ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ಗೆ ಚಾಲನೆ ಸಿಕ್ಕಿ 24 ವರ್ಷಗಳು ಮುಗಿದಿವೆ. ಈ ಹಿಂದೆ, ಸಂಘದ ವತಿಯಿಂದ ‘ಟಿವಿ ಠೀವಿ’ ಎಂಬ ಮಾಸಪತ್ರಿಕೆ ಬಿಡುಗಡೆಯಾಗುತ್ತಿತ್ತು. ಕಾರಣಾಂತರಗಳಿಂದ ಈ ಪತ್ರಿಕೆಯ ಮುದ್ರಣ ನಿಂತಿತ್ತು. ಈಗ ಪುನಃ ಅದಕ್ಕೆ ಚಾಲನೆ ಸಿಕ್ಕಿದೆ.
ಇತ್ತೀಚೆಗೆ ಈ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ಉಮಾಶ್ರೀ, ಪ್ರಕಾಶ್ ರೈ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಮಿಲನ ಪ್ರಕಾಶ್ ಮುಂತಾದವರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟಿವಿ ಠೀವಿ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಮುಂದಿನ ವರ್ಷ ನಮ್ಮ ಸಂಸ್ಥೆ 25 ನೇ ವರ್ಷಕ್ಕೆ ಅಡಿಯಿಡುತ್ತಿದೆ ಎಂದು ಮಾತು ಆರಂಭಿಸಿದ, KTVA ಪ್ರಧಾನ ಕಾರ್ಯದರ್ಶಿ ಸೃಜನ್ ಲೋಕೇಶ್, ‘ಈಗಿರುವ ನಮ್ಮ ಸಂಸ್ಥೆಯ ಸದಸ್ಯರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು ಹಾಗೂ ಇನ್ನೂ ಸದಸ್ಯರಾಗದವರೂ ಬೇಗ ಸದಸ್ಯತ್ವ ಪಡೆದುಕೊಳ್ಳುವಂತೆ’ ಮನವಿ ಮಾಡಿದರು.

ಕಿರುತೆರೆಗೆ ಸರ್ಕಾದ ಸಹಕಾರದ ಅವಶ್ಯಕತೆ ಇದೆ ಎಂದ ಕೆಟಿವಿಎ ಅಧ್ಯಕ್ಷ ರವಿ ಗರಣಿ, ‘ಕಿರುತೆರೆ ಕ್ಷೇತ್ರದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನ ಕೆಲಸ ಮಾಡುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ. ಆದರೆ, ಅವರಿಗೆ ಆರೋಗ್ಯ ವಿಮೆ (ಯಶಸ್ವಿನಿ) ಸೇರಿದಂತೆ ಯವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ದಯವಿಟ್ಟು ಸನ್ಮಾನ್ಯ ಸಚಿವರು ಈ ಕುರಿತು ಸಹಕಾರ ನೀಡಬೇಕು. ಕೆಲವು ವರ್ಷಗಳು ಪ್ರಸಾರವಾಗಿ ಸ್ಥಗಿತಗೊಂಡಿದ್ದ ಟಿವಿ ಠೀವಿ ಮಾಸಪತ್ರಿಕೆಯನ್ನು ಪುನರಾರಂಭ ಮಾಡುತ್ತಿದ್ದೇವೆ. ವಿಶೇಷ ಸಂಚಿಕೆ ಇಂದು ಬಿಡುಗಡೆಯಾಗಿದೆ. ಈ ಮಾಸ ಪತ್ರಿಕೆ ಎಲ್ಲೂ ಮಾರಾಟಕ್ಕಿರುವುದಿಲ್ಲ. ನಮ್ಮ ಸದಸ್ಯರಿಗೆ ಹಾಗೂ ಆಸಕ್ತರಿಗೆ ನಾವೇ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದರು.
ಕಿರುತೆರೆಯವರ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ‘ರವಿ ಗರಣಿ ಹೇಳಿರುವ ವಿಷಯಗಳನ್ನು ಆದಷ್ಟು ಬೇಗ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ’ ಎಂದು ಆಶ್ವಾಸನೆ ನೀಡಿದರು.
ಈ ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಕಿರುತೆರೆಯ ಹಲವು ಕಲಾವಿದರುಉ ಮತ್ತು ತಂತ್ರಜ್ನರು ಭಾಗವಹಿಸಿದ್ದರು.


