‘ತೀರ್ಥರೂಪ ತಂದೆ’ಯವರ ಜೊತೆಗೆ ಬಂದ ಸಿತಾರಾ …

ಚಂದನವನ, ಸಂದರ್ಶನ, ಸಿನಿ ಸುದ್ದಿ

ಸುಮಾರು ಏಳು ವರ್ಷಗಳೇ ಆಗಿತ್ತು, ಬಹುಭಾಷಾ ನಟಿ ಸಿತಾರಾ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ. ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮಾ ಐ ಲವ್ ಯೂ’ ಚಿತ್ರದಲ್ಲಿ ನಟಿಸಿದ್ದ ಸಿತಾರಾ, ಇದೀಗ ‘ತೀರ್ಥರೂಪ ತಂದೆಯವರಿಗೆ’ ಚಿತ್ರದಲ್ಲಿ ಮತ್ತೊಮ್ಮೆ ನಟಿಸಿದ್ದಾರೆ.

ಒಂದು ಕಾಲದಲ್ಲಿ ಕನ್ನಡದಲ್ಲಿ ಜನಪ್ರಿಯ ಮತ್ತು ಬಹುಬೇಡಿಕೆಯ ನಟಿಯರಲ್ಲೊಬ್ಬರಾಗಿದ್ದ ಸಿತಾರಾ, ವಿಷ್ಣುವರ್ಧನ್‍ ಅಭಿನಯದ ‘ಹಾಲುಂಡ ತವರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ‘ಹಾಲುಂಡ ತವರು’ ಸಿತಾರಾ ಎಂದೇ ಜನಪ್ರಿಯರಾದವರು. ನಂತರ ‘ಧೀರ್ಘ ಸುಮಂಗಲಿ’, ‘ಕರುಳಿನ ಕುಡಿ’, ‘ಬಂಗಾರದ ಕಳಶ’, ‘ಗಣೇಶನ ಗಲಾಟೆ’, ‘ಬಂಗಾರದ ಮನೆ’ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರು ‘ತೀರ್ಥರೂಪ ತಂದೆಯವರಿಗೆ’ ಚಿತ್ರದಲ್ಲಿ ಜಾನಕಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಇದೊಂದು ಅದ್ಭುತವಾದ ಪಾತ್ರ. ನಿರ್ದೇಶಕ ಜಗನ್ನಾಥ್‍ ಅವರು ಕಾಂಟ್ಯಾಕ್ಟ್ ಮಾಡಿ, ಇಂಥದ್ದೊಂದು ಪಾತ್ರವನ್ನು ಮಾಡಬೇಕು ಎಂದು ಕೇಳಿಕೊಂಡರು. ‘ಹಾಲುಂಡ ತವರು’ ಚಿತ್ರದಲ್ಲಿ ಜನ ನನ್ನನ್ನು ಒಪ್ಪಿಕೊಂಡಂತೆ, ಈ ಚಿತ್ರದಲ್ಲೂ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಕಾರಣ ಕಥೆ ಮತ್ತು ಪಾತ್ರ ಎನ್ನುವ ಸಿತಾರಾ, ‘ನನಗೆ ಕಥೆ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಯಿತು. ಇದೊಂದು ಭಾವನಾತ್ಮಕ ಕಥೆ. ‘ನಾನು ನನ್ನ ಕನಸು’ ಚಿತ್ರದ ನಂತರ ರಾಜೇಶ್‍ ನಟರಂಗ ಜೊತೆಗೆ ನಟಿಸಿದ್ದೇನೆ’ ಎಂದರು.

ಇದಲ್ಲದೆ, ಅವರು ಸದ್ದಿಲ್ಲದೆ ಇನ್ನೂ ಒಂದು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದು ವಿಶೇಷ. ‘ಕನ್ನಡದಲ್ಲಿ ದೊಡ್ಡ ಗ್ಯಾಪ್‍ ಆಯಿತು. ಬೇರೆ ಭಾಷೆಗಳಲ್ಲಿ ಸತತವಾಗಿ ಕೆಲಸ ಮಾಡುತ್ತಲೇ ಇದ್ದೇನೆ. ತೆಲುಗು-ತಮಿಳಿನಲ್ಲಿ ನಟಿಸುತ್ತಲೇ ಇದ್ದೇನೆ. ಮುಂದೆ ಒಳ್ಳೆಯ ಕಥೆಗಳು ಮತ್ತು ಪಾತ್ರಗಳು ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ. ಇದಲ್ಲದೆ, ಪ್ರಕಾಶ್ ರೈ ಜೊತೆಗೆ ‘ಪುರುಷಾವತಾರ’ ಚಿತ್ರದಲ್ಲಿ ನಟಿಸಿದ್ದೇನೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ. ಅದು ಸಹ ಒಳ್ಳೆಯ ಕಥೆ’ ಎಂದರು.

‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶಿಸಿದ್ದು, ಚಿತ್ರದಲ್ಲಿ ನಿಹಾರ್‍ ಮುಕೇಶ್‍, ರಚನಾ ಇಂದರ್‍, ಸಿತಾರಾ, ರಾಜೇಶ್‍ ನಟರಂಗ, ಅಜಿತ್‍ ಹಂದೆ ಮುಂತಾದವರು ನಟಿಸಿದ್ದಾರೆ. ಚಿತ್ರು 2026ರ ಜನವರಿ 01ರಂದು ಬಿಡುಗಡೆಯಾಗುತ್ತಿದೆ.

ನಾನು ತುಂಬಾ ಒಳ್ಳೆಯವ್ನು; ಅದಕ್ಕೆ ‘ಬಿಗ್‍ ಬಾಸ್‍’ನಿಂದ ಓಡಿಸಿಬಿಟ್ರು: ಕಾಕ್ರೋಚ್‍ ಸುಧಿ

Discover more from KannadaScreens

Subscribe now to keep reading and get access to the full archive.

Continue reading