‘ರೊಲೆಕ್ಸ್’ ಈಗ ‘ರಿಲ್ಯಾಕ್ಸ್’ ಆಯ್ತು; ಕೋಮಲ್‍ ಚಿತ್ರದ ಹೆಸರು ಬದಲು

ಚಂದನವನ, ಸಿನಿ ಸುದ್ದಿ

ಸರಿಯಾಗಿ ಒಂದು ವರ್ಷವಾಗಿತ್ತು ಕೋಮಲ್‍ ಅಭಿನಯದ ಚಿತ್ರವೊಂದು ಬಿಡುಗಡೆ ಆಗಿ. ಅವರ ‘ಕೋಣ’ ಚಿತ್ರವು ಕಳೆದ ವರ್ಷ ಅಕ್ಟೋಬರ್‍ 31ರಂದು ಬಿಡುಗಡೆ ಆಗಿತ್ತು. ಇದೀಗ ಅವರದ್ದೇ ‘ರಿಲ್ಯಾಕ್ಸ್’ ಚಿತ್ರವು ಇದೇ ಅಕ್ಟೋಬರ್‍ 30ಕ್ಕೆ ಬಿಡುಗಡೆ ಆಗುವುದಕ್ಕೆ ಸಜ್ಜಾಗುತ್ತಿದೆ.

ಎಲ್ಲಾ ಸರಿ, ಯಾವುದಿದು ‘ರಿಲ್ಯಾಕ್ಸ್’ ಎಂಬ ಪ್ರಶ್ನೆ ಬರಬಹುದು. ಕೋಮಲ್‍, ‘ರೋಲೆಕ್ಸ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿರಬಹುದು. ಅದೇ ಚಿತ್ರ ‘ರಿಲ್ಯಾಕ್ಸ್’ ಆಗಿದೆ. ‘ರೋಲೆಕ್ಸ್’ ಎಂಬುದು ಹೇಳಿಕೇಳಿ ಅಂತಾರಾಷ್ಟ್ರೀಯ ಬ್ರಾಂಡ್‍. ಅನುಮತಿ ಇಲ್ಲದೆ ಹೆಸರು ಬಳಸಿಕೊಂಡರೆ, ನಾಳೆ ಎಲ್ಲಿ ಚಿತ್ರದ ಬಿಡುಗಡೆಗೆ ಸಮಸ್ಯೆ ಆಗುತ್ತದೋ ಎಂದು ಚಿತ್ರತಂಡದವರು, ಕೊನೆಯ ಕ್ಷಣದಲ್ಲಿ ಹೆಸರು ಬದಲಾಯಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವುದರ ಜೊತೆಗೆ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಮಲ್‍, ‘’ರೋಲೆಕ್ಸ್’, ‘ರಿಲ್ಯಾಕ್ಸ್’ ಆಗಿದೆ. ಹೇಗೆ ಸೋನಲ್ ಮಾಂತೇರೋ, ಸೋನಲ್‍ ತರುಣ್ ಸುಧೀರ್‍ ಆದರೋ, ಅದೇ ರೀತಿ ಚಿತ್ರದ ಹೆಸರು ಬದಲಾಗಿದೆ. ಈ ಚಿತ್ರ ಶುರುವಾಗುವ ಹೊತ್ತಿಗೆ ಅವರಿಗೆ ಮದುವೆ ಆಗಿರಲಿಲ್ಲ. ನಂತರ ಮದುವೆ ಆಗಿ ಸೋನಲ್‍ ತರುಣ್‍ ಆದರು. ಈ ಚಿತ್ರಕ್ಕೆ ಮೊದಲು ‘ರಿಲ್ಯಾಕ್ಸ್’ ಎಂಬುದು ಟ್ಯಾಗ್‍ಲೈನ್‍ ಆಗಿತ್ತು. ‘ರೋಲೆಕ್ಸ್’ ನೋಡಿ ರಿಲ್ಯಾಕ್ಸ್ ಆಗಿ ಎಂಬ ತಾತ್ಪರ್ಯವಿತ್ತು. ಈಗ ಅದೇ ಶೀರ್ಷಿಕೆಯಾಗಿದೆ’ ಎಂದರು.

‘ರೋಲೆಕ್ಸ್’ ಎಂಬ ಹೆಸರು ಬೇಡ ಎಂದು ನಾನು ಮೊದಲೇ ಹೇಳಿದ್ದೆ ಎಂದ ಕೋಮಲ್‍, ‘ಬ್ರಾಂಡ್‍ ಹೆಸರು ಬಳಸಿದರೆ ಸಮಸ್ಯೆ ಆಗುತ್ತದೆ ಎಂದಿದ್ದೆ. ಈ ಹಿಂದೆ ‘ಕಿಂಗ್‍ಫಿಷರ್‍’ ಮುಂತಾದ ಚಿತ್ರಗಳಿಗೆ ಸಮಸ್ಯೆ ಆಗಿತ್ತು. ಆದರೆ, ‘ರೋಲೆಕ್ಸ್’ ಎಂಬ ಹೆಸರು ಈ ಪಾತ್ರಕ್ಕೆ ಸೂಟ್‍ ಆಗುತ್ತದೆ. ಹಾಗಾಗಿ, ಇದೇ ಹೆಸರಿರಲಿ ಎಂದಿದ್ದರು. ಕೊನೆಗೆ ಕಾನೂನು ಸಮಸ್ಯೆಗಳು ಎದುರಾಗಬಾರದು, ಅದರಿಂದ ಚಿತ್ರ ವಿಳಂಬವಾಗಬಾರದು ಎಂಬ ಕಾರಣಕ್ಕೆ ಹೆಸರು ಬದಲಾಯಿಸಿದ್ದಾರೆ. ನಾನು ಬಹಳ ವರ್ಷಗಳ ನಂತರ ಈ ಜಾನರ್ ನ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ’ ಎಂದರು.

ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ‘ನಾಲ್ಕು ಹಾಡುಗಳಿದ್ದು, ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಾಹಕ ರಾಕೇಶ್ ತಿಲಕ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಕೋಮಲ್ ಕುಮಾರ್, ಸೋನಾಲ್ ಮಾಂತೆರೊ, ವಿನೋದ್ ಪ್ರಭಾಕರ್ ಹೀಗೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಬಹಳ ಚೆನ್ನಾಗಿದೆ’ ಎಂದರು.
.
ನಿರ್ಮಾಪಕರು ಚಿತ್ರೀಕರಣದ ಸಮಯದಲ್ಲಿ ಸೋನಾಲ್ ಅವರನ್ನು ಮಗಳ ರೀತಿ ನೋಡಿಕೊಂಡಿದ್ದಾರಂತೆ. ‘ಇಡೀ ತಂಡ ಕುಟುಂಬದ ರೀತಿ ಇತ್ತು. ಇದೇ ಮೊದಲ ಬಾರಿಗೆ ಕೋಮಲ್‌ ಕುಮಾರ್ ಅವರ ಜೊತೆ ನಟನೆ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಕಾರಿಯಾಗಿದೆ. ಮತ್ತೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದರು

ಈ ಚಿತ್ರವನ್ನು ಮಧು ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ಆಂಧ್ರ ಪ್ರದೇಶ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಅಂಬಟಿ ಮಧು ಮೋಹನ್ ನಿರ್ಮಿಸುತ್ತಿದ್ದಾರೆ.

‘ಜೈಲರ್’, ‘ರಣಬಾಲಿ’ಗೆ ಬಗ್ಗಲಿಲ್ಲ, ತಗ್ಗಲಿಲ್ಲ ‘ಪ್ರೇಮದ ಊರಲಿ’ …

Discover more from KannadaScreens

Subscribe now to keep reading and get access to the full archive.

Continue reading