ಹಿರಿತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದ ರಾಜೇಶ್ ನಟರಂಗ, ಇದೀಗ ಕಿರುತೆರೆಗೆ ವಾಪಸ್ಸಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಅಮೃತಧಾರೆ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಮೃತಧಾರೆ ಇಂದಿನಿಂದ (ಮೇ 29) ಸಂಜೆ 7:00ಕ್ಕೆ ಪ್ರಸಾರವಾಗಲಿದೆ.
ಇಲ್ಲಿ ಗೌತಮ್ (ರಾಜೇಶ್ ನಟರಂಗ) ಮತ್ತು ಭೂಮಿಕಾ (ಛಾಯಾ ಸಿಂಗ್) ಅವರವರ ಕುಟುಂಬಕ್ಕೋಸ್ಕರ ಶ್ರಮಿಸುತ್ತಲೇ ತಮ್ಮ ಕನಸುಗಳನ್ನೇ ಬದಿಗಿಟ್ಟಿದ್ದಾರೆ. ಮದುವೆಯನ್ನ ಮುಂದೂಡಿ ಎಲ್ಲ ಇದ್ದೂ ಒಂಟಿಯಾಗಿದ್ದಾರೆ. ಈ ಒಂಟಿ ಜೀವಗಳೆರಡು ಒಂದಾದರೆ ಅದೇ ಒಲವಿನ ಅಮೃತಧಾರೆಯಾಗಲಿದೆ.
ಇದನ್ನೂ ಓದಿ: ಸುಧಾರಾಣಿ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ ಸುಧಾರಾಣಿ …
ಈಗಾಗಲೇ ಪ್ರೊಮೋಗಳು ಬಿಡುಗಡೆಯಾಗಿದ್ದು, ನಾಯಕ-ನಾಯಕಿಯ ಕೋಳಿ ಜಗಳ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಹೀಗೆ ಸದಾ ಹಾವು ಮುಂಗುಸಿ ತರಹ ಕಿತ್ತಾಡ್ತಿರೋ ನಾಯಕ-ನಾಯಕಿ ಒಲವಿನ ಸುಳಿಯಲ್ಲಿ ಸಿಕ್ಕಿ ಬೀಳ್ತಾರಾ? ಇಬ್ಬರೂ ಒಂದಾಗುತ್ತಾರಾ? ಒಂದಾದರೆ ಆ ಕಥೆ ಮುಂದೆ ಹೇಗಿರತ್ತೆ? ಅನ್ನೋದನ್ನು ಧಾರಾವಾಹಿಯಲ್ಲೇ ನೋಡಬೇಕು.
ಬಹುತಾರಾಗಣದ ಈ ಧಾರಾವಾಹಿಯಲ್ಲಿ ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ವನಿತಾ ವಾಸು, ಅಮೃತ ನಾಯಕ್, ಶಶಿ ಹೆಗ್ಡೆ, ಸಾರಾ ಅಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೀರ್ತಿ ಅಕ್ಷಯ್ ಸಂಸ್ಥೆ ಹೊತ್ತಿದ್ದು. ಉತ್ತಮ್ ಮಧು ನಿರ್ದೇಶಿಸಲಿದ್ದಾರೆ. ಸುನಾದ್ ಗೌತಮ್ ಶೀರ್ಷಿಕೆ ಗೀತೆಗೆ ಸಂಗೀತ ಸಂಯೋಜಿಸಿದ್ದು, ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಸಾಹಿತ್ಯ ರಚಿಸಿದ್ದಾರೆ.


