ಕನ್ನಡ ಚಿತ್ರರಂಗ ಮುಳುಗುತ್ತಿದೆ, ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ, ಕನ್ನಡ ಚಿತ್ರರಂಗದಲ್ಲಿ ಸೋಲು-ನಷ್ಟ ಹೆಚ್ಚಾಗುತ್ತಿದೆ … ಎಂಬ ಮಾತುಗಳು ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಅದಕ್ಕೆ ಸರಿಯಾಗಿ ಕನ್ನಡ ಚಿತ್ರರಂಗದ ಮಾತೃಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನೂ ಮಾಡುತ್ತಿಲ್ಲ, ಸಮಸ್ಯೆಗಳಿಗೆ ಯಾವುದೇ ಪರಿಹಾರವನ್ನು ಕಂಡುಹಿಡಿಯುತ್ತಿಲ್ಲ ಎಂಬ ಆರೋಪಗಳಿವೆ.
ಈ ಆರೋಪಗಳಿಗೆ ಉತ್ತರಿಸುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮೇ 24ರ ಭಾನುವಾರ, ‘ಚಂದನವನ – ಅಂದು ಇಂದು ಮುಂದು’ ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಿದೆ.
ಈ ವಿಚಾರಗೋಷ್ಠಿಯು ಭಾನುವಾರ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ನಟ-ನಿರ್ದೇಶಕ ರಮೇಶ್ ಅರವಿಂದ್ ಈ ಘೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರೆ, ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲಾ ಈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಸೃಷ್ಟಿ ಸ್ವರೂಪದ ರೂಪಕಗಳು, ಚಲನಚಿತ್ರಮಂದಿರಗಳ ಸ್ಥಿತ್ಯಂತರ – ವರ್ತಮಾನದ ಸವಾಲುಗಳು ಮತ್ತು ಚಲನಚಿತ್ರ ಹಾಗೂ ಎಐ ತಂತ್ರಜ್ಞಾನ ಸಾಧಕ-ಬಾದಕಗಳು ಎಂಬ ವಿಚಾರಗೋಷ್ಠಿಗಳು ನಡೆಯಲಿವೆ. ಈ ಗೋಷ್ಠಿಗಳ ಅಧ್ಯಕ್ಷತೆಯನ್ನು ಹಿರಿಯ ನಿರ್ದೇಶಕ ಭಾರ್ಗವ ವಹಿಸಲಿದ್ದಾರೆ. ಮೊದಲ ಘೋಷ್ಠಿಯಲ್ಲಿ ಪಿ. ಶೇಷಾದ್ರಿ ವಿಚಾರ ಮಂಡಿಸಿದರೆ, ಎರಡನೆಯ ಮತ್ತು ಮೂರನೆಯ ಘೋಷ್ಠಿಯಲ್ಲಿ ಕರ್ನಾಟಕ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮತ್ತು ಅಂತಾರಾಷ್ಟ್ರೀಯ ಶಿಕ್ಷಣ ತಜ್ಞರು ಹಾಗೂ ವೈದ್ಯಕೀಯ ನೀತಿ ಶಾಸ್ತ್ರಜ್ಞರಾದ ಎ.ಎಚ್ ಸಾಗರ್ ವಿಷಯ ಮಂಡಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಅಂಗಸಂಸ್ಥೆಗಳು ಭಾಗವಹಿಸುವ ನಿರೀಕ್ಷೆ ಇದೆ.


