ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ‘ಕರಾವಳಿ’ ಚಿತ್ರವು ಕಳೆದ ತಿಂಗಳು ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದರೂ, ಚಿತ್ರಕ್ಕೆ ಕಥೆ ಕೊಟ್ಟವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಇತ್ತೀಚಿನ ದಿನಗಳಲ್ಲಿ ಒಬ್ಬರ ಕಥೆಯನ್ನು ಇನ್ನೊಬ್ಬರು ನಿರ್ದೇಶನ ಮಾಡುವುದು ಕಡಿಮೆಯಾಗುತ್ತಿದೆ. ಹೀಗಿರುವಾಗ, ಗುರುದತ್ ಏಕೆ ಚಂದ್ರಶೇಖರ್ ಬಂಡಿಯಪ್ಪ ಅವರ ಕಥೆಯನ್ನು ಆಯ್ಕೆ ಮಾಡಿಕೊಂಡರು ಎಂದರೆ ಅದಕ್ಕೆ ಕಾರಣ ಕಥೆ.
ಚಂದ್ರಶೇಖರ್ ಬಂಡಿಯಪ್ಪ ಅವರ ಚಿತ್ರಗಳನ್ನು ನೋಡಿಕೊಂಡು ಬಂದರೆ, ಅವರು ತಮ್ಮ ಪ್ರತಿ ಚಿತ್ರದಲ್ಲೂ ಒಂದೊಂದು ವಿಭಿನ್ನವಾದ ಕಥೆಯನ್ನು ಹೇಳಿಕೊಂಡು ಬಂದಿದ್ದಾರೆ. ಆ ನಿಟ್ಟಿನಲ್ಲಿ ಬರೆದಿದ್ದೇ ‘ಕರಾವಳಿ’. ಒಂದೊಳ್ಳೆಯ ಕಥೆ ಮಾಡಿಕೊಂಡು, ಅದನ್ನು ಅವರೇ ನಿರ್ದೇಶನ ಮಾಡಬಹುದಿತ್ತು. ಆ ಕಥೆಯನ್ನು ಅವರು ಗುರುಗೆ ಕೊಟ್ಟಿದ್ದು ಯಾಕೆ?
ಈ ಕುರಿತು ಮಾತನಾಡುವ ಬಂಡಿಯಪ್ಪ, ‘ನಾನು ಗುರು ಎಲ್ಲಾ ಎಸ್. ನಾರಾಯಣ್ ಅವರ ತಂಡದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದವರು. ನಾರಾಯಣ್ ನಿರ್ದೇಶನದ ‘ಶೈಲೂ’ ಮತ್ತು ‘ಮುಂಜಾನೆ’ ಚಿತ್ರಗಳಿಗೆ ನಾನು ಅಸೋಸಿಯೇಟ್ ಆಗಿದ್ದ ಸಂದರ್ಭದಲ್ಲಿ ಗುರು ಸಹ ನಿರ್ದೇಶನ ತಂಡದಲ್ಲಿದ್ದರು. ಆಗಿನಿಂದ ಅವರು ಪರಿಚಯ. ಆ ನಂತರ ನಾನು ಸ್ವತಂತ್ರ ನಿರ್ದೇಶಕನಾದೆ. ‘ರಥಾವರ’ ಚಿತ್ರದ ನಿರ್ದೇಶಿಸುವ ಸಂದರ್ಭದಲ್ಲಿ ‘ನೀ ಮುದ್ದಾದ ಮಾಯಾವಿ …’ ಎಂಬ ಹಾಡಿನ ಚಿತ್ರೀಕರಣಕ್ಕೆ ಮಂಗಳೂರಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಹಲವು ಲೊಕೇಶನ್‍ಗಳನ್ನು ನೋಡಿದ್ದೆ. ಆಗ ಕಂಬಳ ನನ್ನ ಗಮನ ಸೆಳೆಯಿತು’ ಎನ್ನುತ್ತಾರೆ.

ನಾವು ಬಯಲು ಸೀಮೆಯವರಾದ್ದರಿಂದ ಕಂಬಳದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಎನ್ನುವ ಬಂಡಿಯಪ್ಪ, ‘ಕಂಬಳದ ಬಗ್ಗೆ ವಿಚಾರಿಸಿದಾಗ ಅದಕ್ಕೆ ಸಾವಿರ ವರ್ಷಗಳ ಇತಿಹಾಸದ ಬಗ್ಗೆ ತಿಳಿಯಿತು. ನಮ್ಮಲ್ಲಿ ನಮಗೆ ಗೊತ್ತಿರದ ನೂರಾರು ಕಥೆಗಳಿವೆ. ಕಂಬಳ, ಕರ್ನಾಟಕದ ಹೆಮ್ಮೆ. ಅದರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ, ಅದರ ಹಿನ್ನೆಲೆಯಲ್ಲಿ ಒಂದು ಕಥೆ ಬರೆದೆ. ಅದನ್ನು ನಮ್ಮ ತಂಡದವರಿಗೆ ಹೇಳಿದೆ. ಆ ತಂಡದಲ್ಲಿ ಗುರು ಸಹ ಇದ್ದರು. ಎಲ್ಲರೂ ಈ ಕಥೆಯನ್ನು ಬಹಳ ಮೆಚ್ಚಿಕೊಂಡರು. ಆ ನಂತರ ನಾನು ಈ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡುವುದಕ್ಕೆ ಹೋದೆ’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.
ಕೆಲವು ವರ್ಷಗಳ ಹಿಂದೆ ಇದೇ ಕಥೆಯನ್ನಿಟ್ಟುಕೊಂಡು, ಶಿವರಾಜಕುಮಾರ್ ಅಭಿನಯದಲ್ಲಿ ‘ವೈರಮುಡಿ’ ಎಂಬ ಚಿತ್ರವನ್ನೂ ಘೋಷಿಸಿದ್ದರು ಬಂಡಿಯಪ್ಪ. ‘ಆ ಕಥೆಯನ್ನಿಟ್ಟುಕೊಂಡು ಶಿವರಾಜಕುಮಾರ್ ಅಭಿನಯದಲ್ಲಿ ಚಿತ್ರ ಘೋಷಿಸಿದೆ. ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದುವರೆಯಲಿಲ್‍ಲ. ಅಷ್ಟರಲ್ಲಿ ‘ಕಾಂತಾರ’ ಬಿಡುಗಡೆ ಆಯಿತು. ಅದರಲ್ಲಿ ಕಂಬಳ ಕುರಿತ ದೃಶ್ಯಗಳಿದ್ದವು. ಅದಕ್ಕೂ ಮೊದಲು ಯಾರೂ ಕಂಬಳ ತೋರಿಸಿರಲಿಲ್ಲ. ನನಗೆ ಮೊದಲು ನನ್ನ ಚಿತ್ರದಲ್ಲಿ ಕಂಬಳ ತೋರಿಸಬೇಕೆಂಬ ಆಸೆ ಇತ್ತು. ‘ಕಾಂತಾರ’ದಲ್ಲಿ ಬಂದಿದ್ದರಿಂದ ಸುಮ್‍ಮನಾದೆ. ಆದರೆ, ಗುರು ಆ ಕಥೆ ಕೊಡಿ, ನಾನು ಚಿತ್ರ ಮಾಡುತ್ತೇನೆ ಎಂದು ಹೇಳತ್ತಿದ್ದರು. ಗುರು, ಕಂಬಳವನ್ನು ಬಹಳ ಹತ್ತಿರದಿಂದ ನೋಡಿದವರು. ಅವರ ಮನೆಯಲ್ಲೇ ಕಂಬಳ ಆಯೋಜಿಸುತ್ತಾರೆ. ನನಗಿಂತ ಅವರು ಚೆನ್ನಾಗಿ ಮಾಡಬಹುದು ಎಂದು ಅವರಿಗೆ ಕೊಟ್ಟೆ. ಕಥೆಗೆ ಒಳ್ಳೆಯ ಸಂಭಾವನೆಯನ್ನೂ ಕೊಟ್ಟರು. ಕಥೆಗೆ ಪೂರಕವಾಗಿ ಏನು ಬೇಕಾದರೂ ಬದಲಾವಣೆ ಮಾಡಿಕೊಳ್ಳಬಹುದು ಎಂಬ ಅನುಮತಿಯನ್ನೂ ಕೊಟ್ಟೆ. ಅದರಂತೆ ನನ್ನ ಮೂಲ ಕಥೆಯನ್ನಿಟ್ಟುಕೊಂಡು, ಚಿತ್ರಕಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಚಿತ್ರವನನು ಚೆನ್ನಾಗಿ ರೂಪಿಸಿದ್ದಾರೆ. ನನಗೆ ಖುಷಿಯಾಗಿದ್ದೇನೆಂದರೆ, ಒಬ್ಬ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದ ಗುರು, ಅಂಥದ್ದೊಂದು ಹಲವು ಕೋಟಿಗಳ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಿಸಿದ್ದು. ಆ ನಿಟ್ಟಿನಲ್ಲಿ ನನಗೆ ಗುರು ಬಗ್ಗೆ ಬಹಳ ಹೆಮ್ಮೆ ಇದೆ’ ಎನ್ನುತ್ತಾರೆ.
ಈ ವರ್ಷ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರ ಬಿಡುಗಡೆಯಾಯಿತು. ಆ ನಂತರ ಕಥೆ ಬರೆದ ‘ಕರಾವಳಿ’ ಸಹ ಬಿಡುಗಡೆ ಆಯಿತು. ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ‘ಯಜಮಾನ’, ‘ಹುಚ್ಚ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ರೆಹಮಾನ್ ಅವರಿಗೆ ಒಂದು ಚಿತ್ರ ನಿರ್ದೇಶಿಸಿ ಕೊಡುವ ಜವಾಬ್ದಾರಿ ಬಂದಿದೆಯಂತೆ. ಇದರ ಜೊತೆಗೆ ಬೆಂಗಳೂರು ಕರಗದ ಬಗ್ಗೆಯೂ ಒಂದು ಚಿತ್ರ ಮಾಡುವ ಆಸೆ ಅವರಿಗಿದೆ.
ಈ ಕುರಿತು ಮಾತನಾಡುವ ಅವರು, ‘ಬೆಂಗಳೂರು ಕರಗದ ಚಿತ್ರ ಮಾಡುವ ಆಸೆ ಇದೆ. ಈಗಾಗಲೇ ಕೆಲವು ವರ್ಷಗಳಿಂದ ಆ ಕಥೆಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ, ಚಿತ್ರಕಥೆ ಮಾಡಿಟ್ಟುಕೊಂಡಿದ್ದೇನೆ. Bound Script ಸಹ ತಯಾರಿದೆ. ಅದಕ್ಕೆ ಒಳ್ಳೆಯ ಬಜೆಟ್ ಬೇಕು. ಅದೊಂದು ಒಳ್ಳೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮಲ್ಲಿ ಬೆಳಕಿಗೆ ಬಾರದ ನೂರಾರು ಕಥೆಗಳಿವೆ. ಅದನ್ನೆಲ್ಲಾ ತೆರೆಗೆ ತರಬೇಕು ಎನ್ನುವುದು ನನ್ನ ಆಸೆ’ ಎನ್ನುತ್ತಾರೆ.
ಸೃಜನ್ ಅಭಿನಯದ ‘ಆನೆ ಪಟಾಕಿ’ ಚಿತ್ರದ ಮೂಲಕ ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ, ನಂತರದ ದಿನಗಳಲ್ಲಿ ಶ್ರೀಮುರಳಿ ಅಭಿನಯದ ‘ರಥಾವರ’, ವೈಭವ್ ಅಭಿನಯದ ‘ತಾರಕಾಸುರ’ ಚಿತ್ರ ಮಾಡಿದರು. ಹಿಂದಿಯಲ್ಲಿ ಕಿಶೋರ್ ಅಭಿನಯದಲ್ಲಿ ‘ರೆಡ್ ಕಾಲರ್’ ಎಂಬ ಚಿತ್ರವನ್ನೂ ನಿರ್ದೇಶಿಸಿದರು. ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
‘ಶಾಂತಿ ಕ್ರಾಂತಿ’ ಮರುಬಿಡುಗಡೆ ಆಗುತ್ತದಾ? ಕೊನೆಗೂ ಸಿಕ್ಕಿತು ಉತ್ತರ …


