ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ‘ಲಕ್ಷ್ಮೀಪುತ್ರ’ ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಆ ಚಿತ್ರ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಚಿತ್ರದ ದ ಮೊದಲ ಹಾಡು ಸೋಮವಾರ ಮಧ್ಯಾಹ್ನ ಬಿಡುಗಡೆ ಆಗಿದೆ. ಎ.ಪಿ. ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿರುವ ‘ಇನ್ಮೇಲೆ …’ ಎಂಬ ಮೆಲೋಡಿ ಗೀತೆಯನ್ನು ಚಿತ್ರರಂಗದ ಎಂಟು ನಟಿಮಣಿಯರಿಂದ ಅನಾವರಣ ಮಾಡಿಸಲಾಯಿತು.
ಈ ಚಿತ್ರ ಶುರುವಾದ ಕಥೆಯನ್ನು ವಿವರಿಸಿದ ಅರ್ಜುನ್, ‘ಕರೋನಾ ಸಂದರ್ಭದಲ್ಲಿ ನಾನು, ಚಿಕ್ಕಣ್ಣ ಭೇಟಿಯಾದೆವು. ನನಗೆ ಈ ಕಥೆ ತಲೆಯಲ್ಲಿ ಓಡುತ್ತಲೇ ಇತ್ತು. ಯಾರಾದರೂ ಹೊಸ ಹುಡುಗ, ಮುಗ್ಧ ಮುಖವಿರುವ ಹುಡುಗ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವನಿಗೆ ಹೇಳಿದ್ದೆ. ಆ ಸಂದರ್ಭದಲ್ಲಿ ಇದು ‘ಲಕ್ಷ್ಮೀಪುತ್ರ’ ಆಗಬಹುದು ಎಂದು ಇನ್ನೂ ಕಲ್ಪನೆ ಇರಲಿಲ್ಲ. ಸುಮ್ಮನೆ ಇಬ್ಬರೂ ಒಂದೆಳೆ ಚರ್ಚೆ ಮಾಡಿದ್ದೆವು. ಇದೆಲ್ಲಾ ಆಗಿ ನಾಲ್ಕು ವರ್ಷಗಳ ನಂತರ ಚಿಕ್ಕಣ್ಣ ಕಾಲ್ ಮಾಡಿ, ‘ಕರೋನಾ ಸಮಯದಲ್ಲಿ ಒಂದು ಕಥೆ ಹೇಳಿದ್ದಿರಲ್ಲ, ಅದನ್ನು ನನಗೆ ಕೊಡಿ, ನಾನು ಮಾಡುತ್ತೀನಿ’ ಎಂದ. ಬೇರೆ ಯಾರೋ ನಿರ್ಮಾಪಕರು ಇದ್ದರು. ಸರಿ, ಕಥೆ ಕೊಟ್ಟೆ. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮಾಡೋಣ ಎಂದು ತೀರ್ಮಾನಿಸಿದೆವು. ಹೀಗೆ ಶುರುವಾದ ಚಿತ್ರವಿದು’ ಎಂದರು.
ಮೊದಲು ಈ ಚಿತ್ರಕ್ಕೆ ‘ಗೌರಿಪುತ್ರ’ ಎಂಬ ಹೆಸರು ಇಡುವ ಯೋಚನೆ ಇತ್ತೆಂದ ಅರ್ಜುನ್, ‘ಕಥೆಗೆ ಏನು ಶೀರ್ಷಿಕೆ ಇಟ್ಟರೆ ಚೆನ್ನ ಎಂದು ಎಷ್ಟು ಯೋಚನೆ ಮಾಡಿದರೂ, ಸೂಕ್ತ ಹೆಸರು ಸಿಕ್ಕಿರಲಿಲ್ಲ. ಮೊದಲು ಚಿತ್ರಕ್ಕೆ ‘ಗೌರಿಪುತ್ರ’ ಎಂಬ ಹೆಸರು ಇಡುವ ಯೋಚನೆ ಇತ್ತು. ನಮ್ಮ ತಾಯಿಯ ಹೆಸರು ಲಕ್ಷ್ಮೀ ಆದ್ದರಿಂದ, ಲಕ್ಷ್ಮೀಪುತ್ರ ಎಂದು ಯಾಕಿಡಬಾರದು ಎಂದು ಈ ಹೆಸರು ಇಟ್ಟೆವು. ಚಿತ್ರ ಮಾಡುವುದಕ್ಕೆ ನನ್ನ ಬಳಿ ಹಣ ಇರಲಿಲ್ಲ. ‘ಲಕ್ಷ್ಮೀಪುತ್ರ’ ಎಂಬ ಹೆಸರಿಟ್ಟಿದ್ದೇವೆ. ಆ ಲಕ್ಷ್ಮೀಯೇ ದಾರಿ ತೋರಿಸಬೇಕು ಎಂದು ಹೊರಟೆವು. ಚಿತ್ರ ಶುರುವಾಗಿ ಒಂದೂವರೆ ತಿಂಗಳಾದರೂ ಚಿತ್ರೀಕರಣ ಶುರುವಾಗಿರಲಿಲ್ಲ. ಮಂತ್ರಾಲಯಕ್ಕೆ ಹೋಗಿ ಬಂದೆ. ಎಲ್ಲಿಂದ ದುಡ್ಡು ಬಂತು, ಹೇಗೆ ಬಂತು ಗೊತ್ತಿಲ್ಲ. ರಾಯರ ಕೃಪೆಯಿಂದ ಶುರುವಾದ ಚಿತ್ರ, ಒಂದು ದಿನವೂ ಸಮಸ್ಯೆ ಆಗದಂತೆ ಮುಗಿದು, ಹಾಡು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ನಿರ್ಮಾಣದಲ್ಲಿ ಸಂತೋಷ್ ಲಾಡ್ ಬಹಳ ಸಹಕಾರ ಕೊಟ್ಟರು. ಇದುವರೆಗೂ 65 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ’ ಎಂದರು.

ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ತೆರೆಮೇಲೆ ಮಿಂಚಲು ರೆಡಿಯಾಗಿರುವ ಎರಡನೇ ಸಿನಿಮಾ ಲಕ್ಷ್ಮೀಪುತ್ರ. ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ AMB ಕಪಾಲಿಯಲ್ಲಿ ‘ಇನ್ಮೇಲೆ’ ಎಂಬ ಮೆಲೋಡಿ ಗೀತೆಯನ್ನು ಚಿತ್ರರಂಗದ ಎಂಟು ನಟಿಮಣಿಯರಿಂದ ಅನಾವರಣ ಮಾಡಿಸಲಾಯಿತು.
ಇನ್ನು, ಈ ಹಾಡಿನ ಕುರಿತು ಮಾತನಾಡಿದ ಅವರು, ‘ಯಾವಾಗಲೂ ಮಾತನಾಡುವ ಪದದಿಂದ ಹಾಡು ಶುರುವಾಗಬೇಕು, ಆ ಹಾಡು ಎಲ್ಲರ ಬಾಯಲ್ಲಿ ಇರಬೇಕು ಅನ್ನೋದು ನನ್ನ ತಲೆಯಲ್ಲಿ ಇತ್ತು. ಪ್ರೇಮಿಗಳು ಮಾತನಾಡುವಾಗ ಇನ್ನೇಲೆ, ಆಮೇಲೆ ಅಂತಾರೆ ಮಾತನಾಡ್ತುತ್ತಾರೆ. ಈ ಅಂಶವನ್ನು ಇಟ್ಟುಕೊಂಡು ಮಾಡಿದ ಹಾಡು ಇದು. ಇದೊಂದು ಅಪ್ಪಟ ಕನ್ನಡ ಹಾಡು. ಮಂಡ್ಯ ಸೊಗಡು ಇರುವ ಗೀತೆ. ಇದನ್ನು ‘ಸರಿಗಮಪ’ ರನ್ನರ್ ಅಪ್ ದರ್ಶನ್ ಮತ್ತು ಪೃಥ್ವಿ ಭಟ್ ಹಾಡಿದ್ದಾರೆ’ ಎಂದು ಮಾಹಿತಿ ಕೊಟ್ಟರು.ಸ
‘ಲಕ್ಷ್ಮೀಪುತ್ರ’ ಚಿತ್ರವನ್ನು ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಿಸಿದ್ದಾರೆ. ವಿಜಯ್ ಸ್ವಾಮಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಿಕ್ಕಣ್ಣ ಮತ್ತು ವಂದಿತಾ ಜೊತೆಗೆ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಮುಂತಾದವರು ನಟಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗಲಿದೆ.


