ಜನ ಚಿತ್ರಮಂದಿರಕ್ಕೆ ಬರಬೇಕೆಂದರೆ ಇನ್ನಷ್ಟು sleeper hitಗಳು ಬೇಕು!

ಚಂದನವನ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

• ಚೇತನ್‍ ನಾಡಿಗೇರ್

ಗುರುವಾರದವರೆಗೂ ಹೆಚ್ಚು ಜನರಿಗೆ ಅಂಥದ್ದೊಂದು ಚಿತ್ರ ಬರುತ್ತಿದೆ ಎಂದೇ ಗೊತ್ತಿರಲಿಲ್ಲ. ‘ಸು ಫ್ರಮ್‍ ಸೋ’ ಎಂಬ ಹೆಸರೇ ಸರಿಯಾಗಿ ಕೇಳಿರಲಿಲ್ಲ. ಅಷ್ಟೇಕೆ, ಚಿತ್ರದ ಹೆಸರು ಹೇಳುವುದಕ್ಕೂ ಸರಿಯಾಗಿ ಬರುತ್ತಿರಲಿಲ್ಲ. ಇನ್ನು, ಚಿತ್ರದ ಹೀರೋ ಯಾರು? ಯಾರೆಲ್ಲಾ ನಟಿಸಿದ್ದಾರೆ? ನಿರ್ದೇಶಕರು ಯಾರು? ಮುಂತಾದ ಯಾವುದೇ ಪ್ರಶ್ನೆಗೂ ಸರಿಯಾಗಿ ಉತ್ತರವಿರಲಿಲ್ಲ. ಈ ಚಿತ್ರದ ನಿರ್ಮಾಪಕರಲ್ಲಿ ರಾಜ್‍ ಬಿ. ಶೆಟ್ಟಿ ಸಹ ಒಬ್ಬರು ಎಂಬ ವಿಷಯ ಬಿಟ್ಟರೆ, ಆ ಚಿತ್ರದಲ್ಲಿ ಅವರು ನಟಿಸಿರುವುದು ಗೊತ್ತಿರಲಿಲ್ಲ. ಒಟ್ಟಾರೆ, ‘ಸು ಫ್ರಮ್‍ ಸೋ’ ಚಿತ್ರದ ಬಗ್ಗೆ ಹೆಚ್ಚು ಸದ್ದು, ಸುದ್ದಿ ಎರಡೂ ಇರಲಿಲ್ಲ.

ಆದರೆ, ಚಿತ್ರ ಬಿಡುಡೆಯಾಗಿ ಒಂದು ದಿನ ಆಗುವಷ್ಟರಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಚಿತ್ರ Talk of the town ಎನ್ನುವಂತಾಗಿದೆ. ಚಿತ್ರರಂಗದಲ್ಲಿ ಯಾರು ನೋಡಿದರೂ, ಚಿತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಚಿತ್ರದ ಕಥೆಯ ಬಗ್ಗೆ, ಪಾತ್ರಗಳ ಬಗ್ಗೆ, ಪಾತ್ರಧಾರಿಗಳು, ಮೇಕಿಂಗ್‍ ಎಲ್ಲದರ ಬಗ್ಗೆಯೂ ದೊಡ್ಡ ಚರ್ಚೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಚಿತ್ರದ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಏರಿದೆ. BookMyShowನಲ್ಲಿ ಬುಕ್ಕಿಂಗ್‍ ಜೋರಾಗಿರುವುದಷ್ಟೇ ಅಲ್ಲ, ಭಾನುವಾರದ ಟಿಕೆಟ್‍ಗಳು ಸಹ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿವೆ. ಚಿತ್ರ ಮುಂದೆ ಎಷ್ಟು ಗಳಿಕೆ ಮಾಡುತ್ತದೆ? ಎಷ್ಟು ದೊಡ್ಡ ಯಶಸ್ಸಾಗುತ್ತದೆ ಗೊತ್ತಿಲ್ಲ. ಆದರೆ, ಸದ್ಯದ ಮಟ್ಟಿಗೆ ಯಾರೂ ನಿರೀಕ್ಷಿಸದ ಒಂದು sleeper hit ಕನ್ನಡ ಚಿತ್ರರಂಗಕ್ಕೆ ಸಿಕ್ಕಿದೆ. ಇದನ್ನೆಲ್ಲಾ ನೋಡಿ ಚಿತ್ರರಂಗದವರು, ಮಾಧ್ಯಮದವರು ಒಂದೇ ದಿನದಲ್ಲಿ ಬದಲಾವಣೆ ಆಗಿದ್ದಾದರೂ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.

‘ಸು ಫ್ರಮ್‍ ಸೋ’ ಚಿತ್ರಕ್ಕೆ ಸದ್ಯ ಅದೆಷ್ಟು ಬೇಡಿಕೆ ಇದೆ ಎಂದರೆ, ಚಿತ್ರ ಶುಕ್ರವಾರ ಬಿಡುಗಡೆಯಾದಾಗ, ಹೆಚ್ಚು ಪ್ರದರ್ಶನಗಳಿರಲಿಲ್ಲ. ಹೆಚ್ಚೆಂದರೆ, 60-70 ಚಿತ್ರಮಂದಿರಗಳಲ್ಲಿ 150 ಪ್ರದರ್ಶನಗಳಿದ್ದವು. ಆದರೆ, ಈಗ ಆ ಸಂಖ್ಯೆ ಡಬ್ಬಲ್‍ ಆಗಿದೆ. ಭಾನುವಾರದ ಪಟ್ಟಿ ನೋಡಿದರೆ, ಚಿತ್ರವು ಬೆಂಗಳೂರಿನಲ್ಲೇ 250ರಿಂದ 300 ಪ್ರದರ್ಶನ ಕಾಣುತ್ತಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ 10ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿವೆ. ಕೆಲವು ಕಡೆ ಬೆಳಿಗ್ಗೆ 6.30ರಿಂದಲೇ ಪ್ರದರ್ಶನ ಶುರುವಾಗಲಿದೆ. ಈ ಪೈಕಿ ಬಹಳಷ್ಟು ಪ್ರದರ್ಶನಗಳು ವೇಗವಾಗಿ ಭರ್ತಿಯಾಗುತ್ತಿವೆ. ಟಿಕೆಟ್‍ ಬೆಲೆ 700ರೂ.ವರೆಗೂ ಕೆಲವು ಕಡೆ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಪರಭಾಷಾ ಚಿತ್ರಗಳ ವಿಷಯದಲ್ಲಿ ಈ ರೀತಿ ಆಗುತ್ತಿತ್ತು. ಕನ್ನಡ ಚಿತ್ರವೊಂದಕ್ಕೆ, ಅದರಲ್ಲೂ ದೊಡ್ಡ ಸ್ಟಾರ್‍ ನಟರೇ ಇಲ್ಲದ, ಹೊಸಬರ ಚಿತ್ರವೊಂದಕ್ಕೆ ಈ ರೀತಿ ಆಗುತ್ತಿರುವುದು ಅತಿ ಅಪರೂಪ.

ಒಂದು ಕಡೆ ಚಿತ್ರಕ್ಕೆ ಪ್ರದರ್ಶನ ಮತ್ತು ಪ್ರೇಕ್ಷಕರ ಸಂಖ್ಯೆ ಏರುತ್ತಿದ್ದರೆ, ಇದರಿಂದ ಬೇರೆ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಏಟು ಬೀಳುತ್ತಿದೆ. ಶುಕ್ರವಾರ ಪವನ್‍ ಕಲ್ಯಾಣ್‍ ಅಭಿನಯದ ‘ಹರಿಹರ ವೀರಮಲ್ಲು’ ಚಿತ್ರ ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು. ಆದರೆ, ಯಾವಾಗ ಚಿತ್ರ ಸುಮಾರು ಎಂಬ ಸುದ್ದಿ ಹಬ್ಬಿತೋ, ಅಲ್ಲಿಂದ ‘ಸು ಫ್ರಮ್‍ ಸೋ’ಗೆ ಬೇಡಿಕೆ ಹೆಚ್ಚಿದೆ. ಕ್ರಮೇಣ ಹಲವು ಚಿತ್ರಮಂದಿರಗಳಲ್ಲಿ ‘ಹರಿಹರ ವೀರಮಲ್ಲು’ ಬದಲು ‘ಸು ಫ್ರಮ್‍ ಸೋ’ ಕಾಣಿಸಿಕೊಂಡಿದೆ. ಆ ಚಿತ್ರದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿ, ಈ ಚಿತ್ರದ ಪ್ರದರ್ಶನ ಏರಿದೆ. ಬರೀ ‘ಹರಿಹರ ವೀರಮಲ್ಲು’ ಚಿತ್ರವಷ್ಟೇ ಅಲ್ಲ, ಕಳೆದ ವಾರ ಬಿಡುಗಡೆಯಾಗಿ ಸ್ವಲ್ಪ ಸದ್ದು ಮಾಡುತ್ತಿದ್ದ ‘ಎಕ್ಕ’ ಮತ್ತು ‘ಜೂನಿಯರ್’ ಚಿತ್ರಗಳಿಗೂ ಪೆಟ್ಟು ಬಿದ್ದಿದೆ. ಆ ಎರಡೂ ಚಿತ್ರಗಳ ಒಂದಿಷ್ಟು ಪ್ರದರ್ಶನಗಳು ಸಹ ‘ಸು ಫ್ರಮ್‍ ಸೋ’ ಪಾಲಾಗಿವೆ ಎಂಬುದು ಸುದ್ದಿ. ಭಾನುವಾರ ‘ಎಕ್ಕ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಸುಮಾರು 150 ಪ್ರದರ್ಶಗಳು ಇದ್ದರೆ, ‘ಜೂನಿಯರ್‍’ ಚಿತ್ರದ ಪ್ರದರ್ಶನ 30ಕ್ಕೆ ಕುಸಿದಿದೆ.

ಮೊದಲೇ ಹೇಳಿದಂತೆ ‘ಸು ಫ್ರಮ್‍ ಸೋ’ ಬಿಡುಗಡೆಯಾದಾಗ, ಚಿತ್ರದ ಬಗ್ಗೆ ಅಷ್ಟೊಂದು ಕ್ರೇಜ್‍ ಇರಲಿಲ್ಲ. ಅಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷಿಸಿರಲೂ ಇಲ್ಲ. ಟ್ರೇಲರ್‍ ನೋಡಿದವರು, ಚಿತ್ರ ವಿಭಿನ್ನವಾಗಿರಬಹುದು ಎಂದು ಅಂದಾಜಿಸಿರಬಹುದು. ಆದರೆ, ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಏಕೆಂದರೆ, ಚಿತ್ರದ ಪೋಸ್ಟರ್‍ಗಳಲ್ಲಿ ಯಾರ ಮುಖವೂ ಸ್ಪಷ್ಟವಿರಲಿಲ್ಲ. ಚಿತ್ರದಲ್ಲಿ ನಟಿಸಿರುವವರೆಲ್ಲಾ ಕರಾವಳಿಯಲ್ಲಿ ದೊಡ್ಡ ಹೆಸರು ಮಾಡಿರಬಹುದು. ಆದರೆ, ಮಿಕ್ಕ ಭಾಗಗಳಲ್ಲಿ ಹೆಚ್ಚು ಪರಿಚಿತರಲ್ಲ. ಕೆಲವರು ಕೆಲವು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ, ಅವರ ಪರಿಚಯ ದೊಡ್ಡ ಮಟ್ಟದಲ್ಲಿ ಆಗಿರಲಿಲ್ಲ. ಅಷ್ಟಾದರೂ ಚಿತ್ರ ಈ ಮಟ್ಟಿಗೆ ಗಮನಸೆಳೆದಿದ್ದು ಹೇಗೆ?

ಪ್ರಮುಖವಾಗಿ ಎರಡು ಕಾರಣಗಳು. ಒಂದು ಕಂಟೆಂಟ್‍. ಇನ್ನೊಂದು ಪ್ರಚಾರ. ಹಾರರ್‍ ಕಾಮಿಡಿಗಳು ಸಾಕಷ್ಟು ಬಂದಿವೆ. ಆದರೆ, ಕರಾವಳಿ ಸೊಗಡಿನ ಮತ್ತು ಪ್ರಮುಖವಾಗಿ ಗ್ರಾಮೀಣ ಹಿನ್ನೆಲೆಯ ಹಾರರ್‍ ಕಾಮಿಡಿ ಚಿತ್ರ ಬಂದಿರಲಿಲ್ಲ. ಇಲ್ಲಿ ಕಥೆ, ಪಾತ್ರಗಳು, ಪಾತ್ರಧಾರಿಗಳು ಎಲ್ಲವೂ ವಿಭಿನ್ನವಾಗಿವೆ. ಮೇಲಾಗಿ ಚಿತ್ರ ಆರಂಭದಿಂದ ಕೊನೆಯವರೆಗೂ ನಗಿಸುತ್ತಿದೆ. ಈ ತರಹ ಚಿತ್ರದುದ್ದಕ್ಕೂ ನಗಿಸುವ ಚಿತ್ರಗಳು ಇತ್ತೀಚೆಗೆ ಬಂದಿರಲಿಲ್ಲ. ಎರಡನೆಯದು, ಪ್ರಚಾರ. ಚಿತ್ರತಂಡದವರು ಚಿತ್ರದ ಪ್ರಚಾರಕ್ಕೆ ಲಕ್ಷಾಂತರ ಖರ್ಚು ಮಾಡಲಿಲ್ಲ. ಗಂಟೆಗಟ್ಟಲೆ ಸಂದರ್ಶನ ಕೊಡಲಿಲ್ಲ. ಚಿತ್ರ ಹಾಗೆ ಬಂದಿದೆ, ಹೀಗೆ ಬಂದಿದೆ ಎಂದು ಕೊಚ್ಚಿಕೊಳ್ಳಲಿಲ್ಲ. ಸೀದಾ Paid Premiere Showಗಳ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ಬೇರೆಬೇರೆ ಊರುಗಳಲ್ಲಿ ಒಂದಿಷ್ಟು ಜನರಿಗೆ ಚಿತ್ರ ತೋರಿಸಿದರು. ಇಷ್ಟಪಟ್ಟವರು ತಮ್ಮ ಬಾಯ್ಮಾತಿನ ಪ್ರಚಾರದ ಮೂಲಕ ಇನ್ನಷ್ಟು ಜನರನ್ನು ಕರೆತರುತ್ತಿದ್ದಾರೆ.

ಇಂಥದ್ದೇ ಒಂದು ತಂತ್ರ ಕೆಲವು ವರ್ಷಗಳ ಹಿಂದೆ ‘ಕಾಂತಾರ’ ಚಿತ್ರದಲ್ಲೂ ಯಶಸ್ವಿಯಾಗಿತ್ತು. ಚಿತ್ರದ ಬಿಡುಗಡೆಗೂ ಮೊದಲೇ ಹಿಂದಿನ ದಿನ Paid Premiere Showಗಳಲ್ಲಿ ಚಿತ್ರ ನೋಡಿದ್ದ ಹಲವರು, ಬಿಡುಗಡೆಯ ದಿನದಿಂದಲೇ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಶುರು ಮಾಡಿದರು. ಅಲ್ಲಿಂದ ಚಿತ್ರದ ಗತಿಯೇ ಬದಲಾಯಿತು. ಕನ್ನಡದಲ್ಲಿ ತಯಾರಾದ ಚಿತ್ರ, ಕೊನೆಗೆ ಪ್ಯಾನ್‍ ಇಂಡಿಯಾ ಚಿತ್ರವಾಯಿತು. 15 ಕೋಟಿಯಲ್ಲಿ ತಯಾರಾಗಿದ್ದು, 400 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿತು. ಆ ನಂತರ ಸಹ ಕೆಲವು ಚಿತ್ರಗಳನ್ನು ಇದೇ ತರಹದ ತಂತ್ರವನ್ನು ಬಳಸಿಕೊಂಡವು. ಆದರೆ, ಇಲ್ಲಿ ಕಂಟೆಂಟ್‍ ಮತ್ತು ಪ್ರಚಾರ ಎರಡೂ ಬಹಳ ಮುಖ್ಯ. ಯಾವುದೋ ಒಂದು ಇಲ್ಲದಿದ್ದರೂ, ಚಿತ್ರ ಗೆಲ್ಲುವುದಿಲ್ಲ. ಅದರಲ್ಲೂ ಚಿತ್ರ ಸಂಪೂರ್ಣವಾಗಿ ಹಿಡಿಸಿದರೆ ಮಾತ್ರ ಪ್ರೇಕ್ಷಕರು ಇನ್ನೊಬ್ಬರಿಗೆ ಚಿತ್ರದ ಬಗ್ಗೆ ಹೇಳುತ್ತಾರೆ. ಈ ಬಾಯ್ಮಾತಿನ ಪ್ರಚಾರದಿಂದ ಮಾತ್ರ ಚಿತ್ರ ಇನ್ನಷ್ಟು ಜನರಿಗೆ ತಲುಪುತ್ತದೆ. ಆಗ ಪ್ರೇಕ್ಷಕರ ಸಂಖ್ಯೆ multiply ಆಗುತ್ತದೆ. ‘ಸು ಫ್ರಮ್‍ ಸೋ’ ಚಿತ್ರಕ್ಕೆ ಆಗಿರುವುದು ಅದೇ.

ಒಂದು ಕಡೆ ಯಶಸ್ಸಿನ ಖುಷಿಯ ನಡುವೆಯೇ, ಚಿತ್ರದ ಕೆಲವು ಪ್ರದರ್ಶನಗಳನ್ನು ಮೊದಲೇ ಬ್ಲಾಕ್‍ ಮಾಡಲಾಗಿತ್ತು, ಕೆಲವರಿಗೆ ಉಚಿತವಾಗಿ ತೋರಿಸಲಾಗಿತ್ತು ಎಂಬ ಆರೋಪಗಳು ಇವೆ. ಇತ್ತೀಚಿನ ಚಿತ್ರವನ್ನು ಉಚಿತವಾಗಿ ತೋರಿಸುವುದು ಪ್ರಚಾರದ ತಂತ್ರವೇ ಆಗಿ ಹೋಗಿದೆ ಮತ್ತು ಎಲ್ಲಾ ಚಿತ್ರಗಳನ್ನು ಆರಂಭದಲ್ಲಿ ಜನರನ್ನು ಸೆಳೆಯುವುದಕ್ಕೆ ಉಚಿತವಾಗಿ ತೋರಿಸಲಾಗುತ್ತದೆ. ಹಾಗೆ ತೋರಿಸಿದ ಚಿತ್ರಗಳು ಈ ಮಟ್ಟದಲ್ಲಿ ಜನರನ್ನು ಕರೆತಂದಿಲ್ಲ ಎಂಬುದು ಗಮನಾರ್ಹ. ಚಿತ್ರವೊಂದು ಹಾಗೆ ಸೆಳೆಯುತ್ತದೆ ಎಂದರೆ ಅದರಲ್ಲಿ ಏನೋ ಇರಲೇಬೇಕು. ಇವತ್ತಿನ ಕಾಲಘಟ್ಟದಲ್ಲಿ ಸುಮ್ಮನೆ ಗಿಮಿಕ್ ಮಾಡಿ ಜನರನ್ನು ಸೆಳೆಯುವುದಕ್ಕೆ ಸಾಧ್ಯವಿಲ್ಲ. ಆ ಮಟ್ಟಕ್ಕೆ, ‘ಸು ಫ್ರಮ್ ಸೋ’ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದು ಬರೀ ‘ಸು ಫ್ರಮ್ ಸೋ’ಗೆ ಮಾತ್ರ ಸೀಮಿತವಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಇಂಥ ಹಲವು sleeper hitಗಳು ಸಿಗುತ್ತವೆ. ಒಂದು ಕಡೆ ಸ್ಟಾರ್ ಚಿತ್ರಗಳು ನಿರೀಕ್ಷೆ ಹುಟ್ಟಿಸಿ ತೀವ್ರವಾಗಿ ಸೋತರೆ, ಇನ್ನೊಂದು ಕಡೆ ಯಾವುದೇ ನಿರೀಕ್ಷೆ ಇಲ್ಲದ ಕೆಲವು ಚಿತ್ರಗಳು surprise hit ಆದ ಉದಾಹರಣೆಗಳಿವೆ. ಹೊಸ ಉದಾಹರಣೆ ಎಂದರೆ, ಕಳೆದ ವಾರ ಬಿಡುಗಡೆಯಾದ ಹಿಂದಿಯ ‘ಸೈಯಾರಾ’ ಮೊದಲ ವಾರ 170 ಕೋಟಿ ರೂ. ಗಳಿಕೆ ಮಾಡಿದೆ. ನಿರ್ದೇಶಕ ಮೋಹಿತ್‍ ಸೂರಿ ಬಿಟ್ಟರೆ ಮಿಕ್ಕಂತೆ ಬಿಟ್ಟರೆ, ನಾಯಕ-ನಾಯಕಿ ಹೊಸಬರು. ಈ ಚಿತ್ರ ಇಂಥದ್ದೊಂದು ದೊಡ್ಡ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಈ ಚಿತ್ರದ ಯಶಸ್ಸು ನೋಡಿ ಬಾಲಿವುಡ್‍ ದಂಗಾಗಿದೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಈ ಚಿತ್ರದ ಬಗ್ಗೆ ಚರ್ಚೆಯಾಗುತ್ತಿದೆ. ಎರಡು ತಿಂಗಳ ಹಿಂದೆ ಬಿಡುಗಡೆಯಾದ ‘ಲವ್‍ ಟುಡೆ’ ಚಿತ್ರದಲ್ಲಿ ಶಶಿಕುಮಾರ್‍, ಸಿಮ್ರಾನ್‍ರಂತಹ ಹಿರಿಯರಿದ್ದರೂ, ಚಿತ್ರದ ಹಿಂದಿದ್ದು ಹೊಸಬರು. ಏಳು ಕೋಟಿ ರೂ.ಗಳಲ್ಲಿ ನಿರ್ಮಾಣವಾದ ಚಿತ್ರ 90 ಕೋಟಿ ರೂ. ಮಾಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಮಿಳಿನ ‘ಲವ್‍ ಟುಡೆ’, ತೆಲುಗಿನ ‘ಕೋರ್ಟ್’, ಮಲಯಾಳಂನ ‘ಪ್ರೇಮಲು’, ‘ಮಂಜುಮ್ಮೆಲ್‍ ಬಾಯ್ಸ್’ ಇವೆಲ್ಲವೂ ಹೊಸಬರ ಕಡಿಮೆ ಬಜೆಟ್‍ನ ಚಿತ್ರಗಳೇ. ಆದರೆ, ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಚಿತ್ರ ಯಶಸ್ಸು ಪಡೆದಿರುವುದಷ್ಟೇ ಅಲ್ಲ, ದೊಡ್ಡ ಗಳಿಕೆ ಮಾಡಿದೆ.

‘ಸು ಫ್ರಮ್‍ ಸೋ’ಗೆ ಹೀಗೆ ಜನ ಮುಗಿಬೀಳುತ್ತಿರುವುದು ನೋಡಿದರೆ, ಒಳ್ಳೆಯ ಚಿತ್ರಗಳನ್ನು ಮಾಡಿದರೆ ಪ್ರೇಕ್ಷಕ ವರ್ಗ ಇದ್ದೇ ಇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಸುಳ್ಳು ಪ್ರಚಾರದಿಂದ ಜನರಿಗೆ ಚಿತ್ರಗಳ ಬಗ್ಗೆ ನಂಬಿಕೆ ಹೋಗಿದೆ. ನಂಬಿಕೆ ಬರುವುದಕ್ಕೆ ಇನ್ನಷ್ಟು ವಿಭಿನ್ನ ಪ್ರಯತ್ನಗಳಾಗಬೇಕು, ಮತ್ತಷ್ಟು sleeper hitಗಳು ಬೇಕು. ಇಂಥ ಚಿತ್ರಗಳು ಹೆಚ್ಚಾದರೆ, ಜನ ತಾವಾಗಿಯೇ ಚಿತ್ರ ನೋಡುವುದಕ್ಕೆ ಚಿತ್ರಮಂದಿರಗಳಿಗೆ ಬರುವುದರಲ್ಲಿ ಸಂದೇಹವಿಲ್ಲ.

50 ವರ್ಷಗಳ ಸಂಭ್ರಮದಲ್ಲಿ ವಜ್ರೇಶ್ವರಿ ಕಂಬೈನ್ಸ್?

Discover more from KannadaScreens

Subscribe now to keep reading and get access to the full archive.

Continue reading