕ ‘ಮನಸುಗಳ ಮಾತು ಮಧುರ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್‍ಮಟ್ಟಿ ನಿರ್ದೇಶನಕ್ಕೆ ವಾಪಸ್ಸಾಗುತ್ತಿದ್ದಾರೆ ಎಂಬ ವಿಷಯ ಈಗಾಗಲೇ ಸುದ್ದಿ ಆಗಿದೆ. ಈ ಚಿತ್ರಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಚಂದ್ರಾ ಲೇಔಟ್ ನ  ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದ್ದು, ಮಾಜಿ ಸಚಿವ ಆರ್.ಅಶೋಕ್ ಚಿತ್ರದ ಪ್ರಥಮ‌ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

‘ವರಾಹಚಕ್ರಂ’ ಒಂದು ಥ್ರಿಲ್ಲರ್‍ ಚಿತ್ರ. ಈಗಿನ ಡಿಜಿಟಲ್ ಜಗತ್ತಿನಲ್ಲಿ ಏನೇನೆಲ್ಲ ಅನ್ಯಾಯ, ಮೊಸ, ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ಹೇಳಹೊರಟಿರುವ ಚಿತ್ರ. ಅಷ್ಟೇ ಅಲ್ಲ, ಈ ಅಕ್ರಮಗಳಿಗೆ ಐದು ನಾಯಕರ ತಂಡ ಹೇಗೆ ಅಂತ್ಯ ಹಾಡುತ್ತದೆ ಎಂಬುದನ್ನು ಸಹ ಈ ಚಿತ್ರದಲ್ಲಿ ತೋರಿಸಲಾಗುತ್ತದಂತೆ. ತೆಲುಗು ನಟ ಭಾನುಚಂದರ್,   ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ  ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಹಾಗೂ ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಕಥೆಯೇ ನಾಯಕ ಎನ್ನುವ ನಿರ್ದೇಶಕ ಮಂಜು ಮಸ್ಕಲ್‍ಮಟ್ಟಿ, ‘ವರಾಹ ವಿಷ್ಣುವಿನ ಒಂದು ಅವತಾರ. ಡಿಜಿಟಲೀಕರಣದಿಂದ ಕೆಲವು ದುರುಪಯೋಗಗಳಾಗುತ್ತಿವೆ.  ಅದಕ್ಕೆಲ್ಲ ಅಂತ್ಯ ಹಾಡುವ ವಿಷಯ ಈ ಚಿತ್ರದಲ್ಲಿದೆ. ಕಣ್ಣು, ಗನ್ನು,‌ ಪೆನ್ನು ಈ‌ ಮೂರನ್ನೂ ಇಟ್ಟುಕೊಂಡು ಏನೋ ಮಾಡಲು ಹೊರಟಿದ್ದೇನೆ  ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡಿನ ಪೊಲ್ಲಾಚ್ಚಿ ಅಲ್ಲದೆ ಉತ್ತರ ಪ್ರದೇಶದ  ವಾರಣಾಸಿ, ಕಾಶಿಯಲ್ಲೇ 20 ದಿನ ಶೂಟಿಂಗ್ ನಡೆಸುವ ಪ್ಲಾನಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ.

ಇದುವರೆಗೂ ಮಾಡಿರುವ ಚಿತ್ರಗಳಲ್ಲೇ ಇದು ವಿಭಿನ್ನ ಪಾತ್ರ ಎನ್ನುವ ಪ್ರೇಮಾ, ‘ಸ್ವಲ್ಪ ನೆಗೆಟಿವ್, ಸ್ವಲ್ಪ ಪಾಸಿಟಿವ್ ಎರಡೂ ಶೇಡ್ ಇರುವ ಪಾತ್ರ ಇದು. ಭಾನುಚಂದರ್ ಜೊತೆ ಹಿಂದೆ ‘ದೇವಿ’ ಎಂಬ ತಲುಗು ಚಿತ್ರದಲ್ಲಿ ಅಭಿನಯಿಸಿದ್ದೆ. ಈಗ ಪುನಃ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ.

ಚಿತ್ರದ 5 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವ ಜೊತೆ ಪ್ರಮುಖ ಪಾತ್ರದಲ್ಲೂ  ಕಾಣಿಸಿಕೊಳ್ಳುತ್ತಿರುವ ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ, ‘ಇದೊಂದು ಆಕ್ಷನ್,  ಫ್ಯಾಮಿಲಿ ಜೊತೆಗೆ ಮನರಂಜನಾತ್ಮಕವಾಗಿರುವ ಅಪ್ಪಟ ಕಮರ್ಷಿಯಲ್ ಚಿತ್ರ. ಈಗಿನ ಯುಗದಲ್ಲಿ ಡಿಜಿಟಲ್ ಮಾಲಿನ್ಯ ಹೇಗೆ ನಡೆಯುತ್ತಿದೆ ಎಂಬುದರ ಜೊತೆಗೆ ಸಮಾಜದ ಅನೇಕ ಓರೆಕೋರೆಗಳನ್ನು  ಪ್ರೇಕ್ಷಕರ ಮುಂದೆ ಇಡುವ ಚಿತ್ರವಿದು. ನನ್ನ ಕೆಲಸ ತೆರೆಯ ಹಿಂದೆಯೇ ಜಾಸ್ತಿ‌ಯಿದ್ದು, ಚಿತ್ರದ ಸಂಭಾಷಣೆ ಕೂಡ ಬರೆಯುತ್ತಿದ್ದೇನೆ. ತೂಕವಿರುವ ಒಂದು ಪಾತ್ರವನ್ನೂ ಸಹ  ಮಾಡುತ್ತಿದ್ದೇನೆ’ ಎನ್ನುತ್ತಾರೆ.

‘ವರಾಹಚಕ್ರಂ’ ಚಿತ್ರದಲ್ಲಿ  ಯಕಿಯರಾಗಿ ಶೋಭಾರಾಣಿ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ, ಚೈತ್ರಾ  ನಟಿಸುತ್ತಿದ್ದಾರೆ. ಚಿ.ಗುರುದತ್, ಶೋಭರಾಜ್ ಅಲ್ಲದೆ  ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಅವರ ಜೋಡಿಯಾಗಿ ಮುಂಬೈನ ನೇಹಾ ಅನ್ಸಾರಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ.

https://indiascreens.in/dheeren-getting-ready-for-his-second-film-with-chethan-kumar/

Discover more from KannadaScreens

Subscribe now to keep reading and get access to the full archive.

Continue reading