ನಾಯಕನಾದ ಮೊದಲ ಚಿತ್ರಕ್ಕೆ ಒಂದು ಕೋಟಿ ಪಡೆದ್ರಾ ಗಿಲ್ಲಿ ನಟ?

ಚಂದನವನ, ಸಂದರ್ಶನ, ಸಿನಿ ಸುದ್ದಿ

ಗಿಲ್ಲಿ ನಟ ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಪಳಾರ್‍’ ಚಿತ್ರ ಇತ್ತೀಚೆಗೆ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರಂಭವಾಯಿತು. ಮುಹೂರ್ತ ಸಮಾರಂಭದಲ್ಲಿ ರವಿಚಂದ್ರನ್ ಕ್ಲ್ಯಾಪ್ ಮಾಡಿದರೆ, ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ‌ ಮಾಡೋ ಮೂಲಕ‌ ‘ಪಳಾರ್’ ಚಿತ್ರಕ್ಕೆ ಚಾಲನೆ ನೀಡಿದರು.

KVN ಪ್ರೊಡಕ್ಷನ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಸಂಸ್ಥೆ ಅರ್ಪಿಸುತ್ತಿದೆ. ಹಾಸ್ಯ ಚಿತ್ರಗಳಿಗೆ ಬ್ರ್ಯಾಂಡ್ ಆಗಿರೋ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಹೂರ್ತದ ನಂತರ ಗಿಲ್ಲಿನಟನ ಹುಟ್ಟುಹಬ್ಬವನ್ನು ಚಿತ್ರತಂಡ ಆಚರಿಸಿತು.

ಈ ಕುರಿತು ಮಾತನಾಡಿದ ಗಿಲ್ಲಿ ನಟ, ‘ಇಷ್ಟು ವರ್ಷಗಳಲ್ಲಿ ನಾನು ಯಾವತ್ತೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಇಷ್ಟೊಂದು ಅದ್ದೂರಿಯಾಗಿ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಹುದು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಅದು ಇಂದು ಈಡೇರಿತು. ನಾನು ‘ಬಿಗ್‍ ಬಾಸ್‍’ನಿಂದ ಬಂದ ಮೇಲೆ ಹಲವು ಅವಕಾಶಗಳು ಸಿಕ್ಕವು. ಆ ಪೈಕಿ ಬೆಸ್ಟ್ ಆಗಿರುವ ಚಿತ್ರಕ್ಕೆ ಕಾಯುತ್ತಿದ್ದೆ. ಅಂಥ ಸಂದರ್ಭದಲ್ಲಿ ಈ ಅವಕಾಶ ಸಿಕ್ಕಿತು. ಚಂದ್ರಮೋಹನ್‍ ಅವರ ‘ಬಾಂಬೆ ಮಿಠಾಯಿ’ ಚಿತ್ರವನ್ನು ನಾನು ಕಾಲೇಜಿನಲ್ಲಿರುವಾಗ ನೋಡಿದ್ದೆ. ನಾನು ಎಷ್ಟೇ ರಿಯಾಲಿಟಿ ಶೋಗಳನ್ನು ಮಾಡಿದ್ದರೂ, ಸಿನಿಮಾ ಅಂತ ಬಂದಾಗ, ನಾನು ಹೊಸಬನೇ. ಎಲ್ಲರೂ ಹೊಸಬರೇ ಒಂದು ಭಯ ಇದ್ದೇ ಇರುತ್ತದೆ. ನಿರ್ಮಾಪಕರು, ನಿರ್ದೇಶಕರು ಎಲ್ಲರೂ ಚಿತ್ರರಂಗವನ್ನು ಬಲ್ಲವರು. ಇದು ನನಗೆ ಅನುಕೂಲವಾಯಿತು. ಎಲ್ಲರೂ ಅನುಭವಸ್ಥರಾಗಿರುವುದರಿಂದ, ನನ್ನಂತಹ ಹೊಸಬನಿಗೆ ಇದರಿಂದ ಒಳ್ಳೆಯದಾಗುತ್ತದೆ ಎಂದು ಈ ಚಿತ್ರ ಒಪ್ಪಿದೆ’ ಎಂದರು.

ಪಳಾರ್‍ ಎಂದರೆ ಕಿಲಾಡಿ ಎಂಬ ಅರ್ಥ ಬರುತ್ತದೆ ಎನ್ನುವ ನಟ, ‘ಪಳಾರ್‍ ಎಂದರೆ ಕಿಲಾಡಿ ನನ್ಮಗ ಎಂಬರ್ಥದಲ್ಲಿ ಮಾತಾಡುತ್ತಾರೆ. ನಾವು ಈ ಚಿತ್ರಕ್ಕೆ ಹಲವು ಶೀರ್ಷಿಕೆಗಳ ಬಗ್ಗೆ ಯೋಚನೆ ಮಾಡುತ್ತಿದ್ದೆವು. ಯಾರೋ ಒಬ್ಬರು ಫೋಟೋಫ್ರೇಮ್‍ ಕೊಟ್ಟಿದ್ದರು. ಅದರಲ್ಲಿ ಪಳಾರ್‍ ಗಿಲ್ಲಿ ಎಂದು ಬರೆಸಿದ್ದರು. ಅದು ನಮ್ಮ ಆಫೀಸ್‍ನಲ್ಲಿದೆ. ಒಮ್ಮೆ ಯೋಚನೆ ಮಾಡುವಾಗ, ಇದೇ ಶೀರ್ಷಿಕೆಯನ್ನು ಯಾಕೆ ಇಡಬಾರದು ಎಂದನಿಸಿತು. ಹಾಗಾಗಿ, ಇದೇ ಶೀರ್ಷಿಕೆಯನ್ನು ಇಟ್ಟಿದ್ದೇವೆ’ ಎಂದರು.

ಗಿಲ್ಲಿ ನಟ ನಿಜಜೀವನದಲ್ಲಿ ಹೇಗಿರುತ್ತಾರೋ, ಚಿತ್ರದಲ್ಲೂ ಅಷ್ಟೇ ನೈಜವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ‘ನಾನು ಹೀರೋ ಎಂಬ ಕಾರಣಕ್ಕೆ ವಿಪರೀತ ಮಾಸ್‍ ಅಥವಾ ಹೀರೋಯಿಸಂ ಈ ಚಿತ್ರದಲ್ಲಿ ಇರುವುದಿಲ್ಲ. ನಾನು ನಿಜಜೀವನದಲ್ಲಿ ಹೇಗಿರುತ್ತೀನೋ, ಚಿತ್ರದಲ್ಲೂ ಹಾಗೆಯೇ ಇರುತ್ತೇನೆ. ನಾನು ಏನು ಮಾಡಿದರೆ, ಜನ ಸ್ವೀಕರಿಸುತ್ತಾರೆ ಎಂದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಅದೇ ನಿಟ್ಟಿನಲ್ಲಿ ನನ್ನ ಪಾತ್ರ ಮತ್ತು ಕಥೆ ಇರುತ್ತದೆ’ ಎಂದರು.

ಇನ್ನು, ‘ಬಿಗ್‍ ಬಾಸ್‍’ನಲ್ಲಿ ಗಿಲ್ಲಿಯ ಸಂಗಾತಿಯಾಗಿ ಕಾಣಿಸಿಕೊಂಡಿದ್ದ ಕಾವ್ಯ ಶೈಲ ನಟಿಸುತ್ತಾರೆ ಎಂಬ ಸುದ್ದಿ ಇದೆ. ಅಷ್ಟೇ ಅಲ್ಲ, ಗಿಲ್ಲಿ ಮತ್ತು ಕಾವ್ಯ ಅವರ ಫೋಟೋ ಶೂಟ್‍ ಸಹ ಆಗಿದೆ ಎಂಬ ಮಾತಿದೆ. ಆದರೆ, ಚಿತ್ರತಂಡದವರು ಚಿತ್ರದ ನಾಯಕಿ ಯಾರು ಎಂಬ ವಿಷಯವನ್ನು ಬಿಟ್ಟುಕೊಡುವುದಿಲ್ಲ. ಈ ಕುರಿತು ಮಾತನಾಡುವ ಗಿಲ್ಲಿ, ‘ನಾಯಕಿಯ ಹುಡುಕಾಟ ನಡೆದಿದೆ. ಯಾರು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಸದ್ಯದಲ್ಲೇ ನಾಯಕಿಯ ಆಯ್ಕೆ ನಡೆಯಲಿದೆ’ ಎಂದರು.

ಈ ಚಿತ್ರಕ್ಕೆ ಗಿಲ್ಲಿ ಒಂದು ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತಿದೆ. ಈ ಕುರಿತು ಅವರನ್ನು ಕೇಳಿದರೆ, ‘ಟವಲ್‍ ಹಾಕಿಕೊಂಡು ಮಾತಾಡುತ್ತೇವೆ’ ಎಂದಷ್ಟೇ ಹೇಳಿ, ನಿಜಕ್ಕೂ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರಾ, ಇಲ್ಲವಾ ಎಂಬ ವಿಷಯವನ್ನು ಗಿಲ್ಲಿ ಬಹಿರಂಗಪಡಿಸಲಿಲ್ಲ.

‘ಪಳಾರ್‍’ ಚಿತ್ರದಲ್ಲಿ ಶೋಭರಾಜ್‍, ಪುಷ್ಪರಾಜ್‍, ಸುಧಾಕರ್ ಗೌಡ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೈ ಮೈಸೂರು, ಮಂಡ್ಯ ಭಾಗದಲ್ಲಿ ಚಿತ್ರೀಕರಣ ನಡೆಯಲಿದ್ದು, ವಾಸುಕಿ ವೈಭವ್‍ ಸಂಗೀತ ಸಂಯೋಜಿಸುತ್ತಿದ್ದಾರೆ.

‘ಅಪ್ಪ ಯಾವ ಗ್ಯಾಪ್‍ನಲ್ಲಿ ಅಷ್ಟು ಸಿನಿಮಾ ಮಾಡಿದರು ಗೊತ್ತಿಲ್ಲ?’

Discover more from KannadaScreens

Subscribe now to keep reading and get access to the full archive.

Continue reading