ಕಳೆದ ವರ್ಷ ಬಿಡುಗಡೆಯಾದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದ ನಂತರ ದಿಗಂತ್ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ, ಹೊಸ ಚಿತ್ರವೂ ಶುರುವಾಗಿರಲಿಲ್ಲ. ದಿಗಂತ್ ಯಾಕೆ ಹೊಸ ಸಿನಿಮಾಗಳು ಒಪ್ಪಿಕೊಳ್ಳುತ್ತಿಲ್ಲ, ಅವರಿಗೆ ಅವಕಾಶಗಳು ಸಿಗುತ್ತಲ್ಲವೇ? ಎಂಬ ಪ್ರಶ್ನೆ ಬರುವುದಕ್ಕಿಂತ ಮೊದಲು ಅವರು ‘ರುದ್ರ ಕಾಲ’ ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಆ ಚಿತ್ರದ ಮುಹೂರ್ತ ಬುಧವಾರ ನಡೆದಿದೆ. ಚಿತ್ರದ ಮುಹೂರ್ತದ ನಂತರ ದಿಗಂತ್, ಯಾಕೆ ಅಷ್ಟೇನೂ ಸಕ್ರಿಯವಾಗಿಲ್ಲ ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ ಎನ್ನುವ ದಿಗಂತ್, ‘ಏನಾಯ್ತು ಅಂದರೆ, ನಿರ್ಮಾಪಕರು ಬಂದು, ಸದ್ಯಕ್ಕೆ ಯಾಕೋ ಪರಿಸ್ಥಿತಿ ಸರಿ ಇಲ್ಲ, ನೋಡಿಕೊಂಡು ಮುಂದುವರೆಯೋಣ ಎಂದರು. ಆಗ ನಿಜವಾಗಲೂ ನಾವು ಬೇರೆ ಏನಾದರೂ ನೋಡಿಕೊಳ್ಳಬೇಕಾ? ಹೊಸದೇನನ್ನಾದರೂ ಶುರು ಮಾಡಬೇಕಾ? ಎಂಬ ಯೋಚನೆ ಮೊದಲ ಬಾರಿಗೆ ತಲೆಗೆ ಬಂತು. ಇದು ಬರೀ ನನ್ನೊಬ್ಬನ ಸಮಸ್ಯೆ ಅಲ್ಲ. ಕ್ರಿಕೆಟ್ ಆಡುವಾಗ ನನ್ನ ಬಹಳಷ್ಟು ಜನ ಸ್ನೇಹಿತರ ಜೊತೆಗೆ ಮಾತಾಡುವಾಗ, ಎಲ್ಲರದ್ದೂ ಹೆಚ್ಚೂಕಡಿಮೆ ಇದೇ ಪರಿಸ್ಥಿತಿ. ತೀರ್ಥಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳೋದಾ ಎಂಬ ಯೋಚನೆಯೂ ಬಂತು. ಅಷ್ಟರಲ್ಲಿ ಈ ಸಿನಿಮಾ ಅವಕಾಶ ಸಿಕ್ಕಿತು. ಚಿತ್ರತಂಡದವರು ತಕ್ಷಣವೇ ಚಿತ್ರವನ್ನೂ ಶುರು ಮಾಡಿದ್ದಾರೆ’ ಎನ್ನುತ್ತಾರೆ.
ಈ ತರಹದ ಪರಿಸ್ಥಿತಿ ತನಗೆ ಹೊಸದು ಎಂಬುದು ಅವರ ಅಭಿಪ್ರಾಯ. ‘ಕಳೆದ ವರ್ಷ, ಅದರ ಹಿಂದಿನ ವರ್ಷದವರೆಗೂ ನಾನು ತುಂಬಾ ಬ್ಯುಸಿ ಇದ್ದೆ. ವರ್ಷಕ್ಕೆ ಮೂರ್ನಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದವು. ಚಿತ್ರ ಗೆದ್ದಿತೋ, ಸೋತಿತೋ ಬೇರೆ ಮಾತು. ನಾನಂತೂ ಸಂಪೂರ್ಣವಾಗಿ ಬ್ಯುಸಿ ಇದೆ. ಈಗಲೇ ಇಂಥದ್ದೊಂದು ಪರಿಸ್ಥಿತಿ ಎದುರಾಗಿರೋದು. ಪರಿಸ್ಥಿತಿ ಹೇಗಿದೆ ಎಂದರೆ, ನಂದಿ ಬೆಟ್ಟದ ಬಳಿ ಗೇಟೆಡ್ ಕಮ್ಯುನಿಟಿಯಲ್ಲಿ ನನ್ನದೊಂದು ಮನೆ ಇದೆ. ಆ ಮನೆಯನ್ನು ಇದೀಗ ಬಾಡಿಗೆಗೆ ಕೊಟ್ಟಿದ್ದೇವೆ. ಅದರಿಂದ ಬಾಡಿಗೆ ಬರುತ್ತಿದೆ. ಅದರ ಮೇಲೆ ನಾವು ಡಿಪೆಂಡ್ ಆಗಿದ್ದೀವಿ ಎಂದರೆ ಪರಿಸ್ಥಿತಿ ಏನಾಗಿದೆ ಯೋಚಿಸಿ’ ಎಂದು ನಗುತ್ತಲೇ ಹೇಳುತ್ತಾರೆ.
ಈ ಮಧ್ಯೆ, ಒಮ್ಮೆ ಮುಂಬೈಗೆ ಹೋಗಿ ಅಲ್ಲಿ ವೆಬ್ ಸೀರೀಸ್ ಮಾಡೋಣ ಅಂತಲೂ ಅವರಿಗೆ ಯೋಚನೆ ಬಂತಂತೆ. ‘ನನಗೆ ಮುಂಬೈಗೆ ಹೋಗೋಕೆ ಇಷ್ಟವಿಲ್ಲ. ಅನಿವಾರ್ಯ ಪರಿಸ್ಥಿತಿ ಎದುರಾದರೆ ನೋಡೋಣ. ಆದರೆ, ವೆಬ್ ಸೀರೀಸ್‍ಗೆ ನಾನು ಓಪನ್ ಆಗಿದ್ದೀನಿ. ಇತ್ತಿಚೆಗೆ ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದೆ. ಆ ಸಂದರ್ಭದಲ್ಲಿ ಅಲ್ಲಿ ಏನಾದರೂ ವೆಬ್ ಸೀರೀಸ್‍ನಲ್ಲಿ ಅವಕಾಶಗಳಿದ್ದರೆ ಹೇಳಿ ಅಂತ ಹೇಳಿ ಬಂದಿದ್ದೇನೆ’ ಎಂದು ಹೇಳಿದರು.
ಕನ್ನಡದಲ್ಲಿ ಈ ಪರಿಸ್ಥಿತಿ ಇದ್ದರೆ, ತೆಲುಗಿನಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆಯಂತೆ. ‘ನಾನು ತೆಲುಗು ಸಿನಿಮಾಗೆ ಹೈದರಾಬಾದ್‍ಗೆ ಹೋಗಿದ್ದಾಗ, ಅಲ್ಲಿ ಪರಿಸ್ಥಿತಿ ನೋಡಿದೆ. ಅಲ್ಲಿ ಓಟಿಟಿಯಿಂದ ಅಥವಾ ಬೇರೆ ಯಾವುದೇ ಕಾರಣದಿಂದ ಸಿನಿಮಾಗೆ ಸಮಸ್ಯೆ ಆಗಿಲ್ಲ. ಅಲ್ಲಿ ಈಗಲೂ ಸತತವಾಗಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ಚಿತ್ರೀಕರಣ ನಡೆಯುತ್ತಲೇ ಇದೆ. ಅದೆಷ್ಟು ಸಿನಿಮಾಗಳ ಶೂಟಿಂಗ್ ಆಗುತ್ತಿದ್ದುದು ನೋಡಿ ಶಾಕ್ ಆಯ್ತು’ ಎಂದರು.
ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಅಭಿಪ್ರಾಯ ಪಡುತ್ತಾರೆ ದಿಗಂತ್. ‘ನನ್ನ ಪ್ರಕಾರ, ನಾವು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿಲ್ಲ. ನಾವು ಒಳ್ಳೆಯ ಸಿನಿಮಾ ಮಾಡಿದಾಗ, ಖಂಡಿತಾ ಜನ ನೋಡುತ್ತಾರೆ. ‘ಸು ಫ್ರಮ್ ಸೋ’ ಚಿತ್ರ ಯಶಸ್ವಿಯಾಯ್ತು. ಆಮೇಲೆ ‘ಲವ್ ಮಾಕ್ಟೇಲ್ 3’ ಚಿತ್ರ ಸಹ ಚೆನ್ನಾಗಿ ಓಡಿತು. ಬೇರೆ ಚಿತ್ರಗಳು ಓಡುತ್ತಿಲ್ಲ ಎಂದರೆ, ನಾವು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿಲ್ಲ ಎಂದರ್ಥ. ಇದರ ಜೊತೆಗೆ ನಮಗೆ OTT platformಗಳ ಬೆಂಬಲವಿಲ್ಲ. ತೆಲುಗಿನಲ್ಲಿ ಚಿತ್ರದ ನಾಯಕ-ನಾಯಕಿ ಆಯ್ಕೆ ಆಗುತ್ತಿದ್ದಂತೆಯೇ ಒಂದು ವ್ಯಾಪಾರ ಶುರುವಾಗುತ್ತದೆ. ಆದರೆ, ಕನ್ನಡದಲ್ಲಿ ಅಂಥದ್ದೊಂದು ಸಹಕಾರ ಸಿಗುತ್ತಿಲ್ಲ. ಇಲ್ಲಿ ಯಾರೂ ಹಣ ಹೂಡಿಕೆ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ. ಈಗ ಟಿವಿ ಹಕ್ಕುಗಳನ್ನು ಯಾರೂ ಕೊಳ್ಳುತ್ತಿಲ್ಲ’ ಎಂದರು.
ಕೆಲವರು ಪೋಸ್ಟರ್ ನೋಡಿಯೇ ಚಿತ್ರಮಂದಿರಕ್ಕೆ ಹೋಗುತ್ತಿಲ್ಲ ಎನ್ನುವ ದಿಗಂತ್, ‘ಈಗ ಏನಿದ್ದರೂ ಚಿತ್ರಮಂದಿರಗಳನ್ನು ನಂಬಿಕೊಂಡು ಚಿತ್ರ ಮಾಡಬೇಕು. ಕೆಲವರು ಪೋಸ್ಟರ್ ನೋಡಿಯೇ ಚಿತ್ರಮಂದಿರಕ್ಕೆ ಹೋಗುತ್ತಿಲ್ಲ. ಇನ್ನೂ ಕೆಲವರು ಹೇಗೂ OTTಯಲ್ಲಿ ಬರುತ್ತದಲ್ಲ, ಬಂದಾಗ ನೋಡಿದರಾಯ್ತು ಎಂಧು ಸುಮ್ಮನಿರುತ್ತಾರೆ. ಅವರಿಗೆ ಸಿನಿಮಾ ನೋಡಬಾರದು ಎಂಬ ಉದ್ದೇಶವೇನಿಲ್ಲ. ಆದರೆ, ಹೇಗೂ OTTಯಲ್ಲಿ ಬರುತ್ತಲ್ಲ, ಅಲ್ಲಿ ನೋಡಿಕೊಳ್ಳೋಣ ಅಂತ ಸುಮ್ಮನಿರುತ್ತಾರೆ. ಜೊತೆಗೆ ನಿಮಗೆ ಚಿತ್ರಮಂದಿರಕ್ಕೆ ಹೋಗೋದು ಎಷ್ಟು ದುಬಾರಿ ಆಗಿದೆ, ಅಂದ್ರೆ ಮಲ್ಟಿಪ್ಲೆಕ್ಸ್ಗೆ ಹೋದರೆ ತುಂಬ ಖರ್ಚಾಗುತ್ತದೆ. ನಾನೇ ಒಂದು ಸಿನಿಮಾಗೆ ಫ್ಯಾಮಿಲಿನ ಕರೆದುಕಕೊಂಡು ಹೋಗಿದ್ದೆ. ನಾಲ್ಕು ಸಾವಿರ ಖರ್ಚಾಯಿತು. ಸಿನಿಮಾ ಎಂದರೆ ಕಡಿಮೆ ದರದ ಮನರಂಜನೆ ಅಂತ ಒಂದು ಕಾಲದಲ್ಲಿತ್ತು. ಈಗ ಅಷ್ಟೊಂದು ದುಬಾರಿಯಾಗಿದೆ ಎಂದರೆ ಸಾಮಾನ್ಯ ಮನುಷ್ಯನಿಗೆ ಹೋಗೋದು ಕಷ್ಟ ಆಗುತ್ತದೆ’ ಎಂದರು.
65 ವರ್ಷಗಳ ನಂತರ ತೆರೆಯ ಮೇಲೆ ಚೆನ್ನಮ್ಮನ ಸಾಹಸಗಾಥೆ; AI ತಂತ್ರಜ್ಞಾನದಲ್ಲಿ ‘ರಾಣಿ ಚೆನ್ನಮ್ಮ’


