ಕನ್ನಡ ಚಿತ್ರರಂಗ ಈ ವರ್ಷ ಸೆಂಚ್ಯುರಿ ಬಾರಿಸಿದೆ. ಮೇ 22ರಂದು ಒಟ್ಟು ಆರು ಚಿತ್ರಗಳು ಬಿಡುಗಡೆಯಾಗಿದ್ದು, ಈ ಶುಕ್ರವಾರದ ಬಿಡುಗಡೆಯನ್ನೂ ಸೇರಿಸಿದರೆ, 2026ರಲ್ಲಿ, ಒಟ್ಟು 21 ವಾರಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ 100 ದಾಟಿದೆ.
ಮೇ 22ರ ಶುಕ್ರವಾರದಂದು ‘ಉಗ್ರ ಮರ್ಧಿನಿ’, ‘ಮಕ್ಕಳ ಸೈನ್ಯ’, ‘ಅಸುರನ ಕೈಯಲ್ಲಿ ಪಾರಿಜಾತ’, ‘ಕುಚಕು’, ‘ಲಾಕ್‍ಡೌನ್’ ಮತ್ತು ‘ಮಂಗ ಮಾಯ’ ಎಂಬ ಆರು ಚಿತ್ರಗಳು. ಈ ಪೈಕಿ ಆಯೇಷಾ ಅಭಿನಯದ ‘ಉಗ್ರ ಮರ್ಧಿನಿ’ ಚಿತ್ರವನ್ನು ಹೊರತುಪಡಿಸಿದರೆ, ಐದಕ್ಕೆ ಐದು ಹೊಸಬರ ಚಿತ್ರಗಳಾಗಿದ್ದವು. ಇವೆಲ್ಲದರ ಜೊತೆಗೆ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಸೆಪ್ಟೆಂಬರ್ 21’ ಚಿತ್ರವು ಬಿಡುಗಡೆಯಾಗುತ್ತದೆ ಎಂದು ಘೋಷಣೆಯಾಗಿತ್ತು. ಆದರೆ, ಚಿತ್ರ ಸೆನ್ಸಾರ್ ಆಗದ ಕಾರಣ ಒಂದು ವಾರ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಬಿಡುಗಡೆಯಾಗಿದ್ದ ಚಿತ್ರಗಳನ್ನು ಸೇರಿಸಿದರೆ 95 ಚಿತ್ರಗಳು ಈ ವರ್ಷ ಬಿಡುಗಡೆಯಾಗಿದ್ದವು. ಈ ವಾರದ ಆರು ಚಿತ್ರಗಳನ್ನು ಸೇರಿಸಿದರೆ ಸಂಖ್ಯೆ 101ಕ್ಕೆ ಏರಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದ ನೂರನೇ ಚಿತ್ರವು ಮೇ 16ರಂದು ಬಿಡುಗಡೆಯಾಗಿತ್ತು. ಈ ವರ್ಷ ಒಂದು ವಾರ ತಡವಾಗಿ 100ರ ಸಂಖ್ಯೆಯನ್ನು ದಾಟಿದೆ ಎಂಬ ವಿಷಯ ಬಿಟ್ಟರೆ, ಮಿಕ್ಕಂತೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಸಾಕಷ್ಟು ಸ್ವಾಮ್ಯತೆಗಳಿವೆ.

ಕಳೆದ ವರ್ಷದಂತೆ ಈ ವರ್ಷವೂ ಬಿಡುಗಡೆಯಾದ ಚಿತ್ರಗಳ ಪೈಕಿ ಶೇ. 90ರಷ್ಟು ಹೊಸಬರ ಚಿತ್ರಗಳಾಗಿವೆ. ‘ದುನಿಯಾ’ ವಿಜಯ್, ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ಸತೀಶ್ ನೀನಾಸಂ, ಉಪೇಂದ್ರ, ವಿಜಯ್ ರಾಘವೇಂದ್ರ, ಅಜೇಯ್ ರಾವ್, ಧನ್ವೀರ್, ಆದಿತ್ಯ, ಪೃಥ್ವಿ ಅಂಬಾರ್ ಅಭಿನಯದ ಚಿತ್ರಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ಹೊಸಬರ ಚಿತ್ರಗಳೇ. ಇನ್ನು, ಯಶಸ್ಸಿನ ದೃಷ್ಟಿಯಲ್ಲೂ ಹೆಚ್ಚು ಬದಲಾವಣೆಗಳಿಲ್ಲ. ‘ಲವ್ ಮಾಕ್ಟೇಲ್ 3’, ‘ರಕ್ಕಸಪುರದೊಳ್’, ‘ಅಮೃತಾ ಅಂಜನ್’ನಂತಹ ಬೆರಳಣಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ಲಾಭವಿರಲಿ, ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದರಲ್ಲೂ ಯಶಸ್ವಿಯಾಗಿಲ್ಲ.

‘ಕೆಡಿ – ದಿ ಡೆವಿಲ್’ ಚಿತ್ರವೊಂದರಿಂದಲೇ 60 ಕೋಟಿಯಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದೊಂದೇ ಚಿತ್ರದಲ್ಲಿ 60 ಕೋಟಿ ಹೋದರೆ, ಮಿಕ್ಕ 90 ಪ್ಲಸ್ ಚಿತ್ರಗಳಿಂದ ಎಷ್ಟು ನಷ್ಟವಾಗಿರಬಹುದು ಎಂದು ಯೋಚಿಸಬೇಕು. ಇದರ ಮಧ್ಯೆ, ‘ಮಗ್ಗಿ ಪುಸ್ತಕ’ ಎಂಬ ಚಿತ್ರ 100 ದಿನ ಪೂರೈಸಿ, ಭೂಮಿಕಾ ಚಿತ್ರಮಂದಿರದಲ್ಲಿ 100 ದಿನಗಳ ಸಂಭ್ರಮಾಚರಣೆಯನ್ನು ಸಹ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. ಈ ಚಿತ್ರಕ್ಕೆ ನಿರ್ಮಾಪಕರು ಹಾಕಿದ ಬಂಡವಾಳವೆಷ್ಟು? ಮರಳಿ ಬಂದಿದ್ದೆಷ್ಟು? ಅವರಿಗೆ ಏನಾದರೂ ಲಾಭವಾಗಿದೆಯಾ? ಎಂಬುದು ಇನ್ನಷ್ಟೇ ಗೊತ್ತಾಗಬೇಕಷ್ಟೇ.

ಇದುವರೆಗೂ ಆಗಿದ್ದೇನೋ ಆಯಿತು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ, ಅಷ್ಟೇನೂ ಆಶಾದಾಯಕವೇನಿಲ್ಲ. ಸದ್ಯಕ್ಕೆ ಯಾವುದೇ ಸ್ಟಾರ್ ನಟರ ಅಥವಾ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿಲ್ಲ. ಆಗಸ್ಟ್ ನಂತರ ಶಿವರಾಜಕುಮಾರ್ ಅಭಿನಯದ ‘ಬೇಲ್’, ಗಣೇಶ್ ಅಭಿನಯದ ‘ಬೃಂದಾ ವಿಹಾರಿ’, ಧನಂಜಯ ಅಭಿನಯದ ‘ಮದರ್ ಪ್ರಾಮಿಸ್’ ಸೇರಿದಂತೆ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ಹೀರೋ ಇಲ್ಲ; ಪಾತ್ರಗಳಿಂದ ಹುಟ್ಟಿದ್ದೇ ‘ಕಂಟ್ರಿ ಮೇಡ್ – ಭಾಗ 2’


