ನಾನು ತುಂಬಾ ಒಳ್ಳೆಯವ್ನು; ಅದಕ್ಕೆ ‘ಬಿಗ್‍ ಬಾಸ್‍’ನಿಂದ ಓಡಿಸಿಬಿಟ್ರು: ಕಾಕ್ರೋಚ್‍ ಸುಧಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಕಾಕ್ರೋಚ್‍ ಸುಧಿ ಈ ಬಾರಿಯ ‘ಬಿಗ್‍ ಬಾಸ್‍’ ಕಾರ್ಯಕ್ರಮಕ್ಕೆ ಹೋದಾಗ, ಅವರು ಒಂದಿಷ್ಟು ಕಾಲ ಮನೆಯಲ್ಲಿ ಉಳಿಯಬಹುದು, ಫೈನಲ್‍ವರೆಗೂ ತಲುಪಬಹುದು ಎಂದು ಬಹಳಷ್ಟು ಜನರಿಗೆ ಅನಿಸಿತ್ತು. ಅದಕ್ಕೆ ಕಾರಣ, ಸುಧಿ ಮಾತುಗಳು. ತಮ್ಮ ಮಾತಿನ ಮೂಲಕ ಸಖತ್ ಮಜ ಕೊಡುವ ಸುಧಿ, ಅದರಿಂದಲೇ ಒಂದಿಷ್ಟು ಕಾಲ ಉಳಿಯಬಹುದು ಎಂದನಿಸಿತ್ತು. ಆದರೆ, ಅದು ಉಲ್ಟಾ ಆಗಿ, ಅವರು ಬಹಳ ಬೇಗ ಮನೆಯಿಂದ ಹೊರಬರುವಂತಾಯಿತು.

ಇಷ್ಟಕ್ಕೂ ಸುಧಿ ವಾಪಸ್ಸು ಬಂದಿದ್ದು ಯಾಕೆ? ನಾನು ಜಗಳ ಆಡೋದಿಲ್ಲ ಎಂದು ವಾಪಸ್ಸು ಕಳಿಸಿಬಿಟ್ಟರು ಎನ್ನುತ್ತಾರೆ ಸುಧಿ. ಈ ಕುರಿತು ಮಾತನಾಡುವ ಅವರು,’‘ಬಿಗ್‍ ಬಾಸ್‍’ನಲ್ಲಿ ನಾನು ತುಂಬಾ ಒಳ್ಳೆಯವನು ಅಂತ ವಾಪಸ್ಸು ಕಳಿಸಿಬಿಟ್ಟರು. ಇವನು ಜಗಳ ಆಡೋದಿಲ್ಲ, ಕಿತ್ತಾಡಲ್ಲ ಎಂದು ಕಳಿಸಿಬಿಟ್ಟರು’ ಎನ್ನುತ್ತಾರೆ.

‘ಬಿಗ್‍ ಬಾಸ್‍’ ಮನೆಯಿಂದ ಸುಧಿ ಹೊರಬರುತ್ತಿದ್ದಂತೆಯೇ ಮೊದಲು ಭಾಗವಹಿಸಿದ ಪತ್ರಿಕಾಗೋಷ್ಠಿ ಎಂದರೆ ಅದು ‘ಸೂರಿ ಅಣ್ಣ’. ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ಸುಧಿ, ಚಿತ್ರದ ಟೀಸರ್‍ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

ಚಿತ್ರದ ಕುರಿತು ಮಾತನಾಡುವ ಸುಧಿ, ‘ನಾಯಕಿ ಸಂಭ್ರಮಶ್ರೀ ಒಬ್ಬರನ್ನು ಬಿಟ್ಟು, ನನಗೆ ಈ ಚಿತ್ರತಂಡದಲ್ಲಿ ಎಲ್ಲರೂ ಗೊತ್ತು. ಅದ್ಯಾಕೋ ಗೊತ್ತಿಲ್ಲ, ನಾಯಕಿ ಜೊತೆಗೆ ಒಂದು ದೃಶ್ಯ ಸಹ ಸರಿಯಾಗಿ ಸಿಗುವುದಿಲ್ಲ. ಹೀರೋಯಿನ್‍ ಜೊತೆಗೆ ಲಂಚ್‍ಗೆ ಹೋಗಿರುವ ತರಹ, ಮಂಚ್‍ ತಿನ್ನುವ ತರಹ ಒಂದು ದೃಶ್ಯವೂ ಇರುವುದಿಲ್ಲ. ಬರೀ ಮಚ್ಚು ಇಟ್ಟುಕೊಂಡು ಅಲೆದಾಡುವ ದೃಶ್ಯಗಳಷ್ಟೇ ಬರುತ್ತವೆ. ಅದರಲ್ಲೂ ಮೇಡಂಗೆ ನಿಜವಾದ ರೌಡಿಗಳ ಕಂಡರೆ ಭಯವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಿನಿಮಾ ರೌಡಿಗಳನ್ನು ನೋಡಿದರೆ ಭಯ. ಅದಕ್ಕೆ ಸರಿಯಾಗಿ, ಇವತ್ತಿನವರೆಗೂ ಒಂದು ಹಾಯ್‍ ಸಹ ಹೇಳಿಲ್ಲ. ನಾವು ಸಹ ಒಳ್ಳೆಯವರು. ಸಿನಿಮಾದಲ್ಲಿ ಮಾತ್ರ ಇಂಥಾ ನೆಗೆಟಿವ್‍ ಪಾತ್ರಗಳು ಸಿಗುತ್ತಿವೆ’ ಎನ್ನುತ್ತಾರೆ.

ಚಿತ್ರದ ನಾಯಕ ಕಂ ನಿರ್ದೇಶಕ ‘ಸಲಗ’ ಸೂರಿ ಕುರಿತು ಮಾತನಾಡುವ ಸುಧಿ, ‘‘ಸಲಗ’ದಿಂದ ನನ್ನ ಮತ್ತು ಸೂರಿ ಅವರ ಪರಿಚಯ. ನಮ್ಮಿಬ್ಬರ ನಡುವೆ ಸಲುಗೆ ಇದೆ. ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಅವರು ಜ್ಯೂನಿಯರ್‍ ಕಲಾವಿದರಾಗಿ ನಟಿಸಿ, ಇಲ್ಲಿಗೆ ಬಂದಿದ್ದಾರೆ. ಈ ಹಿಂದೆ ಒಂದು ಚಿತ್ರದಲ್ಲಿ ಅವರ ಜೀವ ಹೋಗಿಬಿಡಬೇಕಿತ್ತು. ಅಂದು ಜಾನಿ ಮಾಸ್ಟರ್‍ ಇದ್ದಿದ್ದರಿಂದ ಬದುಕಿಬಿಟ್ರು. ನಮಗೂ ಬಹಳಷ್ಟು ಬಾರಿ ಉಸಿರು ಹೋಗಿ, ಉಸಿರು ಬಂದಿದೆ. ದೂರದಿಂದ ನೋಡೋರಿಗೆ, ಫೈಟ್‍ ಸುಳ್ಳು ಎಂದನಿಸಬಹುದು. ಆದರೆ, ಒಂದಿಂಚು ಮುಂದೆ ಬಂದರೆ ಏಟು ಬೀಳುತ್ತದೆ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು’ ಎನ್ನುತ್ತಾರೆ.

ಸುಧಿಗೆ ಪ್ರತೀ ಚಿತ್ರದಲ್ಲೂ ನೆಗೆಟಿವ್‍ ಪಾತ್ರಗಳಾದರೂ, ಹೆಸರುಗಳು ಮಾತ್ರ ವಿಭಿನ್ನವಾಗಿರುತ್ತವೆ. ‘ಸೂರಿ ಅಣ್ಣ’ ಚಿತ್ರದಲ್ಲಿ ಅವರ ಹೆಸರು ಜಪಾನ್‍ ಅಂತೆ. ಯಾಕೆ ಅಂಥದ್ದೊಂದು ಹೆಸರು ಎಂದರೆ, ‘ಏನೋ ಕರೆಯಲಿ. ಸಾಯಂಕಾಲ ಆದರೆ ಕಾಸು ಸರಿಯಾಗಿ ಕೊಡಲಿ ಎನ್ನುತ್ತಾರೆ. ‘ರಾಜ ಎಂದು ಹೆಸರಿಟ್ಟುಕೊಂಡು, ಜೇಬಲ್ಲ ೆರಡು ರೂಪಾಯಿ ಇಲ್ಲದಿದ್ದರೆ, ಅಂಥ ಹೆಸರು ಯಾಕೆ ಬೇಕು. ಏನೋ ಕರೆದುಕೊಡಲಿ, ಕಾಸು ಮಾತ್ರ ಸರಿಯಾಗಿ ಕೊಡಲಿ’ ಎನ್ನುತ್ತಾರೆ.

ಇನ್ನು, ಇದೇ ಸಂದರ್ಭದಲ್ಲಿ ತಮ್ಮ ಹೆಸರಿನಿಂದ ಕಾಕ್ರೋಚ್‍ ಎಂಬ ಪದವನ್ನು ಕೈಬಿಡುವಂತೆ ಲಹರಿ ವೇಲು ಮನವಿ ಸಲ್ಲಿಸಿದರು. ಅದನ್ನು ಒಪ್ಪದ ಸುಧಿ, ತಾನು ಕಾಕ್ರೋಚ್‍ ಸುಧಿ ಎಂದು ಗುರುತಿಸಿಕೊಳ್ಳೋಕೆ ಇಷ್ಟಪಡುವುದಾಗಿ ಹೇಳುತ್ತಾರೆ. ‘ನಾನು ಸತ್ತಾಗ Flexನಲ್ಲಿ ಹೆಸರು ಹಾಕಬೇಕಾದರೂ ಕಾಕ್ರೋಚ್ ಸುಧಿ ಅಂತ ಹಾಕಿ. ಏಕೆಂದರೆ, ಅದು ನನ್ನ ಗುರುಗಳು ಸೂರಿ ಇಟ್ಟ ಹೆಸರು. ನಮ್ಮಮ್ಮ ಹೇಳಿದರೂ ಹೆಸರು ಬದಲಾಯಿಸುವುದಿಲ್ಲ. ನಾನು ಕಾಕ್ರೋಚ್‍ ಸುಧಿ ಎಂದು ಗುರುತಿಸಿಕೊಳ್ಳುವುದಕ್ಕೆ ಇಷ್ಟಡ್ತೀನಿ’ ಎನ್ನುತ್ತಾರೆ.

ಹೊಗಳಿಕೆ, ಬಹುಪರಾಕ್‍ಗಳ ಮಧ್ಯೆ ‘ಮಾರ್ಕ್’ ಟ್ರೇಲರ್ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading