ರೌಡಿಸಂ ಎಂದರೆ ಬರೀ ಮಚ್ಚು, ಲಾಂಗು, ಕೊಚ್ಚು, ಕೊಲ್ಲು ಅಲ್ಲ: ಚೈತನ್ಯ

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ರೌಡಿಸಂ ಕಥೆ ಎಂದರೆ ಬರೀ ಮಚ್ಚು, ಲಾಂಗು, ಕೊಚ್ಚು, ಕೊಲ್ಲು ಅಷ್ಟೇ ಅಲ್ಲ. ಅಲ್ಲೂ ಎಮೋಷನಲ್‍ ಆದಂತಹ ಕಥೆಗಳು ಇರುತ್ತವೆ. ‘ಬಲರಾಮನ ದಿನಗಳು’ ಸಹ ಅಂಥದ್ದೇ ಒಂದು ಕಥೆ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಹೇಳಿದ್ದಾರೆ.

‘ಬಲರಾಮನ ದಿನಗಳು’ ಚಿತ್ರವು ಜೂನ್‍ 26ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ, ಈ ಮಧ್ಯೆ, ಚಿತ್ರದ ಟ್ರೇಲರ್‍ ಬಿಡುಗಡೆ ಆಗಿದೆ. ನಟ ಧ್ರುವ ಸರ್ಜಾ ಮುಖ್ಯ ಅತಿಥಿಯಾಗಿ ಬಂದು ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಟ ವಿನೋದ್‍ ಪ್ರಭಾಕರ್‍ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ, ಈ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಬಂದಿರಲಿಲ್ಲ.

ಈ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೆ.ಎಂ. ಚೈತನ್ಯ, ‘ಈ ಹಿಂದೆ ಬಲರಾಮ ಎಂಬ ರೌಡಿಶೀಟರ್‍ ಇದ್ದರು. ಇದು ಅವರ ಬಯೋಪಿಕ್ ಅಲ್ಲ. ಬಲರಾಮ ಎಂಬುದು ಕಾಲ್ಪನಿಕ ಪಾತ್ರ. ಇದು ಅವನ ಕಾಲಘಟ್ಟದ ಒಂದು ಕಥೆ. ಆ ದಿನಗಳ ಇನ್ನೊಂದು ಅಧ್ಯಾಯ ಎಂಬ ಟ್ಯಾಗ್‍ಲೈನ್‍ ಚಿತ್ರಕ್ಕಿದೆ. ಅಂದರೆ, ಇದು ‘ಆ ದಿನಗಳು’ ಚಿತ್ರದ ಮತ್ತೊಂದು ಅಧ್ಯಾಯವಲ್ಲ. ಇದೊಂದು ಕಾಲ್ಪನಿಕ ಕಥೆ. ಆದರೆ, ನಿಜಜೀವನದ ಮತ್ತು ನಿಜ ಜನರ ಸ್ಫೂರ್ತಿ ಈ ಚಿತ್ರಕ್ಕಿದೆ’ ಎಂದರು,

ರೌಡಿಸಂ ಕಥೆಯನ್ನು ಇವತ್ತಿನ ಶೈಲಿಯ ನಿರೂಪಣೆಯಲ್ಲಿ ಹೇಳುವ ಪ್ರಯತ್ನ ಮಾಡಿರುವುದಾಗಿ ಹೇಳುವ ಚೈತನ್ಯ, ‘‘ಕಾಂತಾರ’ ಚಿತ್ರ ಮಾಡಿ, ಅದು ಬಿಡುಗಡೆಯಾದ ಎರಡು ವರ್ಷಗಳಿಗೆ ‘ಕಾಂತಾರ – ಚಾಪ್ಟರ್‍ 1’ ಚಿತ್ರ ಬಂದಿತು. ಆಗ ಅದೇ ಮಾದರಿಯನ್ನು ಮುಂದುವರೆಸಬಹುದು. ‘ದುರಂಧರ್‍’ ಮಾಡಿ, ಕೆಲವೇ ದಿನಗಳಲ್ಲಿ ಅದೇ ಮಾದರಿಯಲ್ಲಿ ‘ದುರಂಧರ್‍ 2’ ಮಾಡಬಹುದು. ಆದರೆ, ‘ಆ ದಿನಗಳು’ ಚಿತ್ರ ಬಿಡುಗಡೆಯಾಗಿ 18 ವರ್ಷಗಳಾಗಿವೆ. ಅದೇ ಮಾದರಿಯಲ್ಲಿ ಮಾಡಬೇಕೆಂದೇನೂ ಇಲ್ಲ. ಇಂದಿನ ತಲೆಮಾರಿನವರಿಗೆ ಏನು ಬೇಕೋ, ಆ ರೀತಿ ಕಥೆ ಹೆಣೆದಿದ್ದೇನೆ. ಆ ಚಿತ್ರದ ಎಲ್ಲಾ ಸಾರವಿದೆ. ಅದನ್ನು ಇವತ್ತಿನ ಶೈಲಿಯ ನಿರೂಪಣೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.

ಬಲರಾಮನ ಪಾತ್ರಕ್ಕೆ ವಿನೋದ್‍ ಬಹಳ ಚೆನ್ನಾಗಿ ಒಗ್ಗಿಕೊಂಡರು ಎಂದ ಚೈತನ್ಯ, ‘ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಅವರೂ ಒಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವ ಶಕ್ತಿ ಅವರಿಗಿದೆ. ನಾಲ್ಕು ತಿಂಗಳ ಕಾಲ ನಾವೇನು ಚಿತ್ರೀಕರಣ ಮಾಡಿದೆವೋ, ಅಷ್ಟೂ ದಿನಗಳ ಕಾಲ ಅವರು ಬಲರಾಮನಾಗಿ ಜೀವಿಸಿದರು. ಅವರ ಜೊತೆಗೆ ಕೆಲಸ ಮಾಡಿದ್ದು ನನಗೆ ಬಹಳ ಅನುಕೂಲವಾಯಿತು. ನಾನೇನು ಬಲರಾಮನ ಪಾತ್ರವನ್ನು ಕಲ್ಪಿಸಿಕೊಂಡಿದ್ದೆನೋ, ಅದಕ್ಕಿಂತ 10 ಪಟ್ಟು ಚೆನ್ನಾಗಿ ತೆರೆಯ ಮೇಲೆ ತಂದರು. ನಾವು ಟೀಸರ್‍ ಬಿಡುಗಡೆ ಮಾಡಿದಾಗ, ಬಲರಾಮನ ಪಾತ್ರಕ್ಕೆ ವಿನೋದ್‍ ಅವರನ್ನು ಬಿಟ್ಟರೆ ಬೇರೆ ಯಾರೂ ಸೂಟ್‍ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದರು.

ಈಗಾಗಲೇ ಬಂದಿರುವ ನೂರಾರು ರೌಡಿಸಂ ಚಿತ್ರಗಳಿಗಿಂತ, ‘ಬಲರಾಮನ ದಿನಗಳು’ ಎಷ್ಟು ವಿಭಿನ್ನವೆಂದು ಮಾತನಾಡಿರುವ ಅವರು, ‘ನಾವು ‘ಆ ದಿನಗಳು’ ಚಿತ್ರ ಮಾಡಿದಾಗಲೂ ಇದೇ ಪ್ರಶ್ನೆ ಬಂದಿತ್ತು. ಇದು ಇನ್ನೊಂದು ರೌಡಿಸಂ ಸಿನಿಮಾ ಅಲ್ಲ, ಇದು ಬೇರೆ ರೀತಿಯ ರೌಡಿಸಂ ಚಿತ್ರ ಎಂದು ಆಗ ಹೇಳುತ್ತಿದ್ದೆವು. ಎಷ್ಟು ಹೇಳಿದರೂ, ನಾವೇನು ಹೇಳುತ್ತಿದ್ದೇವೆ ಎಂದು ಗೊತ್ತಾಗುವುದಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕ್ರೈಮ್‍ ಜಗತ್ತಿಗೂ ನಮಗೂ ಒಂದು ಹತ್ತಿರವಾದ ಸಂಬಂಧವಿರುತ್ತದೆ. ಅದು ಎಷ್ಟೋ ಬಾರಿ ನಮಗೆ ಗೊತ್ತಾಗುವುದಿಲ್ಲ. ಒಂದು ನಗರವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಅದರ ಕ್ರೈಮನ್ನು ಅರ್ಥ ಮಾಡಿಕೊಳ್ಳಬೇಕು. ಕ್ರೈಮ್‍ ಯಾವ ರೀತಿ ಬದಲಾಗುತ್ತಿರುತ್ತದೋ, ಅದೇ ರೀತಿ ಆ ನಗರದ ರಾಜಕೀಯ ಮತ್ತು ಎಕನಾಮಿಕ್ಸ್ ಬದಲಾಗುತ್ತಿರುತ್ತದೆ. ಅವೆಲ್ಲವನ್ನೂ ಬಹಳ ಎಮೋಷನಲ್‍ ಆಗಿ, ಮಾನವೀಯವಾಗಿ ತಲುಪಿಸುವ ಕಥೆ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ’ ಎಂದರು.

‘ಬಲರಾಮನ ದಿನಗಳು’ ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‍ನಡಿ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದು, ವಿನೋದ್ ಪ್ರಭಾಕರ್‍, ಪ್ರಿಯಾ ಆನಂದ್‍, ಆಶೀಶ್‍ ವಿದ್ಯಾರ್ಥಿ, ಅತುಲ್‍ ಕುಲಕರ್ಣಿ, ವಿನಯ್‍ ಗೌಡ, ರಮೇಶ್‍ ಇಂದಿರಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಂತೋಷ್‍ ನಾರಾಯಣ್‍ ಸಂಗೀತ ಮತ್ತು ಎಚ್‍.ಸಿ. ವೇಣು ಛಾಯಾಗ್ರಹಣವಿದೆ.

ನಾಯಕನಾದ ಮೊದಲ ಚಿತ್ರಕ್ಕೆ ಒಂದು ಕೋಟಿ ಪಡೆದ್ರಾ ಗಿಲ್ಲಿ ನಟ?

Discover more from KannadaScreens

Subscribe now to keep reading and get access to the full archive.

Continue reading