ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ಈ ಮಟ್ಟಕ್ಕೆ ಯಶಸ್ವಿಯಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದ ಶ್ರೀ, ರಂಗಾಯಣ ರಘು ಮುಂತಾದವರು ಅಭಿನಯಿಸಿದ ‘ಪ್ರೇಮದ ಊರಲಿ’ ಚಿತ್ರವು ಮೂರನೇ ವಾರದಲ್ಲಿ 36.40 ಕೋಟಿ ರೂ. ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಮಾಡಿದೆ.
ಸೆಪ್ಟೆಂಬರ್ 26ರಂದು ಬಿಡುಗಡೆಯಾದ ‘ಪ್ರೇಮದ ಊರಲಿ’ ಚಿತ್ರವು ಮೊದಲ ವಾರ 5.32 ಕೋಟಿ ರೂ ಮಾತ್ರ ಗಳಿಕೆ ಮಾಡಿತ್ತು. ಎರಡನೇ ವಾರ 23.65 ಕೋಟಿ ರೂ. ಗಳಿಕೆ ಕಂಡ ಚಿತ್ರ, ಮೂರನೆಯ ವಾರದಲ್ಲಿ 36.40 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಂ ವರದಿ ಮಾಡಿದೆ. ಮೂರೂ ವಾರಗಳಿಂದ ಚಿತ್ರವು 65.37 ರೂ. ಗಳಿಕೆ ಮಾಡಿದೆ. ಇದು ಗ್ರಾಸ್ ಗಳಿಕೆಯಾಗಿದ್ದು, ಎಲ್ಲಾ ಕಳೆದು ನಿರ್ಮಾಪಕರು ಸದ್ಯ 30ಕ್ಕೂ ಹೆಚ್ಚು ಕೋಟಿ ಲಾಭದಲ್ಲಿದ್ದಂತಾಗುತ್ತದೆ.
ಮೊದಲ ಮೂರು ವಾರಗಳೇನೋ ಓಕೆ. ಆದರೆ, ನಾಲ್ಕನೇ ವಾರ ಗಳಿಕೆ ಸ್ವಲ್ಪ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ, ರಜನಿಕಾಂತ್ ಅಭಿನಯದ ‘ಜೈಲರ್ 2’ ಮತ್ತು ವಿಜಯ್ ದೇವರಕೊಂಡ ಅಭಿನಯದ ‘ರಣಬಾಲಿ’ ಚಿತ್ರಗಳು ಬಿಡುಗಡೆಯಾಗಿವೆ. ಜೊತೆಗೆ, ಗುರುವಾರ ಮತ್ತು ಶುಕ್ರವಾರ ಮಳೆಯ ಅಬ್ಬರವಿದೆ. ಇದರಿಂದ ‘ಪ್ರೇಮದ ಊರಲಿ’ ಗಳಿಕೆ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಗುರುವಾರ, ‘ಜೈಲರ್ 2’ ಬಿಡುಗಡೆ ಮತ್ತು ಮಳೆಯ ನಡುವೆಯೂ ಚಿತ್ರ 3.15 ಕೋಟಿ ರೂ. ಗಳಿಕೆ ಮಾಡಿದೆ. ಶುಕ್ರವಾರ ಸಹ ಗಳಿಕೆ ಮೂರು ಕೋಟಿ ದಾಟಬಹುದು ಎಂದು ಹೇಳಲಾಗುತ್ತಿದೆ.
ಇನ್ನು, ‘ಜೈಲರ್ 2’ ಮತ್ತು ‘ರಣಬಾಲಿ’ ಚಿತ್ರಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದರಿಂದ ‘ಪ್ರೇಮದ ಊರಲಿ’ ಚಿತ್ರಕ್ಕೆ ಲಾಭ ಎಂದು ಹೇಳಲಾಗುತ್ತಿದೆ. ‘ಪ್ರೇಮದ ಊರಲಿ’ ಚಿತ್ರ ಪ್ರದರ್ಶನ ಕಾಣುತ್ತಿದ್ದ ಹಲವು ಚಿತ್ರಮಂದಿರಗಳಲ್ಲಿ, ಪ್ರದರ್ಶನ ನಿಲ್ಲಿಸಿ ಚಿತ್ರಮಂದಿರಗಳನ್ನು ಅವೆರಡೂ ಚಿತ್ರಗಳಿಗೆ ನೀಡಲಾಗಿತ್ತು. ಇದೀಗ ಎರಡೂ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ, ಹಲವು ಚಿತ್ರಮಂದಿರಗಳಲ್ಲಿ ಪುನಃ ‘ಪ್ರೇಮದ ಊರಲಿ’ ಚಿತ್ರ ಪ್ರದರ್ಶನ ಕಾಣುವ ಸಾಧ್ಯತೆ ಇದೆ. ಇನ್ನೂ ಐದು ದಿನಗಳ ದಸರಾ ರಜೆಯಿದ್ದು, ಈ ವಾರ ಚಿತ್ರದ ಗಳಿಕೆ 20ರಿಂದ 30 ಕೋಟಿಯಷ್ಟಾಗಬಹುದು ಎಂಬ ನಿರೀಕ್ಷೆ ಇದೆ.
ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಪ್ರೇಮದ ಊರಲಿ’ ಚಿತ್ರ ನಿರ್ಮಾಣಗೊಂಡಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ರಾಜ್‌ಕಾಂತ್ ಎಸ್.ಕೆ ಅವರ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರಕ್ಕಿದೆ.


