‘ಬಿಗ್‍ ಬಾಸ್‍’ನ ಹೊಸ ಸೀಸನ್‍ ಹೊಸ ಮನೆಗೆ ಸ್ಥಳಾಂತರ …

ಕಿರುತೆರೆ, ಚಂದನವನ, ಸಿನಿ ಸುದ್ದಿ

‘ಬಿಗ್ ಬಾಸ್‍ ಕನ್ನಡ – ಸೀಸನ್‍ 10’ರ ಶುರುವಿಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ. ಭಾನುವಾರ ಸಂಜೆ 6.30ಕ್ಕೆ ಈ ಕಾರ್ಯಕ್ರಮದ ಪ್ರಸಾರ ಶುರುವಾಗಲಿದ್ದು, ಅಂದು ಕಾರ್ಯಕ್ರಮದ ನಿರೂಪಕ ಸುದೀಪ್‍, ಸ್ಪರ್ಧಿಗಳನ್ನು ಮನೆಯೊಳಗೆ ಬರಮಾಡಿಕೊಳ್ಳಲಿದ್ದಾರೆ.

ಅಂದಹಾಗೆ, ಈ ಬಾರಿಯ ಸೀಸನ್‍ ವಿಶೇಷತೆಯೆಂದರೆ, ಹೊಸ ಮನೆ. ಕಳೆದ ಒಂಬತ್ತು ವರ್ಷಗಳಲ್ಲಿ ಮೊದಲ ಎರಡು ವರ್ಷಗಳ ಕಾಲ ಪೂಣೆಯಲ್ಲಿ ಚಿತ್ರೀಕರಣಗೊಳ್ಳುತ್ತಿತ್ತು. ಹಿಂದಿ ‘ಬಿಗ್‍ ಬಾಸ್‍’ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಸೆಟ್‍ನಲ್ಲೇ ಕನ್ನಡ ಕಾರ್ಯಕ್ರಮದ ಚಿತ್ರೀಕರಣ ಸಹ ನಡೆಯುತ್ತಿತ್ತು. ಸುದೀಪ್ ಪ್ರತೀ ವಾರ ಬೆಂಗಳೂರಿನಿಂದ ಲೋನಾವಳಕ್ಕೆ ಪ್ರಯಾಣ ಮಾಡಿ, ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಆ ನಂತರ, ಈ ಕಾರ್ಯಕ್ರಮವು ಬೆಂಗಳೂರಿಗೆ ಶಿಫ್ಟ್ ಆಯಿತು. ಬಿಡದಿ ಬಳಿ ಇರುವ ಇನ್ನೋವೇಟಿವ್‍ ಫಿಲಂ ಸಿಟಿಯಲ್ಲಿ ಈ ಕಾರ್ಯಕ್ರಮಕ್ಕಾಗಿಯೇ ವಿಶೇಷ ಸೆಟ್‍ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವರ್ಷದಿಂದ ಮತ್ತೆ ಜಾಗ ಬದಲಾಗಿದೆ. ಇನ್ನೋವೇಟೀವ್‍ ಫಿಲಂ ಸಿಟಿ ಈಗ ಜಾಲಿವುಡ್‍ ಆಗಿರುವುದರಿಂದ ಮತ್ತು ಹೊಸ ಮ್ಯಾನೇಜ್‍ಮೆಂಟ್‍ ಬಂದಿರುವುದರಿಂದ, ದೊಡ್ಡ ಆಲದ ಮರ ಬಳಿಯ ಜಾಗವೊಂದರಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ನೂರಾರು ಕಾರ್ಮಿಕರು, ಹಗಲು ರಾತ್ರಿ ಎನ್ನದೆ, ನಾಲ್ಕು ತಿಂಗಳ ಕಾಲ ಶ್ರಮವಹಿಸಿ ಒಂದು ಭವ್ಯವಾದ ಮನೆಯನ್ನು ಕಟ್ಟಿದ್ದಾರೆ.

ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲ ಭಾಷೆಯ ಬಿಗ್ ಬಾಸ್ ಮನೆಗಳಿಗಿಂತ ದೊಡ್ಡದಾಗಿದೆ. 12 ಸಾವಿರ ಚದರಡಿಗಳ ಈ ಮಹಾಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡುವುದು ಹಾಗೂ ಟಾಸ್ಕ್ ಗಳನ್ನು ಮಾಡಬಹುದು. 16ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ನಿನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ.

ಈ ಮನೆಗೆ ಸ್ಪರ್ಧಿಗಳು ಶನಿವಾರ ರಾತ್ರಿ ಸ್ಪರ್ಧಿಗಳು ಎಂಟ್ರಿ ಕೊಡುವ ಸಾಧ್ಯತೆ ಇದ್ದು, ಭಾನುವಾರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸೋಮವಾರದಿಂದ ಪ್ರತೀ ರಾತ್ರಿ 9.30ಕ್ಕೆ ಕಲರ್ಸ್‍ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಘೋಷಣೆಯಾಗದಿದ್ದರೂ, ಈ ಬಾರಿ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿರುವ ಶ್ವಾನ, ‘Excuse Me’ ಖ್ಯಾತಿಯ ನಟ ಸುನೀಲ್‍ ರಾವ್‍, ರಘು ಮುಖರ್ಜಿ, ಅಕ್ಕ ಅನು, ಪ್ರಕಾಶ್‍ ತುಮ್ಮಿನಾಡು, ರಂಜಿನಿ ರಾಘವನ್‍, ಹುಲಿ ಕಾರ್ತಿಕ್‍, ನಮ್ರತಾ ಗೌಡ, ಚಂದ್ರಪ್ರಭ, ‘ಬಾಲಾಜಿ ಫೋಟೋ ಸ್ಟುಡಿಯೋ’ ಖ್ಯಾತಿಯ ರಾಜೇಶ್‍ ಧ್ರುವ, ‘ಕೆಜಿಎಫ್‍’ನಲ್ಲಿ ಅಭಿನಯಿಸಿದ್ದ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್‍ ಕುಮಾರ್, ಪೋಷಕ ನಟಿ ಸ್ವಾತಿ, ಬುಲೆಟ್‍ ಪ್ರಕಾಶ್‍ ಮಗ ರಕ್ಷಕ್, Rapper ಇಶಾನಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

https://indiascreens.in/big-boss-kannada-season-10-to-be-24-hours-live-in-jio-cinema-channel/

Discover more from KannadaScreens

Subscribe now to keep reading and get access to the full archive.

Continue reading