ಸಿಹಿಕಹಿ ಚಂದ್ರು ‘ಬೊಂಬಾಟ್ ಭೋಜನ’ ಎಂಬ ಅಡುಗೆ ಕಾರ್ಯಕ್ರಮವನ್ನು ಸ್ಟಾರ್ ಸುವರ್ಣದಲ್ಲಿ ಕೆಲವು ವರ್ಷಗಳಿಂದ ನಡೆಸಿಕೊಡುತ್ತಲೇ ಇದ್ದಾರೆ. ಅದೆಷ್ಟು ಕಂತಾಯ್ತು ಎಂದು ಪ್ರೇಕ್ಷಕರ್ಯಾರೂ ಲೆಕ್ಕ ಇಟ್ಟಿಲ್ಲ. ಚಂದ್ರು ಮಾಡಿದ ಹೊಸರುಚಿಗಳನ್ನು ಟ್ರೈ ಮಾಡುತ್ತಲೇ ಇದ್ದಾರೆ. ಈಗ ಆ ಕಾರ್ಯಕ್ರಮ ಎಷ್ಟು ಕಂತು ಪೂರೈಸಿದೆ ಎಂದು ಸುವರ್ಣ ಚಾನಲ್ನವರು ಲೆಕ್ಕ ಕೊಟ್ಟಿದ್ದಾರೆ.
‘ಬೊಂಬಾಟ್ ಭೋಜನ’ 850 ಕಂತುಗಳನ್ನು ಮುಗಿಸಿ, 1000ದತ್ತ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲೆಂದೇ ಬೊಂಬಾಟ್ ಭೋಜನದೊಂದಿಗೆ ಸಿಹಿಕಹಿ ಚಂದ್ರು ಮತ್ತು ಅವರ ತಂಡದವರು ಬಂದಿದ್ದರು.
‘ಬೊಂಬಾಟ್ ಭೋಜನ’ವನ್ನು ಜನಪ್ರಿಯಗೊಳಿಸುತ್ತಿರುವ ಸಮಸ್ತ ಜನತೆಗೆ ಧನ್ಯವಾದ ಹೇಳುತ್ತಾ ಮಾತು ಆರಂಭಿಸಿದ ಸಿಹಿಕಹಿ ಚಂದ್ರು, ‘ನಮ್ಮ ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ನಮ್ಮ ಕಾರ್ಯಕ್ರಮದಲ್ಲಿ ‘ಬಯಲೂಟ’, ‘ಮನೆಯೂಟ’, ‘ಸವಿಯೂಟ’, ‘ನಮ್ಮೂರ ಊಟ’, ‘ಅತಿಥಿ ದೇವೋಭವ’ ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಆರೋಗ್ಯ ಆಹಾರ ಹಾಗೂ ಅಂಗೈಯಲ್ಲಿ ಆರೋಗ್ಯ ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿ ಡಾ. ಗೌರಿ ಸುಬ್ರಹ್ಮಣ್ಯ ಅವರು ಮಾಹಿತಿ ನೀಡುತ್ತಾರೆ. ‘ಬೊಂಬಾಟ್ ಭೋಜನ’ದಲ್ಲಿ ಎಂ.ಎನ್ ನರಸಿಂಹಮೂರ್ತಿ ಅವರು ಹೇಳುವ ಟೈಮ್ ಪಾಸ್ ಜೋಕ್ಸ್ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಖುಷಿ ಚಂದ್ರಶೇಖರ್ ಅವರು ನೀಡುವ ಬ್ಯೂಟಿ ಟಿಪ್ಸ್ ಮಹಿಳೆಯರ ಮನ ಗಿದ್ದಿದೆ. ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ‘ಬೊಂಬಾಟ್ ಭೋಜನ’ ಮೂರನೇ ವರ್ಷದಲ್ಲಿ ಮೂರನೇ ಸೀಸನ್ ನಲ್ಲಿ ಮುಂದುವರೆಯುತ್ತಿದೆ’ ಎನ್ನುತ್ತಾರೆ.

ಈ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿರುವ ಚಂದ್ರು, ‘ಆಯಾ ಊರಿನ ಕೆಲವು ಮನೆಗಳಿಗೆ ಹಾಗೂ ಹೋಟಿಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಖಾದ್ಯ ತಿಂದಿದ್ದೇನೆ. ಹೋದ ಕಡೆಯಲ್ಲಾ ಸಿಗುತ್ತಿರುವ ಜನಮನ್ನಣೆಗೆ ಮನಸ್ಸು ತುಂಬಿ ಬಂದಿದೆ. ಸಾವಿರ ಕಂತಿಗೆ ದೊಡ್ಡ ಸಮಾರಂಭ ಆಯೋಜಿಸುವ ಯೋಚನೆಯಿದೆ’ ಎಂದು ಮಾಹಿತಿ ನೀಡಿದರು.
ಮಧ್ಯಾಹ್ಯ 12ಕ್ಕೆ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಬೊಂಬಾಟ್ ಭೋಜನ ನಂಬರ್ ಒನ್ ಸ್ಥಾನದಲ್ಲಿದೆಯಂತೆ. ಈ ಸೀಸನ್ ನ ವಿಶೇಷವೆಂದರೆ ಚಂದ್ರು ಅವರು ವಿಶೇಷವಾದ ಬೊಂಬಾಟ್ ಹಲ್ವ ಎಂಬ ಸಿಹಿತಿಂಡಿಯನ್ನು ಹಾಗೂ ಬೊಂಬಾಟ್ ಕಾಫಿ ಎಂಬ ಫಿಲ್ಟರ್ ಕಾಫಿಯನ್ನು ಕಂಡಿ ಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ಹಾಸ್ಯಸಾಹಿತಿ ಎಂ.ಎಸ್ ನರಸಿಂಹಮೂರ್ತಿ, ಸಿಹಿಕಹಿ ಗೀತಾ, ಖುಷಿ ಚಂದ್ರಶೇಖರ್ ಮುಂತಾದವರಿದ್ದರು. ‘ಬೊಂಬಾಟ್ ಭೋಜನ 2’ ಹಾಗೂ ‘ಆರೋಗ್ಯ ಆಹಾರ’ ಎಂಬ ಎರಡು ಪುಸ್ತಕಗಳು ಬಿಡುಗಡೆಯಾಯಿತು.


