ಮತ್ತೆ ಮುಗ್ಧತೆಯನ್ನು ಹುಡುಕಿ ಹೊರಟಿದ್ದಾರೆ ಶೇಖರ್ ಕಪೂರ್!

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಒಂದು ಚಿತ್ರದ ಯಶಸ್ಸಿನ ನಂತರ ಅದರ ಮುಂದುವರೆದ ಭಾಗ ಬರುವುದು ಸಹಜ. ಆದರೆ, ಒಂದು ಚಿತ್ರ ಬಿಡುಗಡೆಯಾಗಿ 43 ವರ್ಷಗಳ ನಂತರ ಅದರ ಮುಂದುವರೆದ ಭಾಗ ಬರುತ್ತಿರುವುದು ವಿಶೇಷ. ಅಂಥದ್ದೊಂದು ಕೆಲಸವನ್ನು ಶೇಖರ್ ಕಪೂರ್‍ ಕೈ ಹಾಕಿದ್ದಾರೆ. 1983ರಲ್ಲಿ ಬಿಡುಗಡೆಯಾದ ಅವರ ಜನಪ್ರಿಯ ಚಿತ್ರವಾದ ‘ಮಾಸೂಮ್‍’ ಕಥೆಯನ್ನು ಅವರು ಇಂದಿನ ಕಾಲಮಾನಕ್ಕೆ ಮುಂದುವರೆಸುವುದಕ್ಕೆ ನಿರ್ಧರಿಸಿದ್ದಾರೆ. ಈ ಮುಂದುವರೆದ ಭಾಗಕ್ಕೆ ‘ಮಾಸೂಮ್‍ – ದಿ ನೆಕ್ಸ್ಟ್ ಜನರೇಷನ್’ ಎಂಬ ಹೆಸರಿಟ್ಟಿದ್ದಾರೆ.

1964ರಲ್ಲಿ ಹಾಲಿವುಡ್‍ನಲ್ಲಿ ಜೂಲಿ ಆ್ಯಂಡ್ರೂಸ್‍ ಅಭಿನಯದ ‘ಮೇರಿ ಪಾಪಿನ್ಸ್’ ಎಂಬ ಮ್ಯೂಸಿಕಲ್‍ ಕಾಮಿಡಿ ಚಿತ್ರ ಬಂದಿತ್ತು. ಅದಾಗಿ 54 ವರ್ಷಗಳ ನಂತರ ಅಂದರೆ 2018ರಲ್ಲಿ ‘ಮೇರಿ ಪಾಪಿನ್ಸ್ ರಿಟರ್ನ್ಸ್’ ಎಂಬ ಮುಂದುವರೆದ ಭಾಗ ಬಂದಿತ್ತು. ಕನ್ನಡದಲ್ಲೇ ತೆಗೆದುಕೊಂಡರೆ, ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ‘ಚಾಮಯ್ಯ ಸನ್‍ ಆಫ್‍ ರಾಮಾಚಾರಿ’ ಚಿತ್ರವು ಪುಟ್ಟಣ್ಣ ಕಣಗಾಲ್‍ ನಿರ್ದೇಶನದ ಮತ್ತು ವಿಷ್ಣುವರ್ಧನ್‍ ಅಭಿನಯದ ‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಾಗಿತ್ತು. ಅದೂ ಸಹ 54 ವರ್ಷಗಳ ನಂತರ ಬಿಡುಗಡೆಯಾಗಿತ್ತು. ಆದರೆ, ಎರಡೂ ಚಿತ್ರಗಳ ಮತ್ತು ಅದರ ಮುಂದುವರೆದ ಭಾಗಗಳ ನಡುವೆ ಹಲವು ವ್ಯತ್ಯಾಸಗಳಿದ್ದವು. ಮೊದಲ ಚಿತ್ರಕ್ಕೆ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರು, ಮುಂದುವರೆದ ಭಾಗದಲ್ಲಿ ಇರಲಿಲ್ಲ.

ಆದರೆ, ‘ಮಾಸೂಮ್‍ – ದಿ ನೆಕ್ಸ್ಟ್ ಜನರೇಷನ್’ನಲ್ಲಿ ಹಾಗಿಲ್ಲ. ಮೊದಲ ಭಾಗದಲ್ಲಿ ನಟಿಸಿದ್ದ ನಾಸೀರುದ್ದೀನ್‍ ಷಾ, ಶಬಾನಾ ಆಜ್ಮಿ, ಜುಗಲ್‍ ಹಂಸ್‍ರಾಜ್‍ ಮುಂತಾದವರು ಮುಂದುವರೆದ ಭಾಗದಲ್ಲೂ ಮುಂದುವರೆಯಲಿದ್ದಾರೆ. ಹೆಸರೇ ಹೇಳುವಂತೆ ಇದು ಮುಂದುವರೆದ ತಲೆಮಾರಿನ ಕಥೆ. ಮೊದಲ ಚಿತ್ರದಲ್ಲಿ ನಾಸೀರುದ್ದೀನ್‍ ಷಾ ಮಗನಾಗಿ ಜುಗಲ್‍ ಹಂಸ್‍ರಾಜ್‍ ನಟಿಸಿದ್ದರು. ಅವರು ಬೆಳೆದು ದೊಡ್ಡವರಾದ ಮೇಲೆ ಏನೆಲ್ಲಾ ಆಗುತ್ತದೆ ಎಂಬುದರ ಕುರಿತು ಮುಂದುವರೆದ ಭಾಗ ಸುತ್ತುತ್ತದಂತೆ.

ಸದ್ಯಕ್ಕೆ ಬರವಣಿಗೆ ಕೆಲಸಗಳು ನಡೆಯುತ್ತಿದ್ದು, ಕೆಲವು ತಿಂಗಳುಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಳಕಿಗೆ ಬಾರದ ಕಥೆಗಳನ್ನು ತೆರೆಗೆ ತರುವ ಆಸೆ: ಚಂದ್ರಶೇಖರ್ ಬಂಡಿಯಪ್ಪ

Discover more from KannadaScreens

Subscribe now to keep reading and get access to the full archive.

Continue reading