ತೆಲುಗಿಗೆ ರಚಿತಾ ಮತ್ತು ರುಕ್ಮಿಣಿ, ತಮಿಳಿಗೆ ಸಂಯುಕ್ತಾ ಮತ್ತು ಆಶಿಕಾ …

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಕನ್ನಡದ ಜನಪ್ರಿಯ ನಟಿಯರೆಲ್ಲಾ ಕಳೆದ ಕೆಲವು ವರ್ಷಗಳಿಂದಿತ್ತೀಚೆಗೆ ಒಬ್ಬೊಬ್ಬರೇ ಬೇರೆ ಭಾಷೆಗಳಿಗೆ ಹೋಗಿ ನಟಿಸುತ್ತಲೇ ಇದ್ದಾರೆ. ವಿಶೇಷವೆಂದರೆ, ಕಳೆದ ಒಂದು ವಾರದಲ್ಲಿ ಕನ್ನಡದ ಮೂವರು ಜನಪ್ರಿಯ ನಟಿಯರು ತೆಲುಗು-ತಮಿಳು ಭಾಷೆಗಳ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಚಿರಂಜೀವಿ ಅಳಿಯ ಕಲ್ಯಾಣ್‍ ದೇವ್‍ ಅಭಿನಯದ ‘ಸೂಪರ್‍ ಮಚ್ಚಿ’ ಎಂಬ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿದ್ದು ನೆನಪಿರಬಹುದು. ಇದೀಗ ರಚಿತಾ ರಾಮ್, ಚಿರಂಜೀವಿ ಅವರ ಮುಂಬರುವ ಚಿತ್ರ ‘ಮೆಗಾ 158’ನಲ್ಲಿ ನಟಿಸಲಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೊಲ್ಲಾಚಿಯಲ್ಲಿ ನಡೆಯುತ್ತಿದ್ದು, ರಚಿತಾ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರುಕ್ಮಿಣಿ ವಸಂತ್‍ ಈಗಾಗಲೇ ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಅವರು ತೆಲುಗಿನ ಜನಪ್ರಿಯ ನಟ ನಾಣಿ ನಿರ್ಮಾಣದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಬಂದಿದೆ. ನಾಣಿ ತಮ್ಮ ವಾಲ್‍ ಪೋಸ್ಟರ್‍ ಸಿನಿಮಾ ಬ್ಯಾನರ್‍ ಅಡಿ, ಮುರಳಿಕಾಂತ್‍ ದೇವಸೊತ್‍ ನಿರ್ದೇಶನದಲ್ಲಿ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ರುಕ್ಮಿಣಿ ವಸಂತ್‍ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ.

ಕನ್ನಡದಲ್ಲಿ ಯಶಸ್ಸಿಗಿಂತ ವಿವಾದಗಳನ್ನೇ ಹೆಚ್ಚಾಗಿ ನೋಡಿರುವ ‘ಕಿರಿಕ್‍ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗ್ಡೆ, ಇದಕ್ಕೂ ಮೊದಲು ‘ಕೋಮಾಲಿ’, ‘ಮನ್ಮಥ ಲೀಲೈ’, ‘ಪಪ್ಪಿ’ ಮುಂತಾದ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರು ವಿಕ್ರಮ್‍ ಅಭಿನಯದ 63ನೇ ಚಿತ್ರವಾದ ‘ಚಿಯಾನ್‍ 63’ಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈ ಚಿತ್ರವನ್ನು ಆನಂದ್‍ ಶಂಕರ್‍ ನಿರ್ದೇಶನ ಮಾಡಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಇನ್ನು, ನಟಿ ಆಶಿಕಾ ರಂಗನಾಥ್‍, ಈಗಾಗಲೇ ಚಿರಂಜೀವಿ ಅಭಿನಯದ ‘ವಿಶ್ವಂಬರ’ ಮತ್ತು ಕಾರ್ತಿ ಅಭಿನಯದ ‘ಸರ್ದಾರ್‍ 2’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಶ್ರೀಲೀಲಾ, ‘ಪರಾಶಕ್ತಿ’ ಇತ್ರದ ಮೂಲಕ ತಮಿಳಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಅನುರಾಗ್‍ ಬಸು ನಿರ್ದೇಶನದ ಹಿಂದಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಹಿಟ್’ ಮತ್ತು ‘ತೆಲಿಸು ಕಾದಾ’ ಎಂಬ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿ, ವೆಂಕಟೇಶ್‍ ಅಭಿನಯದ ‘ಆದರ್ಶ ಕುಟುಂಬಂ ಹೌಸ್‍ ನಂ 47’ ಎಂಬ ಇನ್ನೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಈ ಪೈಕಿ, ರಚಿತಾ ರಾಮ್‍ ಮತ್ತು ರುಕ್ಮಿಣಿ ವಸಂತ್‍ ಬಿಟ್ಟರೆ ಸದ್ಯ ಯಾರೂ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಎಲ್ಲರೂ ಪರಭಾಷೆಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

ಜೂನ್‍ 26ರಿಂದ ‘ಬಿಲ್ಲ ರಂಗ ಬಾಷಾ’ ಚಿತ್ರೀಕರಣ ಮತ್ತೆ ಶುರು

Discover more from KannadaScreens

Subscribe now to keep reading and get access to the full archive.

Continue reading