‘ನಮ್ಮ ತನವನ್ನು ಬಿಡದೆ, ನಮ್ಮ ಮಣ್ಣಿನ ಶಕ್ತಿಯನ್ನು ಮರೆಯದೆ, ನಮ್ಮ ಬೇರುಗಳನ್ನು ಮರೆಯದೆ, ರೆಕ್ಕೆ ಬಡಿದು ಮೇಲೆ ಹಾರುವ ಪ್ರಯತ್ನ ಮಾಡಬೇಕು’ ಎಂದು ನಟ-ನಿರ್ದೇಶಕ ರಮೇಶ್ ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಕಲಾವಿದರ ಸಂಘದಲ್ಲಿ ಆಯೋಜಿಸಿದ್ದ ‘ಚಂದನವನ – ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘‘ಕೆಜಿಎಫ್’ ಮತ್ತು ‘ಕಾಂತಾರ’ದಿಂದ ಆದ ಚಮತ್ಕಾರದಿಂದ ಎಲ್ಲರೂ ಒಂದೇ ಕಡೆ ಗಮನ ಹರಿಸುತ್ತಿದ್ದಾರೆ. ‘ಅಮೇರಿಕಾ ಅಮೇರಿಕಾ’ ಚಿತ್ರದಲ್ಲೊಂದು ಸಂಭಾಷಣೆ ಇದೆ. ಮನುಷ್ಯನಿಗೆ ಬೇಕಾಗಿರೋದು ಬೇರುಗಳು ಅಂತ ಒಂದು ಪಾತ್ರ ಹೇಳಿದರೆ, ಮನುಷ್ಯ ಹಾರಬೇಕು ಅವನಿಗ ರೆಕ್ಕೆಗಳು ಮುಖ್ಯ ಅಂತ ಇನ್ನೊಂದು ಪಾತ್ರ ಹೇಳುತ್ತದೆ. ರೆಕ್ಕೆ, ಬೇರು ಎರಡೂ ಇರೋಕೆ ಸಾಧ್ಯ ಇಲ್ವಾ? ಎಂಬ ಪ್ರಶ್ಣೆ ಸಹಜ. ಈಗ ಬೇಕಾಗಿರೋದು ಸಹ ಅದೇ. ನಮ್ಮ ತನವನ್ನ ಬಿಡದೆ, ನಮ್ಮ ಬೇರುಗಳನ್ನು ಮರೆಯದೆ, ರೆಕ್ಕೆ ಬಡಿದು ಮೇಲೆ ಹಾರುವ ಪ್ರಯತ್ನ ಮಾಡಬೇಕು’ ಎಂದು ಅವರು ಹೇಳಿದರು.
ಸಿನಿಮಾ ಇಲ್ಲದಿದ್ದರೆ ನಮ್ಮ ಬಾಲ್ಯ ಬರೀ ಒಂದು ಜಾಮೆಟ್ರಿ ಬಾಕ್ಸ್ ಮತ್ತು ರಬ್ಬರ್ ಬಾಲ್‍ಗೆ ಸೀಮಿತವಾಗುತ್ತಿತ್ತು ಎಂದ ರಮೇಶ್ ಅರವಿಂದ್, ‘ಅದನ್ನು ದಾಟಿ ನನಗೆ ನಾಡನ್ನು ತೋರಿಸಿದ್ದು ಸಿನಿಮಾ. ಅದನ್ನು ದಾಟಿ ನನಗೆ ಹಿಮಾಲಯ ತೋರಿಸಿದ್ದು ಸಿನಿಮಾ. ಒಂದು ಸುಂದರವಾ ದಹುಡುಗಿಯನ್ನು ಕ್ಲೋಸ್ ಅಪ್‍ನಲ್ಲಿ ತೋರಿಸಿದ್ದು ಸಿನಿಮಾ. ಈ ಎಲ್ಲಾ ಅನುಭವಗಳು ನಮಗೆ ಸಿಕ್ಕಿದ್ದಿಕ್ಕೆ ಕಾರಣವೇ ಸಿನಿಮಾ ಎಂಬ ಮಾಯೆ. ನಮ್ಮ ದಿನಚರಿಯಿಂದ ಹೊರಗೆ ಬರುವಂತೆ ಮಾಡಿದ್ದು ಸಿನಿಮಾ. ನಮ್ಮ ನಾಡು ಏಕೀಕರಣವಾಗಿದ್ದು 1950ರ ದಶಕದಲ್ಲಿ. ಅದಕ್ಕೂ ಮೊದಲೇ ಅಂದರೆ 1934ರಲ್ಲಿ ಸಿನಿಮಾ ಮೂಲಕ ಏಕೀಕರಣ ಶುರುವಾಯಿತು. ಕನ್ನಡಿಗರೆಲ್ಲರನ್ನೂ ಒಂದುಗೋಡಿಸಿದಂತಹ ಶಕ್ತಿ ಅಂದರೆ ಅದು ಸಿನಿಮಾ. ನಾವು ಇವತ್ತು ಸಿನಿಮಾ ಮಾಡುತ್ತಿರುವುದಕ್ಕೆ ಕಾರಣ ನಮ್ಮ ಹಿರಿಯರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್‍ರಂತಹ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ವಿತರಕರು ಎಲ್ಲರೂ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಚಿತ್ರರರಂಗ ಒಂದು ದೊಡ್ಡ ಕಟ್ಟಡವೆಂದರೆ, ಪ್ರತಿಯೊಬ್ಬರೂ ಇಟ್ಟಿಗೆಯಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಒಬ್ಬ ಪ್ರೇಕ್ಷಕನನ್ನು ಅವನ ಮನೆಯಿಂದ ಚಿತ್ರಮಂದಿರದವರೆಗೂ ಕರೆದುಕೊಂಡು ಹೋಗಿ ಬಿಡುವ ಆಟೋ ಡ್ರೈವರ್ ವರೆಗೂ ಈ ಚೈನ್ ಮಂದುವರೆಯುತ್ತದೆ. ಅವರೆಲ್ಲರಿಗೂ ನಮ್ಮ ನಮನ ಸಲ್ಲಬೇಕು’ ಎಂದರು.

ಕನ್ನಡ ಚಿತ್ರಗಳು ಪ್ರಪಂಚದ ಮೂಲೆಮೂಲೆಗೆ ತಲುಪುತ್ತದೆ ಎಂದರೆ ಅದಕ್ಕೆ OTT ಕಾರಣ ಎಂದು ಅಭಿಪ್ರಾಯಪಟ್ಟ ಅವರು, ‘ಮೈಸೂರಿನಲ್ಲಿರುವ ಒಬ್ಬ ಹುಡುಗ 50 ಲಕ್ಷದಲ್ಲಿ ಒಂದು ಚಿತ್ರ ಮಾಡಿ, ಅದು ಮೆಕ್ಸಿಕೋಗೆ ತಲಪುತ್ತದೆ ಅಂದರೆ ಅದು ಇಂದಿನ ಗೆಲುವು. ಅದರ ಜೊತೆಗೆ ಕೆಲವು ಸಮಸ್ಯೆಗಳು ಶುರುವಾಗಿವೆ. ಇವತ್ತಿನ ಯುವಕರಿಗೆ ಇರುವ exposure ದೊಡ್ಡದು. ಮಲಯಾಳಂ ಸಿನಿಮಾ ನೋಡಿ ಸೂಕ್ಷ್ಮತೆ ಕಲಿಯುತ್ತೇನೆ, ತಮಿಳು-ತೆಲುಗು ಸಿನಿಮಾ ನೋಡಿ ಮಾಸ್ ಅಂದರೇನು ಅರ್ಥ ಮಾಡಿಕೊಳ್ಳುತ್ತೀನಿ, ಬಾಲಿವುಡ್‍ನಿಂದ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯುತ್ತೇನೆ, ಹಾಲಿವುಡ್ ನೋಡಿ ಚಿತ್ರಕಥೆ ಬರೆಯುವ ತಂತ್ರ ಕಲಿಯುತ್ತೇನೆ, ಯೂರೋಪಿಯನ್ ಸಿನಿಮಾ ನೋಡಿ ಮೌನ ಅರ್ಥ ಮಾಡಿಕೊಳ್ಳುತ್ತೇನೆ, ಯೂಟ್ಯೂಬ್‍ನಲ್ಲಿ ಸಂಕಲನ ಕಲಿಯುತ್ತೇನೆ … ಎಂಬ ಕಾಲಘಟ್ಟ ಇದು. ಈ ಎಲ್ಲಾ exposure ಇರುವಂತ ಯುವಕರು ನಮ್ಮ ಹಿರಿಯರು ಕೊಟ್ಟಂತ ಶಕ್ತಿಯನ್ನ ಸರಿಯಾಗಿ ಉಪಯೋಗಿಸಿದರೆ ಅದ್ಭುತವಾದ ವಿಷಯಗಳು ನಡೆಯುತ್ತವೆ’ ಎಂದರು.
ಈಗ ಎಲ್ಲವನ್ನೂ AI ಮೂಲಕ ಮಾಡಬಹುದು ಎನ್ನುವ ರಮೇಶ್ ಅರವಿಂದ್, ‘ಒಂದು ಚಿತ್ರವನ್ನು ಒಬ್ಬನೇ ಮನುಷ್ಯ 450 ಡಾಲರ್ ಅಲ್ಲಿ ಒಂಬತ್ತು ತಿಂಗಳಲ್ಲಿ ಮಾಡಿ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಿದ್ದಾನೆ. 100 ಜನ, 100 ದಿನ ಮಾಡುವಂತ ಕೆಲಸವನ್ನ ಒಬ್ಬ ಮಾಡುತ್ತಾನೆ ಎಂದರೆ, ಅದಕ್ಕೆ ಕಾರಣ AI. ಸಿಕ್ಕಾಪಟ್ಟೆ ವೇಗವಾಗಿ ಒಂದು ದೊಡ್ಡ ಲಾರಿ, AI ಹೆಸರಲ್ಲಿ ಬರುತ್ತಿದೆ. ಅದನ್ನು ತಡೆಯೋಕ್ಕಾಗಲ್ಲ. ಎದುರು ನಿಂತ್ಕೊಳಿ ಅಂತ ಹೇಳೋಕೂ ಆಗುವುದಿಲ್ಲ. ಜಾಣ್ಮೆಯಿಂದ ಡ್ರೈವರ್ ಸೀಟ್‍ನಲ್ಲಿ ಕೂರಬೇಕು. ಆ ಲಾರಿಯನ್ನು ನಿಮ್ಮ ಕಂಟ್ರೋಲ್‍ಗೆ ತೆಗೆದುಕೊಂಡು ಓಡಿಸಬೇಕು. ಹಾಗೆ ಮಾಡಿದರೆ, ಎಲ್ಲಿ ತಲುಪಬೇಕೋ ಅಲ್ಲಿ ಇನ್ನಷ್ಟು ವೇಗವಾಗಿ ತಲುಪಬಹುದು. ಅದೊಂದೇ ಮಾರ್ಗ ಉಳಿದಿರೋದು. ಎಷ್ಟು AIನ ಬೇಗ ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವೋ, ನಮ್ಮ ನಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ನಾವು ಕ್ಷೇಮ’ ಎಂದು ಅಭಿಪ್ರಾಯಪಟ್ಟರು.
ಚಾರ್ಲ್ಸ್ ಡಿಕನ್ಸ್ ಕಾದಂಬರಿಯ ಒಂದು ಸಾಲನ್ನು ಉದಾಹರಿಸಿ ಮಾತನಾಡುತ್ತಾ, ‘‘ಎ ಟೇಲ್ ಆಫ್ ಟೂ ಸಿಟೀಸ್’ ಎಂಬ ಕಾದಂಬರಿಯ ಆರಂಭದಲ್ಲೇ, ‘This is the best of times, this is the worst of times’ ಎಂದು ಬರೆಯುತ್ತಾರೆ. ಇದಕ್ಕಿಂತ ಅತ್ಯುತ್ತಮವಾದ ಕಾಲ ಇನ್ನೊಂದಿಲ್ಲ, ಇದಕ್ಕಿಂತ ಅತಿ ಕೆಟ್ಟವಾದ ಕಾಲವೂ ಇನ್ನೊಂದಿಲ್ಲ. ಇದೇ ಬೆಳಕಿನ ಋತು, ಇದೇ ಕತ್ತಲೆಯ ಋತು. ಇಲ್ಲಿ ನನ್ನ ಮುಂದೆ ಎಲ್ಲವೂ ಇದೆ, ಇಲ್ಲಿ ನನ್ನ ಮುಂದೆ ಏನೂ ಇಲ್ಲ ಅನ್ನೋದೇ ಪ್ರತಿಯೊಂದು ಕಾಲದ ಸಾರಾಂಶ. ನಮ್ಮ ಕಾಲದಲ್ಲಿ ಮಾತ್ರ ಅಲ್ಲ, ಆ ಕಾಲದಲ್ಲಿ ಅದನ್ನ ಹೇಳುತ್ತಿದ್ದರು. ಮುಂದಿನ ಕಾಲದಲ್ಲೂ ಅದನ್ನೇ ಹೇಳುತ್ತಾರೆ. ಅದೇ ಸತ್ಯ. ಹಾಗಾಗಿ, ನಾವು ಅದನ್ನು ಒಪ್ಪಿ, ಅಪ್ಪಿಕೊಳ್ಳಬೇಕು’ ಎಂದರು.


