ಸಬ್ಸಿಡಿಯನ್ನು 25 ಲಕ್ಷಕ್ಕೆ ಏರಿಸಿ: ಡಾ. ಜಯಮಾಲಾ ಮನವಿ

ಚಂದನವನ, ಸಿನಿ ಸುದ್ದಿ

ಕರ್ನಾಟಕ ಸರ್ಕಾರವು ಗುಣಾತ್ಮಕ ಚಿತ್ರಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು 10 ಲಕ್ಷದಿಂದ 25 ಲಕ್ಷಕ್ಕೆ ಏರಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕೆ ಡಾ. ಜಯಮಾಲಾ ಮನವಿ ಸಲ್ಲಿಸದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಭಾನುವಾರ ಕಲಾವಿದರ ಸಂಘದಲ್ಲಿ ‘ಚಂದನವನ – ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ನಟ-ನಿರ್ದೇಶಕ ರಮೇಶ್‍ ಅರವಿಂದ್‍ ಈ ಘೋಷ್ಠಿಯನ್ನು ಉದ್ಘಾಟಿಸಿದರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಏಳು ಅಂಶಗಳ ಮನವಿ ಪತ್ರವನ್ನು ಪ್ರಭಾಕರ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ. ಜಯಮಾಲಾ ಅವರ ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳು ಇದ್ದರು.

ವಾಣಿಜ್ಯ ಮಂಡಳಿ ಸರ್ಕಾರಕ್ಕೆ ಸಲ್ಲಿಸಿದ ಏಳು ಅಂಶಗಳ ಮನವಿ ಪತ್ರ

1) 25 ವರ್ಷಗಳಿಂದ ಸರ್ಕಾರವು 10 ಲಕ್ಷ ಸಬ್ಸಿಡಿಯನ್ನು ಪ್ರತೀ ವರ್ಷ ನೀಡುತ್ತಾ ಬಂದಿದೆ. ಅದನ್ನು 25 ಲಕ್ಷಕ್ಕೆ ಏರಿಸಬೇಕು.

2) ಕನ್ನಡ ಚಿತ್ರರಂಗದಲ್ಲಿ ಪ್ರತೀ ವರ್ಷ 250 ಚಿತ್ರಗಳು ಬಿಡುಗಡೆಯಾಗುತ್ತಿವೆ. ಸ್ಯಾಟಿಲೈಟ್‍ ಮತ್ತು ಡಿಜಿಟಲ್‍ ಹಕ್ಕುಗಳು ಮಾರಾಟವಾಗುತ್ತಿಲ್ಲ. ನಿರ್ಮಾಪಕರು ಭಯದಲ್ಲಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದಂತೆ ಸ್ವಂತ ಓಟಿಟಿ ಅನುಷ್ಠಾನಕ್ಕೆ ತರಬೇಕು.

3) ಸಿನಿಮಾ ಆರ್ಕೈವ್ ಇಲ್ಲದೆ ಕನ್ನಡದ ಅಮೂಲ್ಯ ಸಿನಿಮಾಗಳು ನಾಶವಾಗಿವೆ. ಮುಖ್ಯಮಂತ್ರಿಗಳು ಕನ್ನಡದ ಮಹತ್ವದ ಚಿತ್ರಗಳ ಸಂಗ್ರಹಕ್ಕಾಗಿ ಮೂರು ಕೋಟಿ ಕೊಡುವುದಾಗಿ ಹೇಳಿದ್ದಾರೆ. ಚಿತ್ರಗಳ ಆರ್ಕೈವಿಂಗ್‍ ಮಾಡುವ ಮೂಲಕ ಹಳೆಯ ಸಿನಿಮಾಗಳನ್ನು ಉಳಿಸುವ ಕೆಲಸ ಮಾಡಬೇಕು.

4) ಕಳೆದ 15 ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಈ ನಿಟ್ಟಿನಲ್ಲಿ ಸಮಗ್ರ ಚಲನಚಿತ್ರ ನೀತಿ ಬೇಕು. ನೀತಿ ಜಾರಿಯಾಗುವುದರ ಜೊತೆಗೆ, ಐದು ವರ್ಷಗಳಿಗೆ ಒಮ್ಮೆ ಪರಿಷ್ಕರಣೆ ಆಗಬೇಕು.

5) ಚಾಲ್ತಿಯಲ್ಲಿರುವ ಸಿನಿಮ್ಯಾಟೋಗ್ರಾಫಿ ಕಾಯ್ದೆಗೆ ತಿದ್ದುಪಡಿ ತರಬೇಕು. ಚಿತ್ರಮಂದಿರಗಳ ಸಂಖ್ಯೆ 400ಕ್ಕೆ ಕುಸಿದಿದೆ. ಜನಸಂಖ್ಯೆಗೆ ಅನುಗುಣವಾಗಿ ಚಿತ್ರಮಂದಿರಗಳು ಬೇಕು. ಇದರಿಂದ ಸರ್ಕಾರಕ್ಕೂ ಲಾಭವಿದೆ. ಬದಲಾಗುತ್ತಿರುವ ವೀಕ್ಷಣೆಗೆ ತಕ್ಕಂತೆ ಸಿನಿಮಾ ಮಂದಿರಗಳನ್ನು ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡಬೇಕು.

6) ಏಕಪರದೆಯ ಚಿತ್ರಮಂದಿರಗಳ ನವೀಕರಣಕ್ಕೆ ಸಹಾಯ ಬೇಕು.

7) 2022ರಿಂದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಸಮಿತಿ ರಚನೆಯಾಗಿಲ್ಲ. ಅದಕ್ಕೂ ಮೊದಲಿನ ಎರಡು ವರ್ಷಗಳ ಪ್ರಶಸ್ತಿ ಪ್ರದಾನವಾಗಿಲ್ಲ. ಆದಷ್ಟು ಬೇಗ ಪ್ರಶಸ್ತಿ ಪ್ರದಾನ ಮಾಡುವುದರ ಜೊತೆಗೆ ಆಯಾಕಾಲಕ್ಕೆ ತಕ್ಕಂತೆ ಪ್ರಶಸ್ತಿಗಳನ್ನು ಕೊಡುವಂತಾಗಬೇಕು.

‘ಬೇರುಗಳನ್ನು ಮರೆಯದೆ, ಮೇಲೆ ಹಾರುವ ಪ್ರಯತ್ನ ಮಾಡಬೇಕು …’

Discover more from KannadaScreens

Subscribe now to keep reading and get access to the full archive.

Continue reading